
ಹ್ಯಾರಿಸ್ ರವೂಫ್
ದುಬೈ: ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಪಂದ್ಯದ ವೇಳೆ ಆಟದ ಘನತೆಗೆ ಧಕ್ಕೆ ತಂದಿರುವುದಕ್ಕೆ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರವೂಫ್ ಅವರಿಗೆ ಮಂಗಳವಾರ ದಂಡ ವಿಧಿಸಲಾಗಿದೆ.
ಟೂರ್ನಿಯ ವೇಳೆ ನಾಲ್ಕನೇ ಡಿಮೆರಿಟ್ ಪಾಯಿಂಟ್ ಪಡೆದ ಕಾರಣಕ್ಕೆ ರವೂಫ್ ಅವರಿಗೆ ಎರಡು ಏಕದಿನ ಪಂದ್ಯಗಳಿಗೆ ನಿಷೇಧವನ್ನೂ ಹೇರಲಾಗಿದೆ.
ಭಾರತ ವಿರುದ್ಧ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ರವೂಫ್ ಅವರಿಗೆ ಪಂದ್ಯ ಸಂಭಾವನೆಯ ಶೇ 30ರಷ್ಟು ದಂಡವಿಧಿಸಲಾಗಿತ್ತು. ಹೀಗಾಗಿ ಅವರು ಮಂಗಳವಾರ ಆರಂಭವಾದ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಲಾಗಲಿಲ್ಲ. ನ. 6ರಂದು ಎರಡನೇ ಪಂದ್ಯವನ್ನೂ ಅವರು ಕಳೆದುಕೊಳ್ಳಲಿದ್ದಾರೆ.
ಭಾರತ ಸೇನೆಯನ್ನು ಬೆಂಬಲಿಸಿ ಅದರ ಜೊತೆ ನಿಲ್ಲುವುದಾಗಿ ಸೆ. 14ರ ಪಂದ್ಯದ ವೇಳೆ ಹೇಳಿದ್ದ ಸೂರ್ಯ ಕುಮಾರ್ ಅವರಿಗೆ ಪಂದ್ಯ ಸಂಭಾವನೆಯ ಶೇ 30ರಷ್ಟು ದಂಡ ವಿಧಿಸಲಾಗಿತ್ತು.
ರವೂಫ್ ಅವರನ್ನು ಯಾರ್ಕರ್‌ನಲ್ಲಿ ಬೌಲ್ಡ್ ಮಾಡಿದ ಮೇಲೆ ವಿಮಾನ ಹೊಡೆದುರುಳಿಸಿದ ರೀತಿ ಕೈಯ್ಯಲ್ಲಿ ಸಂಜ್ಞೆ ಮಾಡಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರಿಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
ಸೆ.14ರ ಮತ್ತು ಸೆ. 28ರ ಪಂದ್ಯದ ವೇಳೆ ರವೂಫ್ ಅವರು ವಿಮಾನ ಬೀಳಿಸಿದ ರೀತಿ ಸಂಜ್ಞೆ ಪ್ರದರ್ಶಿಸಿ ಬೌಂಡರಿ ಬಳಿಯ ಭಾರತದ ಅಭಿಮಾನಿಗಳನ್ನು ಪ್ರಚೋದಿಸಿದ್ದರು. ಇದಕ್ಕಾಗಿ ಅವರಿಗೆ ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.
ಪಾಕ್ ಬ್ಯಾಟರ್ ಸಾಹಿಬ್‌ಝಾದಾ ಫರ್ಹಾನ್ ಅವರಿಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಅರ್ಧ ಶತಕ ಬಾರಿಸಿದ ಬಳಿಕ ಅವರು ಬ್ಯಾಟನ್ನು ಗನ್‌ನಿಂದ ಗುಂಡುಹಾರಿಸುವ ರೀತಿ ಹಿಡಿದು ಸಂಭ್ರಮಿಸಿದ್ದರು.
ಜಾಲತಾಣದ ತುಣುಕಿನಲ್ಲಿ ಅರ್ಷದೀಪ್ ಸಿಂಗ್ ಅವರು ಪಾಕಿಸ್ತಾನ ಪ್ರೇಕ್ಷಕನನ್ನು ಅಣಕಿಸುವ ದೃಶ್ಯಗಳಿದ್ದವು. ಆದರೆ ಅವರು ದಂಡದಿಂದ ಬಚಾವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.