ದುಬೈ: ನಾಳೆ (ಭಾನುವಾರ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ 2025 ರ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮೊದಲು ನಡೆದ ಲೀಗ್ ಹಾಗೂ ಸೂಪರ್ 4 ಹಂತದ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಹಾಗಿದ್ದರೆ, ಟೂರ್ನಿಯಲ್ಲಿ ಉಭಯ ತಂಡಗಳು ಫೈನಲ್‌ಗೆ ಬಂದ ಹಾದಿ ಹೇಗಿತ್ತು ಎಂಬುದನ್ನು ನೋಡೋಣ ಬನ್ನಿ.
ಭಾರತ–ಯುಎಇ
ಯುಎಇ ವಿರುದ್ಧ ನಡೆದ ತನ್ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸುಲಭವಾಗಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಯುಎಇ ಭಾರತಕ್ಕೆ 58 ರನ್‌ಗಳ ಗುರಿ ನೀಡಿತ್ತು. ಸುಲಭ ಗುರಿ ಬೆನ್ನಟ್ಟಿದ್ದ ಭಾರತ 4.3 ಓವರ್‌ಗಳಲ್ಲಿ ಗೆಲುವು ಸಾಧಿಸಿತ್ತು. ಸ್ಪಿನ್ನರ್ ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಭಾರತ–ಪಾಕ್
ಲೀಗ್ ಹಂತದ ಪಂದ್ಯದಲ್ಲಿ ನಡೆದ ಉಭಯ ತಂಡಗಳ ಮುಖಾಮುಖಿಯಲ್ಲಿ ಭಾರತ ಸುಲಭ ಜಯ ದಾಖಲಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನೀಡಿದ್ದ 128 ರನ್‌ಗಳ ಗುರಿಯನ್ನು ಭಾರತ ತಂಡ ಕೇವಲ 15.5 ಓವರ್‌ಗಳಲ್ಲಿ ಮುಟ್ಟುವ ಮೂಲಕ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಕುಲದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಭಾರತ–ಒಮಾನ್
ಭಾರತ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿ ಒಮಾನ್ ತಂಡಕ್ಕೆ 189 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಒಮಾನ್ 167 ರನ್ ಗಳಿಸಿ 21 ರನ್‌ಗಳ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಭಾರತ–ಪಾಕ್ ಸೂಪರ್ 4 ಪಂದ್ಯ
ಲೀಗ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದ ಭಾರತ ತಂಡ, ಸೂಪರ್ 4 ಪಂದ್ಯದಲ್ಲಿ ಕೂಡ ಸುಲಭ ಗೆಲುವು ದಾಖಲಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಭಾರತಕ್ಕೆ 172 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಭಾರತ 18.5 ಓವರ್‌ಗಳಲ್ಲಿ ಮುಟ್ಟುವ ಮೂಲಕ ಗೆಲುವು ಸಾಧಿಸಿತ್ತು. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಭಾರತ–ಬಾಂಗ್ಲಾ
ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 41 ರನ್‌ಗಳನ್ನು ಗೆಲುವು ಸಾಧಿಸಿ ಫೈನಲ್‌ನಲ್ಲಿ ಸ್ಥಾನ ಖಾಯಂಗೊಳಿಸಿತ್ತು. ಈ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಭಾರತ–ಶ್ರೀಲಂಕಾ
ತನ್ನ ಕೊನೆಯ ಸೂಪರ್ 4 ಹಂತದ ಪಂದ್ಯದಲ್ಲಿ ಕೂಡ ಟೀಂ ಇಂಡಿಯಾ ಸೂಪರ್ ಓವರ್‌ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಸೋಲಿಲ್ಲದೆ ಫೈನಲ್ ತಲುಪಿದೆ.
ಪಾಕಿಸ್ತಾನದ ಫೈನಲ್ ಹಾದಿ
ಪಾಕಿಸ್ತಾನ – ಒಮಾನ್
ಪಾಕಿಸ್ತಾನ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಒಮಾನ್ ತಂಡವನ್ನು 93 ರನ್‌ಗಳ ಅಂತರದಲ್ಲಿ ಸೋಲಿಸಿತ್ತು. ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದ ಮೊಹಮ್ಮದ್ ಹ್ಯಾರಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಪಾಕಿಸ್ತಾನ–ಯುಎಇ
ಲೀಗ್‌ನ ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಯುಎಇ ವಿರುದ್ಧ 41 ರನ್‌ಗಳ ಜಯ ಸಾಧಿಸಿ ಸೂಪರ್–4 ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಈ ಪಂದ್ಯದಲ್ಲಿ ಶಾಹಿನ್ ಶಾ ಅಫ್ರಿದಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಪಾಕಿಸ್ತಾನ–ಶ್ರೀಲಂಕಾ ಸೂಪರ್ 4 ಪಂದ್ಯ
ಸೂಪರ್ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋತ ಬಳಿಕ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಆಲ್‌ರೌಂಡರ್ ಹುಸೈನ್ ತಲಾತ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಪಾಕ್–ಬಾಂಗ್ಲಾ ಸೂಪರ್ 4 ಮ್ಯಾಚ್
ತನ್ನ ಕೊನೆಯ ಸೂಪರ್–4 ಹಂತದಲ್ಲಿ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದ ಮ್ಯಾಚ್ ಅನ್ನು ಬಾಂಗ್ಲಾದೇಶದ ವಿರುದ್ಧ 11 ರನ್‌ಗಳ ಅಂತರದಲ್ಲಿ ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.
ಒಂದೆಡೆ ಭಾರತ ಯಾವುದೇ ಸೋಲುಗಳನ್ನು ಕಾಣದೆ ಅಜೇಯವಾಗಿ ಫೈನಲ್ ಪ್ರವೇಶ ಪಡೆದುಕೊಂಡಿದ್ದರೆ. ಪಾಕಿಸ್ತಾನ ತಂಡ ಭಾರತ ವಿರುದ್ಧ ನಡೆದ 2 ಪಂದ್ಯಗಳನ್ನು ಸೋತು ಉಳಿದ ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದೆ. ಮೊದಲ ಎರಡು ಪಂದ್ಯಗಳ ಸಂದರ್ಭದಲ್ಲಿ ಉಭಯ ತಂಡಗಳ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಮೈದಾನದಲ್ಲಿನ ಆಟಗಾರರ ಕೆಲವು ವರ್ತನೆಗಳು ಫೈನಲ್ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.