ADVERTISEMENT

Asia Cup Rising Stars: ಬಾಂಗ್ಲಾದೇಶಕ್ಕೆ 'ಸೂಪರ್' ಗೆಲುವು; ಭಾರತ ಹೊರಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 13:52 IST
Last Updated 21 ನವೆಂಬರ್ 2025, 13:52 IST
<div class="paragraphs"><p>ಬಾಂಗ್ಲಾದೇಶ ಆಟಗಾರರ ಸಂಭ್ರಮ</p></div>

ಬಾಂಗ್ಲಾದೇಶ ಆಟಗಾರರ ಸಂಭ್ರಮ

   

(ಚಿತ್ರ ಕೃಪೆ: X/@ACCMedia1)

ದೋಹಾ: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025ನೇ ಸಾಲಿನ ಟ್ವೆಂಟಿ-20 ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿರುವ ಭಾರತ 'ಎ' ತಂಡವು ಕೂಟದಿಂದಲೇ ನಿರ್ಗಮಿಸಿದೆ.

ADVERTISEMENT

ದೋಹಾದಲ್ಲಿ ಇಂದು (ಶುಕ್ರವಾರ) ನಡೆದ ಸೆಮಿಫೈನಲ್ ಪಂದ್ಯವು ರೋಚಕ 'ಟೈ' ಆಗಿತ್ತು. ಬಳಿಕ ಸೂಪರ್ ಓವರ್‌ನಲ್ಲಿ ಗೆಲುವು ದಾಖಲಿಸಿದ ಬಾಂಗ್ಲಾದೇಶ ಫೈನಲ್‌ಗೆ ಲಗ್ಗೆ ಇಟ್ಟಿತು.

ಹಲವು ನಾಟಕೀಯ ಸನ್ನಿವೇಶಗಳಿಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರು ವಿಕೆಟ್ ನಷ್ಟಕ್ಕೆ 194 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.

ಆರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಎಸ್.ಎಂ. ಮೆಹೆರೊಬ್ ಕೇವಲ 18 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಮೆಹೆರೊಬ್ ಇನಿಂಗ್ಸ್‌ನಲ್ಲಿ ಆರು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದ್ದವು. ಅಲ್ಲದೆ ಬಾಂಗ್ಲಾ ಕೊನೆಯ ಎರಡು ಓವರ್‌ಗಳಲ್ಲಿ 50 ರನ್‌ಗಳನ್ನು ಬಾರಿಸಿತ್ತು.

ಈ ಗುರಿ ಬೆನ್ನಟ್ಟಿದ ಭಾರತ ಎ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 194 ರನ್ ಗಳಿಸುವುದರೊಂದಿಗೆ ಪಂದ್ಯ 'ಟೈ' ಆಯಿತು. ಭಾರತ ಎ ತಂಡದ ಪರ ಪ್ರಿಯಾಂಶ್ ಆರ್ಯ (44), ವೈಭವ್ ಸೂರ್ಯವಂಶಿ (38), ನಾಯಕ ಜಿತೇಶ್ ಶರ್ಮಾ (33), ನೇಹಲ್ ವಧೇರಾ (32*) ಹಾಗೂ ರಮಣದೀಪ್ ಸಿಂಗ್ (17) ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 16 ಹಾಗೂ ಕೊನೆಯ ಎಸೆತದಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು. ಅಂತಿಮ ಓವರ್‌ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಅಶುತೋಷ್ ಶರ್ಮಾ ಐದನೇ ಎಸೆತದಲ್ಲಿ ಔಟ್ ಆದರು. ಆದರೆ ಕೊನೆಯ ಎಸೆತದಲ್ಲಿ ಹರ್ಷ್ ದುಬೆ ಮೂರು ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆದ್ದರಿಂದ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು.

ಸೂಪರ್ ಓವರ್‌ನಲ್ಲಿ ಭಾರತದ ಯೋಜನೆಗಳೆಲ್ಲ ತಲೆಕೆಳಗಾದವು. ಮೊದಲ ಎಸೆತದಲ್ಲಿ ನಾಯಕ ಜಿತೇಶ್ ಶರ್ಮಾ ಕ್ಲೀನ್ ಔಲ್ಡ್ ಆದರು. ಬಳಿಕದ ಎಸೆತದಲ್ಲಿ ಅಶುತೋಷ್ ಔಟ್ ಆಗುವುದರೊಂದಿಗೆ ಭಾರತದ ನಿರೀಕ್ಷೆ ಕಮರಿತು.

ಆದರೂ ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸುವಲ್ಲಿ ಸುಯಶ್ ಶರ್ಮಾ ಯಶಸ್ವಿಯಾದರು. ಎರಡನೇ ಎಸೆತ ವೈಡ್ ಆಗುವುದರೊಂದಿಗೆ ಭಾರತದ ಫೈನಲ್ ಕನಸು ಭಗ್ನಗೊಂಡಿತು.

ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಎ ಹಾಗೂ ಶ್ರೀಲಂಕಾ ಎ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಬಾಂಗ್ಲಾದೇಶ ಎ ತಂಡದ ವಿರುದ್ಧ ಸೆಣಸಲಿದೆ.

ಇದೇ ಟೂರ್ನಿಯಲ್ಲಿ 'ಬಿ' ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧವೂ ಭಾರತ ಸೋಲು ಅನುಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.