ADVERTISEMENT

ಸೂಪರ್ ಓವರ್‌ನಲ್ಲಿ ಹೈಡ್ರಾಮಾ: ಶನಕ ಔಟ್ ಆದರೂ ಅಂಪೈರ್ ನಾಟೌಟ್ ಕೊಟ್ಟಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2025, 7:55 IST
Last Updated 27 ಸೆಪ್ಟೆಂಬರ್ 2025, 7:55 IST
<div class="paragraphs"><p>ಫೋಟೊ ಕೃಪೆ: ಸೋನಿ ಲೈವ್</p></div>

ಫೋಟೊ ಕೃಪೆ: ಸೋನಿ ಲೈವ್

   

ದುಬೈ: ಏಷ್ಯಾಕಪ್ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಸೂಪರ್ ಓವರ್‌ನಲ್ಲಿ ರೋಚಕವಾಗಿ ಗೆದ್ದು ಅಜೇಯವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯದ ಸೂಪರ್ ಓವರ್ ಸಂದರ್ಭದಲ್ಲಿ ಉಂಟಾದ ಗೊಂದಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆ ಮೂಡುವಂತೆ ಮಾಡಿದೆ.

ನಿಗದಿತ 20 ಓವರ್‌ಗಳಲ್ಲಿ ಉಭಯ ತಂಡಗಳು ಕೂಡ 202 ರನ್‌ಗಳನ್ನು ಕಲೆಹಾಕಿದ್ದರಿಂದ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಸೂಪರ್ ಓವರ್‌ನಲ್ಲಿ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸಿತು.

ADVERTISEMENT

ಸೂಪರ್‌ ಓವರ್‌ನಲ್ಲಿ ನಡೆದಿದ್ದೇನು?

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ದಸುನ್ ಶನಕ ಹಾಗೂ ಕುಸಾಲ್ ಪೆರೆರಾ ಮೊದಲಿಗರಾಗಿ ಕ್ರೀಸ್‌ಗೆ ಆಗಮಿಸುತ್ತಾರೆ. ಈ ವೇಳೆ ಭಾರತದ ಪರ ಅರ್ಷದೀಪ್‌ ಸಿಂಗ್ ಬೌಲಿಂಗ್ ಮಾಡಲು ಬರುತ್ತಾರೆ. ಮೊದಲ ಎಸೆತದಲ್ಲಿ ಕುಸಾಲ್ ಪೆರೆರಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ರಿಂಕು ಸಿಂಗ್‌ ಅವರಿಗೆ ಕ್ಯಾಚ್ ನೀಡಿ ಔಟ್ ಆಗುತ್ತಾರೆ.

ಬಳಿಕ ಕಮಿಂದು ಮೆಂಡಿಸ್ ಕ್ರೀಸ್‌ಗೆ ಆಗಮಿಸುತ್ತಾರೆ. ಎರಡನೇ ಎಸೆತದಲ್ಲಿ ಮೆಂಡಿಸ್ ಒಂದು ರನ್ ತೆಗೆದುಕೊಳ್ಳುತ್ತಾರೆ. ಮೂರನೇ ಎಸೆತವ‌ನ್ನು ಶನಕ ಡಾಟ್ ಮಾಡುತ್ತಾರೆ. ನಾಲ್ಕನೇ ಎಸೆತವನ್ನು ಅರ್ಷದೀಪ್‌ ವೈಡ್ ಹಾಕಿದ್ದರಿಂದ ಶ್ರೀಲಂಕಾದ ಸ್ಕೋರ್ ಬೋರ್ಡ್‌ಗೆ ಎರಡನೇ ರನ್ ಸೇರ್ಪಡೆಯಾಗುತ್ತದೆ.

ನಾಟಕೀಯ ತಿರುವು

ಅರ್ಷದೀಪ್ 4ನೇ ಎಸೆತವನ್ನು ಆಫ್ ಸ್ಟಂಪ್‌ನ ಹೊರಗೆ ಎಸೆಯುತ್ತಾರೆ. ಈ ವೇಳೆ ಬೀಟನ್ ಆದ ಶನಕ ಕ್ರೀಸ್ ಬಿಟ್ಟು ಓಡಲು ಮುಂದಾಗುತ್ತಾರೆ. ಆಗ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ‌ಅಂಡರ್ ಆರ್ಮ್ ಥ್ರೋ ಮೂಲಕ ವಿಕೆಟ್‌ಗೆ ಹೊಡೆಯುತ್ತಾರೆ. ಅಲ್ಲಿಗೆ ಶ್ರೀಲಂಕಾ ಅಲೌಟ್ ಆಗಬೇಕಿತ್ತು. ಆದರೆ ಅದು ಆಗುವುದಿಲ್ಲ.

ಸೂಪರ್ ಓವರ್‌ನಲ್ಲಿ ಶ್ರೀಲಂಕಾ ಇನ್ನಿಂಗ್ಸ್ 2 ರನ್‌ಗಳಿಗೆ ಮುಕ್ತಾಯಗೊಂಡಿತು ಎಂದುಕೊಳ್ಳುವಾಗಲೆ ಶನಕ ಅವರ ರನೌಟ್ ತೀರ್ಪು ನೀಡಲು ಮೂರನೇ ಅಂಪೈರ್‌ಗೆ ಮನವಿ ಮಾಡಲಾಯಿತು. ಈ ವೇಳೆ ಕ್ರೀಡಾಂಗಣದ ಪರದೆಯ ಮೇಲೆ ಶನಕ ನಾಟೌಟ್ ಎಂಬ ತೀರ್ಪು ಬರುತ್ತದೆ.

ಗೊಂದಲಕ್ಕೊಳಗಾದ ಭಾರತೀಯ ಆಟಗಾರಿಗೆ ಅಂಪೈರ್ ವಿಷಯವನ್ನು ವಿವರಿಸುತ್ತಾರೆ. ‘ಚೆಂಡು ಎಸೆದ ನಂತರ ಶನಕ ಬೀಟ್ ಆಗುತ್ತಾರೆ. ಆಗ ಅರ್ಷದೀಪ್‌ ಸಿಂಗ್ ಕ್ಯಾಚ್‌ಗಾಗಿ ಮನವಿ ಮಾಡಿದ್ದರು. ಆದರೆ, ಚೆಂಡು ಹಿಡಿದ ಸಂಜು ಸ್ಯಾಮ್ಸನ್‌ಗೆ ಇದು ತಿಳಿಯದೆ, ಚೆಂಡನ್ನು ಹಿಡಿದ ತಕ್ಷಣ ವಿಕೆಟ್‌ಗೆ ನೇರವಾಗಿ ಹೊಡೆದು ರನೌಟ್ ಮಾಡುತ್ತಾರೆ. ಆದರೆ ಅದಕ್ಕೂ ಮುನ್ನ ಅರ್ಷದೀಪ್‌ ಕ್ಯಾಚ್‌ ಔಟ್‌ಗೆ ಮನವಿ ಮಾಡಿದ್ದರಿಂದ ಮುಖ್ಯ ಅಂಪೈರ್ ಔಟ್ ಎಂದು ತೀರ್ಪು ನೀಡಿರುತ್ತಾರೆ. ಇದು ತಿಳಿಯದೆ ಶನಕ ಕ್ರೀಸ್ ಬಿಟ್ಟು ಓಡಿದ್ದರು.

ನಿಯಮ ಹೇಳೋದೇನು?

ನಿಯಮದ ಪ್ರಕಾರ, ಮುಖ್ಯ ಅಂಪೈರ್ ಮೊದಲು ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಆ ಚೆಂಡು ಡೆಡ್ ಆಗುತ್ತದೆ. ಹಾಗಾಗಿ, ಶನಕ ಕ್ರೀಸ್ ಬಿಟ್ಟು ಓಡಿದಾಗ ಸಂಜು ಮಾಡಿದ ರನೌಟ್‌ಗೆ ಮಾನ್ಯತೆ ಬರುವುದಿಲ್ಲ. ಅರ್ಷದೀಪ್‌ ಸಿಂಗ್ ಮನವಿ ಮಾಡದಿದ್ದರೆ, ಲೆಗ್ ಅಂಪೈರ್ ಅದನ್ನು ರನೌಟ್ ಎಂದು ತೀರ್ಪು ನೀಡುತ್ತಿದ್ದರು. ಆದರೆ ಅರ್ಷದೀಪ್‌ ಅವರ ಮನವಿಗೆ ಮುಖ್ಯ ಅಂಪೈರ್ ಔಟ್ ಎಂದು ಘೋಷಿಸಿದ್ದರಿಂದ ಆ ಸಾಧ್ಯತೆ ತಪ್ಪಿ ಹೋಗುತ್ತದೆ.

ಈ ವಿಷಯವನ್ನು ಅಂಪೈರ್ ಭಾರತದ ನಾಯಕ ಸೂರ್ಯಕುಮಾರ್‌ಗೆ ವಿವರಿಸಿದರು. ಇದರಿಂದಾಗಿ ಶನಕ ಬ್ಯಾಟಿಂಗ್ ಮುಂದುವರಿಸಿದರು. ಆದರೆ, ಸಿಕ್ಕ ಜೀವದಾನವನ್ನು ಶನಕ ಸದುಪಯೋಗಪಡಿಸಿಕೊಳ್ಳಲಿಲ್ಲ. ಮುಂದಿನ ಎಸೆತದಲ್ಲಿ ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.