ADVERTISEMENT

ಪಾಕ್‌ಗೆ ಪೆಟ್ಟು ನೀಡುವ ಛಲದಲ್ಲಿ ಭಾರತ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಫೈನಲ್ ಮೇಲೆ ರೋಹಿತ್ ಶರ್ಮಾ ಬಳಗದ ಕಣ್ಣು: ಶಿಖರ್‌ ಧವನ್‌ ಆಕರ್ಷಣೆ

ಪಿಟಿಐ
Published 22 ಸೆಪ್ಟೆಂಬರ್ 2018, 20:31 IST
Last Updated 22 ಸೆಪ್ಟೆಂಬರ್ 2018, 20:31 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ದುಬೈ: ನಾಲ್ಕು ದಿನಗಳ ಹಿಂದೆಯಷ್ಟೇ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯದ ಗುಂಗು ಇನ್ನೂ ಇದೆ. ಅದಾಗಲೇ ಈ ಎರಡು ತಂಡಗಳ ನಡುವಣ ಮತ್ತೊಂದು ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.

ಭಾನುವಾರ ಇಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ರೋಹಿತ್ ಶರ್ಮಾ ನಾಯಕತ್ವದ ತಂಡವು ಈ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಗೆದ್ದಿದೆ. ಮೊದಲ ಪಂದ್ಯದಲ್ಲಿ ಹಾಂಕಾಂಗ್ ಎದುರು ಪ್ರಯಾಸದ ಜಯ ಸಾಧಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಪಾಕ್‌ ಎದುರು ಸುಲಭವಾಗಿ ಗೆದ್ದಿತ್ತು.

ಶುಕ್ರವಾರ ಬಾಂಗ್ಲಾ ಎದುರು ನಡೆ ದಿದ್ದ ಸೂಪರ್ ಫೋರ್ ಪಂದ್ಯದಲ್ಲಿ ರವೀಂದ್ರ ಜಡೇಜ ಅವರ ಸ್ಪಿನ್ ದಾಳಿಯ ಬಲದಿಂದ ಜಯ ಗಳಿಸಿತ್ತು. ಪಾಕ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂ ಡಿದ್ದರು. ಅವರ ಬದಲಿಗೆ ಜಡೇಜ ಸ್ಥಾನ ಗಳಿಸಿದ್ದರು. ಒಂದು ವರ್ಷದ ನಂತರ ಅವರು ಏಕದಿನ ಕ್ರಿಕೆಟ್‌ನಲ್ಲಿ ಆಡಿದ್ದರು. ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದರು. ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಕೂಡ ಉತ್ತಮ ಲಯದಲ್ಲಿದ್ದಾರೆ. ಅವರ ದಾಳಿಯನ್ನು ಎದುರಿಸುವ ಕಠಿಣ ಸವಾಲು ಸರ್ಫ ರಾಜ್ ಅಹಮದ್, ಫಖ್ರ್ ಜಮಾನ್, ಶೋಯಬ್ ಮಲಿಕ್ ಅವರ ಮುಂದಿದೆ.

ADVERTISEMENT

ಬ್ಯಾಟಿಂಗ್‌ನಲ್ಲಿ ಭಾರತಕ್ಕೆ ಹೆಚ್ಚಿನ ಚಿಂತೆ ಇಲ್ಲ. ಮೊದಲ ಪಂದ್ಯದಲ್ಲಿ ಶಿಖರ್ ಧವನ್ ಶತಕ ಬಾರಿಸಿದ್ದರು. ಪಾಕ್ ಮತ್ತು ಬಾಂಗ್ಲಾ ಎದುರಿನ ಪಂದ್ಯಗಳಲ್ಲಿ ನಾಯಕ ರೋಹಿತ್ ಅರ್ಧಶತಕಗಳನ್ನು ಗಳಿಸಿದ್ದರು. ದಿನೇಶ್ ಕಾರ್ತಿಕ್, ಅಂಬಟಿ ರಾಯುಡು, ಮಹೇಂದ್ರಸಿಂಗ್ ಧೋನಿ ಕೂಡ ತಮಗೆ ಸಿಕ್ಕ ಅವಕಾಶಗಳಲ್ಲಿ ಮಹತ್ವದ ಕಾಣಿಕೆ ನೀಡಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ ಬೆಂಚ್ ಕಾದಿರುವ ಮನೀಷ್ ಪಾಂಡೆ, ಕೆ.ಎಲ್. ರಾಹುಲ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಭಾರತ ತಂಡವು ಈ ಪಂದ್ಯದಲ್ಲಿ ಗೆದ್ದರೆ ಫೈನಲ್‌ ಪ್ರವೇಶ ಸುಗಮವಾಗಲಿದೆ. ಇಲ್ಲದಿದ್ದರೆ ಈ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಆಫ್ಗಾನಿಸ್ತಾನ ತಂಡದ ವಿರುದ್ಧ ಗೆಲ್ಲಲೇ ಬೇಕಾಗುತ್ತದೆ.

ಭಾರತವು ಸರಣಿಯಲ್ಲಿ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಹೋಗುವ ಛಲದಲ್ಲಿದೆ. ಅದರಲ್ಲೂ ತನ್ನ ಬದ್ಧ ಎದುರಾಳಿಯನ್ನು ಸೋಲಿಸುವ ತವಕದಲ್ಲಿದೆ. ಪಾಕ್ ಕೂಡ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದೆ. ಆದ್ದರಿಂದ ರೋಚಕ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ.

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್. ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ದೀಪಕ್ ಚಹಾರ್, ಸಿದ್ಧಾರ್ಥ ಕೌಲ್, ಕೆ. ಖಲೀಲ್ ಅಹಮದ್, ಮನೀಷ್‌ ಪಾಂಡೆ, ಕೆ.ಎಲ್. ರಾಹುಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.