ನವದೆಹಲಿ/ಢಾಕಾ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಂಬರುವ ಏಷ್ಯಾ ಕಪ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸುವುದು ಬಹುತೇಕ ಖಚಿತವಾಗಿದೆ.
ಗುರುವಾರ ಢಾಕಾದಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎ.ಸಿ.ಸಿ) ವಾರ್ಷಿಕ ಸಭೆಯಲ್ಲಿ ಈ ವಿಷಯ ಪ್ರಕಟವಾಯಿತು. ಸಭೆಯಲ್ಲಿ 25 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದ ಪರವಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವರ್ಚುವಲ್ ಮಾಧ್ಯಮದ ಮೂಲಕ ಹಾಜರಿದ್ದರು.
‘ಬಿಸಿಸಿಐ ಯುಎಇಯಲ್ಲಿ ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಲಿದೆ. ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನೂ ದುಬೈನಲ್ಲಿ ಆಡಲಿದೆ. ಅಂತಿಮ ವೇಳಾಪಟ್ಟಿಯ ಸಿದ್ಧತೆ ಕುರಿತು ಚರ್ಚೆ ಸಾಗಿದೆ’ ಎಂದು ಮೂಲಗಳು ಖಚಿತಪಡಿಸಿವೆ.
ಸೆಪ್ಟೆಂಬರ್‌ನಲ್ಲಿ ಸುಮಾರು 15 ದಿನಗಳ ಕಾಲ ಈ ಟೂರ್ನಿ ನಡೆಯಲಿದೆ. ಅದರ ನಂತರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ನಡೆಯಲಿದೆ.
‘ನಮ್ಮ ಉಪಾಧ್ಯಕ್ಷ ರಾಜೀವ ಶುಕ್ಲಾ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಅವರು ನಂತರ ಎಲ್ಲ ಸದಸ್ಯರಿಗೆ ವಿಷಯಗಳನ್ನು ವಿವರಿಸುವರು. ಯಾವುದೇ ಹೆಚ್ಚಿನ ಬದಲಾವಣೆ ಕಾಣುತ್ತಿಲ್ಲ. ಪೂರ್ವನಿಗದಿಯಂತೆಯೇ ವೇಳಾಪಟ್ಟಿ ಸಿದ್ಧವಾಗಿ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಹೇಳಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಎಸಿಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹಸೀನ್ ನಖ್ವಿ ಅವರು ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ಪಂದ್ಯ ಕುರಿತು ಪ್ರತಿಕ್ರಿಯಿಸಿದರು.
‘ಈ ಕುರಿತು ಶೀಘ್ರದಲ್ಲಿ ವಿವರ ನೀಡುತ್ತೇವೆ. ಬಿಸಿಸಿಐ ಜೊತೆಗೆ ಕೆಲವು ಮಹತ್ವದ ಸಂಗತಿಗಳ ಕುರಿತು ಮಾತುಕತೆ ನಡೆಸುತ್ತಿದ್ದೇವೆ’ ಎಂದು ನಖ್ವಿ ಹೇಳಿದರು.
ಈ ಸಭೆಯಲ್ಲಿ ಪೂರ್ವನಿಗದಿಯಂತೆ 10 ವಿಷಯಗಳು ಚರ್ಚೆಯಾಗಬೇಕಿತ್ತು. ಆದರೆ ಬಿಸಸಿಇಐ ಒತ್ತಡದಿಂದಾಗಿ ಕೇವಲ ಎರಡೇ ವಿಷಯಗಳು ಚರ್ಚೆಯಾದವು ಎಂದು ತಿಳಿದುಬಂದಿದೆ. ಈ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.