ADVERTISEMENT

ಭೂಕಂಪ ಪೀಡಿತ ಅಫ್ಗಾನ್‌ಗೆ ಏಷ್ಯಾ ಕಪ್ ಗೆಲುವು ಅತ್ಯಗತ್ಯ: ಗುಲ್ಬದಿನ್ ನೈಬ್

ಪಿಟಿಐ
Published 18 ಸೆಪ್ಟೆಂಬರ್ 2025, 10:57 IST
Last Updated 18 ಸೆಪ್ಟೆಂಬರ್ 2025, 10:57 IST
<div class="paragraphs"><p>ಗುಲ್ಬಾದಿನ್ ನೈಬ್</p></div>

ಗುಲ್ಬಾದಿನ್ ನೈಬ್

   

ದುಬೈ: ಏಷ್ಯಾ ಕಪ್‌ನಲ್ಲಿ ಇಂದು (ಗುರುವಾರ) ಮಹತ್ವದ ಪಂದ್ಯ ನಡೆಯಲಿದ್ದು, ಬಿ ಗುಂಪಿನಲ್ಲಿ ಸೂಪರ್ 4 ಹಂತ ತಲುಪಲು ಅಫ್ಗಾನಿಸ್ತಾನ ತಂಡ ಶ್ರೀಲಂಕಾವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿದೆ. ಈ ನಡುವೆ, ಅಫ್ಗಾನಿಸ್ತಾನದ ಆಲ್‌ರೌಂಡರ್ ಗುಲ್ಬಾದಿನ್ ನೈಬ್ ಏಷ್ಯಾ ಕಪ್ ಗೆಲುವು ಅಫ್ಗಾನಿಸ್ತಾನಕ್ಕೆ ಯಾಕೆ ಮುಖ್ಯ ಎಂಬುದನ್ನು ವಿವರಿಸಿದ್ದಾರೆ.

ಅಫ್ಗಾನಿಸ್ತಾನ ಇತ್ತೀಚೆಗೆ ಭೂ ಕಂಪದಿಂದಾಗಿ ತತ್ತರಿಸಿದೆ. ಹಾಗಾಗಿ ತಮ್ಮ ದೇಶಕ್ಕೆ ಕೊಂಚ ಸಂತೋಷ ತರುವ ಉದ್ದೇಶದಿಂದ ಈ ಬಾರಿಯ ಏಷ್ಯಾ ಕಪ್ ಅನ್ನು ನಾವು ಗೆಲ್ಲಲೇಬೇಕು ಎಂದು ಅಫ್ಘಾನ್ ಆಲ್‌ರೌಂಡರ್ ಗುಲ್ಬಾದಿನ್ ನೈಬ್ ಹೇಳಿದ್ದಾರೆ.

ADVERTISEMENT

ಇತ್ತೀಚಿಗೆ ಅಂದರೆ ಆಗಸ್ಟ್ 31 ರಂದು ಅಫ್ಗಾನಿಸ್ತಾನದ ಕುನಾರ್ ಪ್ರಾಂತ್ಯದ ನುರ್ಗಲ್ ಜಿಲ್ಲೆಯಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿ ಸುಮಾರು 2,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಈ ಬಗ್ಗೆ ಮಾತನಾಡಿದ ಗುಲ್ಬಾದಿನ್ ನೈಬ್, ಅಫ್ಗಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಪರಿಸ್ಥಿತಿ ನೆನಸಿಕೊಂಡರೆ ಈಗಲೂ ಮೈ ನಡುಗುತ್ತದೆ. ಅಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ನಮ್ಮ ದೇಶದಲ್ಲಿ ಅಷ್ಟೊಂದು ಸೌಲಭ್ಯಗಳಿಲ್ಲ. ನಾವು ಈ ಏಷ್ಯಾ ಕಪ್ ಗೆದ್ದರೆ ನಮ್ಮ ಜನರು ಸಂತೋಷಪಡುತ್ತಾರೆ ಎಂದು ಅವರು ಹೇಳಿದರು.

ಯುಎಇ ಹವಾಮಾನ ತುಂಬಾ ಬಿಸಿಯಾಗಿರುತ್ತದೆ. ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಮಗೆ ಯುಎಇ ಎರಡನೇ ತವರು ಮೈದಾನ ಇದ್ದಂತೆ, ಹಾಗಾಗಿ ನಮಗೆ ಇಲ್ಲಿಯ ಪಿಚ್‌ಗಳು ಹೇಗೆ ವರ್ತಿಸುತ್ತವೆ ಎಂದು ತಿಳಿದಿದೆ. ಇಲ್ಲಿ ನಮ್ಮ ಗೆಲುವಿಗೆ ಯಾವುದೇ ಸಮಸ್ಯೆಗಳಿಲ್ಲ ಎಂದರು.

ಈ ಬಾರಿಯ ಏಷ್ಯಾ ಕಪ್ ಅನ್ನು ಯಾರು ಗೆಲ್ಲುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿಯ ಪಿಚ್‌ಗಳು ಸ್ಪಿನ್ ಸ್ನೇಹಿಯಾಗಿದ್ದು, ನಾವು ಕೂಡ ಅದಕ್ಕೆ ಒಗ್ಗಿಕೊಂಡಿದ್ದೇವೆ. ಇನ್ನೂ ಟಿ–20 ಕ್ರಿಕೆಟ್‌ನಲ್ಲಿ ಗೆಲ್ಲುವ ನೆಚ್ಚಿನ ತಂಡ ಎಂಬುದಿಲ್ಲ. ಯಾರು ಬೇಕಾದರೂ ಗೆಲ್ಲಬಹುದು ಎಂದರು.

ಇಲ್ಲಿನ ಬಿಸಿ ವಾತಾವರಣದಲ್ಲಿ ರಶೀದ್ ಖಾನ್ ಸೇರಿದಂತೆ ಸ್ಪಿನ್ನರ್‌ಗಳು ಕಠಿಣ ಶ್ರಮ ವಹಿಸುತ್ತಿದ್ದಾರೆ. ಇಲ್ಲಿನ ವಾತಾವಣಕ್ಕೆ ಒಗ್ಗಿಕೊಂಡು ಬೌಲಿಂಗ್ ಮಾಡುವುದು ಕಠಿಣ ಎಂದು ಅವರು ಒಪ್ಪಿಕೊಂಡರು.

ನಮ್ಮ ತಂಡದಲ್ಲಿ ವಿಶ್ವ ದರ್ಜೆಯ ಸ್ಪಿನ್ನರ್‌ಗಳಿದ್ದಾರೆ. ನೂರ್, ರಶೀದ್‌ರಂತ ಬೌಲರ್‌ಗಳು ಯಾವುದೇ ತಂಡಕ್ಕೆ ಸವಾಲು ಎಸೆಯಬಲ್ಲರು. ನಾವು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳ ವಿರುದ್ಧವೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದೇವೆ. ನಾವು ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದರು.

ಅಫ್ಗಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಸೋತ ಬಳಿಕ ಇಂದು (ಗುರುವಾರ) ನಡೆಯಲಿರುವ ಪಂದ್ಯ ಮಹತ್ವದ್ದಾಗಿದ್ದು, ಗೆದ್ದರೆ ಮಾತ್ರ ಸೂಪರ್–4ಗೆ ಅರ್ಹತೆ ಪಡೆಯಲಿದೆ. ಒಂದುವೇಳೆ ಇಂದಿನ ಪಂದ್ಯ ಸೋತರೆ ಅಫ್ಗಾನಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.