ಸೂರ್ಯಕುಮಾರ್ ಯಾದವ್
(ಚಿತ್ರ ಕೃಪೆ: X/@BCCI)
ದುಬೈ: ಕಳೆದ ಭಾನುವಾರ ಮುಕ್ತಾಯಗೊಂಡ ಪಾಕಿಸ್ತಾನ ವಿರುದ್ಧದ ಪಂದ್ಯದ ಬಳಿಕ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಂಡದ ಸಹ ಆಟಗಾರರು ಪಾಕಿಸ್ತಾನದ ಆಟಗಾರರ ಜೊತೆ ಕೈಕುಲುಕದಿರುವುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯ ನಡುವೆಯೆ ಸೆ. 21ರಂದು ಉಭಯ ತಂಡಗಳು ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಲಿವೆ.
ಭಾನುವಾರದ ಈ ಮಹತ್ವದ ಪಂದ್ಯಕ್ಕೂ ಮುನ್ನ ಮಾತನಾಡಿದ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೆಲವು ವಿಷಯಗಳನ್ನು ಮಾಡುವುದಕ್ಕಿಂತ ಹೇಳುವುದು ಸುಲಭ ಎಂದು ಅನಗತ್ಯ ಟೀಕೆಗಳ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ 47 ರನ್ ಸಿಡಿಸಿ ಪಂದ್ಯ ಗೆಲ್ಲಲು ಸಹಕಾರಿಯಾಗಿದ್ದರು. ಆದರೆ, ಅಂದಿನ ಪಂದ್ಯದ ಟಾಸ್ ಸಂದರ್ಭದಲ್ಲಿ ಹಾಗೂ ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ತಂಡದ ಸಹ ಆಟಗಾರರು ಪಾಕಿಸ್ತಾನ ಆಟಗಾರರ ಜೊತೆ ಕೈಕುಲುಕಲಿಲ್ಲ ಎಂಬುದು ಚರ್ಚೆಯ ವಿಚಾರವಾಗಿತ್ತು.
ಪಹಲ್ಗಾಮ್ ಉಗ್ರದಾಳಿಯಲ್ಲಿ ಮೃತಪಟ್ಟ ಅಮಾಯಕರನ್ನು ಬೆಂಬಲಿಸುವ ಸಲುವಾಗಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದಾಗಿ ಪಂದ್ಯದ ಬಳಿಕ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದ್ದರು. ಆದರೆ, ಈ ಘಟನೆ ಸೂಪರ್ 4 ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಡುವಿನ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿದೆ.
‘ಅನಗತ್ಯ ಶಬ್ಧ ಬಂದಾಗ ನಿಮ್ಮ ಕೋಣೆಯನ್ನು ಮುಚ್ಚಿ, ಮೊಬೈಲ್ ಆಫ್ ಮಾಡಿಕೊಂಡು ಮಲಗಿಕೊಳ್ಳುವುದು ಉತ್ತಮ ಎಂದು ನಾನು ಭಾವಿಸುತ್ತೇನೆ, ಕೆಲವು ವಿಚಾರಗಳನ್ನು ಹೇಳುವುದು ಬಹಳ ಸುಲಭ. ಆದರೆ, ಅದನ್ನು ಮಾಡುವುದು ಕಷ್ಟಕರ‘ ಎಂದು ಟೀಕಾಕಾರರ ವಿರುದ್ಧ ಸೂರ್ಯಕುಮಾರ್ ಕಿಡಿಕಾರಿದರು.
ಇನ್ನು ತಂಡದ ಆಟಗಾರರ ಕುರಿತು ಮಾತನಾಡಿದ ಸೂರ್ಯಕುಮಾರ್, ಹೊರಗಿನ ಪ್ರತಿಯೊಂದು ಸಲಹೆ ಸೂಚನೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಿಮ್ಮ ವಿವೇಚನೆ ಬಳಸಿಕೊಂಡು ಉತ್ತಮ ವಿಷಯಗಳನ್ನು ತೆಗೆದುಕೊಳ್ಳಬೇಕು ಮತ್ತು ಅನಗತ್ಯ ಎನಿಸಿದ್ದನ್ನು ಬಿಟ್ಟುಬಿಡಬೇಕು ಎಂದರು.
ಈ ಟೂರ್ನಿಯ ಮುಂದಿನ ಪಂದ್ಯಗಳನ್ನು ನಾವು ಗೆಲ್ಲಬೇಕಾದರೆ ಉತ್ತಮವಾಗಿ ಆಡಬೇಕು ಹಾಗಾಗಿ ನೀವು ಹೊರಗಿನವರ ಅನಗತ್ಯ ಟೀಕೆಗಳ ಬಗ್ಗೆ ಹೆಚ್ಚು ಚಿಂತಿಸಬೇಡಿ, ಒಳ್ಳೆಯ ಸಲಹೆಯನ್ನು ಮಾತ್ರ ಪಡೆದುಕೊಂಡು ಮುಂದುವರೆಯಿರಿ ಎಂದು ಸಹ ಆಟಗಾರರಿಗೆ ಸೂರ್ಯಕುಮಾರ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.