ADVERTISEMENT

Asia Cup: ಹಾಂಗ್‌ಕಾಂಗ್ ವಿರುದ್ಧ ಬಾಂಗ್ಲಾಕ್ಕೆ 7 ವಿಕೆಟ್‌ಗಳ ಜಯ

ಪಿಟಿಐ
Published 11 ಸೆಪ್ಟೆಂಬರ್ 2025, 18:37 IST
Last Updated 11 ಸೆಪ್ಟೆಂಬರ್ 2025, 18:37 IST
   

ಅಬುಧಾಬಿ: ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಳಿಕ ನಾಯಕ ಲಿಟನ್‌ ದಾಸ್‌ (59;39ಎ) ಅವರ ಅರ್ಧಶತಕದ ಬಲದಿಂದ ಬಾಂಗ್ಲಾದೇಶ ತಂಡವು ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಹಾಂಗ್‌ಕಾಂಗ್‌ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.

‘ಅನನುಭವಿ’ ಹಾಂಗ್‌ಕಾಂಗ್‌ ತಂಡವು ನೀಡಿದ್ದ 144 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ ತಂಡವು ಇನ್ನೂ 14 ಎಸೆತಗಳು ಬಾಕಿ ಇರುವಂತೆ 3 ವಿಕೆಟ್‌ಗೆ ಗೆಲುವಿಗೆ ಬೇಕಿದ್ದ ರನ್‌ ಬಾರಿಸಿ ಸಂಭ್ರಮಿಸಿತು. ಹಾಂಗ್‌ಕಾಂಗ್‌ ತಂಡಕ್ಕೆ ಇದು ಸತತ ಎರಡನೇ ಸೋಲು. 

ಆರಂಭಿಕ ಆಟಗಾರರಾದ ಪರ್ವೇಜ್ ಹುಸೇನ್‌ (19) ಮತ್ತು ತಾಂಜಿದ್ ಹಸನ್ (14) ಅವರ ವಿಕೆಟ್‌ಗಳು ಬೇಗನೆ ಉರುಳಿದವು. ಆದರೆ, ನಂತರದಲ್ಲಿ ಲಿಟನ್‌ ಮತ್ತು ತೌಹಿದ್‌ ಹೃದಯ್‌ (ಔಟಾಗದೇ 35) ಅವರು ಮೂರನೇ ವಿಕೆಟ್‌ಗೆ 95 (70ಎ) ರನ್ ಸೇರಿಸಿ ತಂಡವನ್ನು ಗೆಲುವಿನ ಸನಿಹ ತಂದರು.

ADVERTISEMENT

ಇದಕ್ಕೂ ಮೊದಲು ಟಾಸ್‌ ಗೆದ್ದ ಬಾಂಗ್ಲಾ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿ, ಹಾಂಗ್‌ಕಾಂಗ್ ತಂಡವನ್ನು 7 ವಿಕೆಟ್‌ಗೆ 143 ರನ್‌ಗಳಿಗೆ ಕಟ್ಟಿಹಾಕಿತು. ಆರಂಭ ಆಟಗಾರ ಜೀಶಾನ್ ಅಲಿ (30, 34ಎ), ಮಧ್ಯಮ ಕ್ರಮಾಂಕದ ಬ್ಯಾಟರ್‌ ನಿಝಾಕತ್ ಖಾನ್ (42;40ಎ) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯಲ್ಲಿ ನಾಯಕ ಯಾಸಿಮ್ ಮುರ್ತಜಾ ಲಗುಬಗನೇ 28 ರನ್ (19ಎ) ಗಳಿಸಿದರು. ಅವರ ಆಟದಿಂದ ತಂಡ 140ರ ಗಡಿ ದಾಟಿತು.

ಸ್ಕೋರುಗಳು: ಹಾಂಗ್‌ಕಾಂಗ್: 20 ಓವರುಗಳಲ್ಲಿ 7 ವಿಕೆಟ್‌ಗೆ 143 (ಜೀಶಾನ್ ಅಲಿ 30, ನಿಝಾಕತ್ ಖಾನ್ 42, ತಸ್ಕಿನ್ ಅಹ್ಮದ್ 38ಕ್ಕೆ2, ತಂಜಿಮ್ ಹಸನ್ 21ಕ್ಕೆ2, ರಿಷದ್ ಹುಸೇನ್ 31ಕ್ಕೆ2). ಬಾಂಗ್ಲಾದೇಶ: 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 144 (ಲಿಟನ್‌ ದಾಸ್‌ (59, ತೌಹಿದ್‌ ಹೃದಯ್‌ ಔಟಾಗದೇ 35; ಅತೀಕ್ ಇಕ್ಬಾಲ್ 14ಕ್ಕೆ 2). ಬಾಂಗ್ಲಾದೇಶ ತಂಡಕ್ಕೆ 7 ವಿಕೆಟ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.