ADVERTISEMENT

ಏಷ್ಯಾಕಪ್; ಭಾರತದ ಪಾಲಿಗೆ ಬೂಮ್ರಾ ಸ್ಥಿರತೆ, ಅರ್ಶದೀಪ್ ಲಯ ನಿರ್ಣಾಯಕ: ಮಾಜಿ ಕೋಚ್

ಪಿಟಿಐ
Published 8 ಸೆಪ್ಟೆಂಬರ್ 2025, 8:03 IST
Last Updated 8 ಸೆಪ್ಟೆಂಬರ್ 2025, 8:03 IST
<div class="paragraphs"><p>ಜಸ್‌ಪ್ರಿತ್‌ ಬೂಮ್ರಾ ಹಾಗೂ ಅರ್ಶದೀಪ್‌ ಸಿಂಗ್‌</p></div>

ಜಸ್‌ಪ್ರಿತ್‌ ಬೂಮ್ರಾ ಹಾಗೂ ಅರ್ಶದೀಪ್‌ ಸಿಂಗ್‌

   

ಕೃಪೆ: ಪಿಟಿಐ

ದುಬೈ: ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಅಭಿಯಾನದ ವೇಳೆ ವೇಗಿಗಳಾದ ಜಸ್‌ಪ್ರಿತ್‌ ಬೂಮ್ರಾ ಹಾಗೂ ಅರ್ಶದೀಪ್‌ ಸಿಂಗ್‌ ಅವರ ಪ್ರದರ್ಶನವು ಭಾರತ ತಂಡದ ಪಾಲಿಗೆ ಮಹತ್ವದ್ದಾಗಿರಲಿದೆ ಎಂದು ಟೀಂ ಇಂಡಿಯಾದ ಮಾಜಿ ಕೋಚ್‌ ಭರತ್‌ ಅರುಣ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಏಷ್ಯಾಕಪ್‌ ಟೂರ್ನಿಯು ಅಬುಧಾಬಿಯಲ್ಲಿ ನಾಳೆಯಿಂದ (ಸೆ. 9) ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಫ್ಗಾನಿಸ್ತಾನ ಹಾಗೂ ಹಾಂಗ್‌ಕಾಂಗ್‌ ಮುಖಾಮುಖಿಯಾಗಲಿವೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಬುಧವಾರ (ಸೆ.10) ಯುಎಇ ವಿರುದ್ಧ ಆಡಲಿದೆ.

2014ರಿಂದ 2021ರ ವರೆಗೆ ಟೀಂ ಇಂಡಿಯಾದ ಬೌಲಿಂಗ್‌ ಕೋಚ್‌ ಆಗಿದ್ದ ಅರುಣ್‌, ಇತ್ತೀಚೆಗೆ ನಡೆದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅರ್ಶದೀಪ್‌ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಎಂದು ಹೇಳಿದ್ದಾರೆ.

'ಅರ್ಶದೀಪ್‌ ಅವರ ಸಾಮರ್ಥ್ಯದ ಬಗ್ಗೆ ನಮಗೆಲ್ಲ ಗೊತ್ತಿದೆ. ಅವರಿಗೆ ಇಂಗ್ಲೆಂಡ್‌ನಲ್ಲಿ ಹೆಚ್ಚು ಅವಕಾಶ ಸಿಗಬೇಕಿತ್ತು. ಅಭ್ಯಾಸದ ವೇಳೆ ನೀವು ಎಷ್ಟೇ ಬೌಲಿಂಗ್‌ ಮಾಡಿದರೂ, ಪಂದ್ಯಗಳಲ್ಲಿ ಆಡುವುದರಿಂದ ಲಯ ಗಳಿಸಲು ಸಾಧ್ಯ' ಎಂದಿದ್ದಾರೆ.

'ನನ್ನ ಪ್ರಕಾರ, ಪಂದ್ಯಗಳಲ್ಲಿ ಬೌಲಿಂಗ್‌ ಮಾಡುವುದು ಮುಖ್ಯ. ಹೆಚ್ಚು ಆಡದಿರುವುದು ಅರ್ಶದೀಪ್‌ಗೆ ಸವಾಲಾಗಬಹುದು. ಎಷ್ಟು ಬೇಗನೆ ಲಯ ಕಂಡುಕೊಳ್ಳಲಿದ್ದಾರೆ ಎಂಬುದು ಪ್ರಮುಖವಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೂಮ್ರಾ ಕುರಿತು, ಮೂರು ವಾರದ ಅಂತರದಲ್ಲಿ ಆರು ಟಿ20 ಪಂದ್ಯಗಳನ್ನು ಆಡುವುದು ಅವರಿಗೆ ತೊಂದರೆಯಾಗಬಾರದು ಎಂದು ಅರುಣ್‌ ಒತ್ತಿ ಹೇಳಿದ್ದಾರೆ.

'ಬೂಮ್ರಾ ಆಡುವುದನ್ನು ನೋಡಲು ಬಯಸುತ್ತೇನೆ. ಅವರು ಎಲ್ಲ ಪಂದ್ಯಗಳಿಗೂ ಲಭ್ಯರಿರುತ್ತಾರೆ ಎಂದು ಭಾವಿಸುತ್ತೇನೆ. ಆದರೆ, ಅಂತಿಮ ನಿರ್ಧಾರವನ್ನು ಅವರೇ ಕೈಗೊಳ್ಳಬೇಕು. ಈ ಪಂದ್ಯಾವಳಿಯ ಸ್ವರೂಪ ನೋಡಿದರೆ, ಬೂಮ್ರಾಗೆ ವಿಶ್ರಾಂತಿ ಬೇಕಾಗುತ್ತದೆ ಎನಿಸುವುದಿಲ್ಲ. ಹಾಗೊಂದು ವೇಳೆ ಅವರು ಆಡುವುದೇ ಆದರೆ, ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುವುದು ಮುಖ್ಯವಾಗುತ್ತದೆ' ಎಂದಿದ್ದಾರೆ.

ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಎರಡು ಗುಂಪುಗಳಾಗಿ ಸೆಣಸಾಟ ನಡೆಸಲಿವೆ. ಶ್ರೀಲಂಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಹಾಂಗ್‌ಕಾಂಗ್‌ 'ಎ' ಗುಂಪಿನಲ್ಲಿವೆ. ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮನ್‌ 'ಬಿ' ಗುಂಪಿನಲ್ಲಿವೆ.

ಅಗ್ರ ನಾಲ್ಕು ಸ್ಥಾನಗಳಲ್ಲಿ ಉಳಿಯುವ ತಂಡಗಳು ರೌಂಡ್‌ ರಾಬಿನ್‌ ಮಾದರಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಹಂತದಲ್ಲಿ ಮೊದಲೆರಡು ಸ್ಥಾನ ಗಿಟ್ಟಿಸುವ ತಂಡಗಳು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.