ADVERTISEMENT

ಭಾರತ vs ಪಾಕಿಸ್ತಾನ ಮತ್ತೆ ಮುಖಾಮುಖಿ; 'ಸೂಪರ್ 4' ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2022, 2:02 IST
Last Updated 3 ಸೆಪ್ಟೆಂಬರ್ 2022, 2:02 IST
   

ದುಬೈ: ಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 'ಸೂಪರ್ 4' ಹಂತದಲ್ಲಿ ಮತ್ತೆ ಮುಖಾಮುಖಿಯಾಗಲಿವೆ.

ಕಳೆದ ಭಾನುವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ಪಾಕಿಸ್ತಾನ ತಂಡವನ್ನು ಐದು ವಿಕೆಟ್ ಅಂತರದಿಂದ ಸೋಲಿಸಿತು.

ಶುಕ್ರವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಹಾಂಗ್‌ಕಾಂಗ್ ವಿರುದ್ಧ ಪಾಕಿಸ್ತಾನ ದಾಖಲೆಯ 155 ರನ್ ಅಂತರದ ಗೆಲುವು ದಾಖಲಿಸಿತು. ಇದರೊಂದಿಗೆ ಭಾನುವಾರ ನಡೆಯಲಿರುವ ಸೂಪರ್‌ 4 ಹಂತದ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಎದುರಿಸಲಿದೆ.

ADVERTISEMENT

ಎ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಹಾಂಗ್‌ಕಾಂಗ್ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದೆ.

ಬಿ ಗುಂಪಿನಲ್ಲಿ ಅಫ್ಗಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 4 ಹಂತಕ್ಕೆ ತೇರ್ಗಡೆ ಹೊಂದಿವೆ. ಅಫ್ಗಾನಿಸ್ತಾನ ಎರಡೂ ಪಂದ್ಯಗಳನ್ನು ಗೆದ್ದರೆ ಲಂಕಾ ಅಫ್ಗಾನ್ ವಿರುದ್ಧ ಸೋಲು ಅನುಭವಿಸಿತ್ತು. ಕೆಟ್ಟ ಪ್ರದರ್ಶನ ನೀಡಿರುವ ಬಾಂಗ್ಲಾದೇಶ, ಎರಡೂ ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದೆ.

ಸೂಪರ್ 4 ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್‌ಗೆ ತೇರ್ಗಡೆ ಪಡೆಯಲಿವೆ. ಹೀಗಾಗಿ ಫೈನಲ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ.

ಭಾರತದ ಹಾದಿ...
ಸೂಪರ್ 4 ಹಂತದಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ ತಂಡದ ಸವಾಲನ್ನು ಎದುರಿಸಲಿದೆ. ಬಳಿಕ ಕ್ರಮವಾಗಿ ಮಂಗಳವಾರ ಶ್ರೀಲಂಕಾ ಮತ್ತು ಗುರುವಾರದಂದು ಅಫ್ಗಾನಿಸ್ತಾನ ವಿರುದ್ಧ ಸೆಣಸಲಿದೆ.

ಸೂಪರ್ 4 ಹಂತದ ಮೊದಲ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ. ಉಳಿದೆಲ್ಲ ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನಲ್ಲಿ ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಫೈನಲ್ ಪಂದ್ಯವು ಸೆಪ್ಟೆಂಬರ್ 11 ಭಾನುವಾರದಂದು ದುಬೈನಲ್ಲೇ ನಿಗದಿಯಾಗಿದೆ.

ಇದನ್ನೂ ಓದಿ:

ಸೂಪರ್ 4 ವೇಳಾಪಟ್ಟಿ:

ಸೆ.03, ಶನಿವಾರ: ಶ್ರೀಲಂಕಾ vs ಅಫ್ಗಾನಿಸ್ತಾನ, ಶಾರ್ಜಾ
ಸೆ.04, ಭಾನುವಾರ: ಭಾರತ vs ಪಾಕಿಸ್ತಾನ, ದುಬೈ
ಸೆ.06, ಮಂಗಳವಾರ: ಭಾರತ vs ಶ್ರೀಲಂಕಾ, ದುಬೈ
ಸೆ.07, ಬುಧವಾರ: ಪಾಕಿಸ್ತಾನ vs ಅಫ್ಗಾನಿಸ್ತಾನ, ದುಬೈ
ಸೆ.08, ಗುರುವಾರ: ಭಾರತ vs ಅಫ್ಗಾನಿಸ್ತಾನ, ದುಬೈ
ಸೆ.09, ಶುಕ್ರವಾರ: ಶ್ರೀಲಂಕಾ vs ಪಾಕಿಸ್ತಾನ, ದುಬೈ

ಫೈನಲ್: ಸೆ.11 ಭಾನುವಾರ, ದುಬೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.