ADVERTISEMENT

KKR | ಗಂಭೀರ್ ಯಶಸ್ಸಿನ ಸೂತ್ರವನ್ನು ನನ್ನದೇ ಶೈಲಿಯಲ್ಲಿ ಅನುಸರಿಸುವೆ: ಬ್ರಾವೊ

ಏಜೆನ್ಸೀಸ್
Published 14 ಮಾರ್ಚ್ 2025, 4:56 IST
Last Updated 14 ಮಾರ್ಚ್ 2025, 4:56 IST
<div class="paragraphs"><p>ಡ್ವೇನ್‌ ಬ್ರಾವೋ ಹಾಗೂ ಗೌತಮ್‌ ಗಂಭೀರ್</p></div>

ಡ್ವೇನ್‌ ಬ್ರಾವೋ ಹಾಗೂ ಗೌತಮ್‌ ಗಂಭೀರ್

   

ಪಿಟಿಐ ಚಿತ್ರಗಳು

ಕೋಲ್ಕತ್ತ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಹಾಲಿ ಚಾಂಪಿಯನ್‌ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಮೆಂಟರ್‌ ಆಗಿ ನೇಮಕ ಗೊಂಡಿರುವ ವೆಸ್ಟ್‌ ಇಂಡೀಸ್‌ನ ಡ್ವೇನ್‌ ಬ್ರಾವೋ, ಹಿಂದಿನ ಮೆಂಟರ್‌ ಗೌತಮ್‌ ಗಂಭೀರ್ ಅವರ ಯಶಸ್ಸಿನ ಸೂತ್ರವನ್ನು ತಮ್ಮದೇ ವಿಶಿಷ್ಠ ಶೈಲಿಯೊಂದಿಗೆ ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

ADVERTISEMENT

ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಕೆಕೆಆರ್‌ ತಂಡ 2024ರ ಆವೃತ್ತಿಯಲ್ಲಿ ಚಾಂಪಿಯನ್‌ ಆಗಿತ್ತು. ಸದ್ಯ ಭಾರತ ತಂಡದ ಕೋಚ್‌ ಆಗಿ ಗಂಭೀರ್‌ ನಿರ್ಗಮಿಸಿರುವ ಕಾರಣ, ಅವರ ಸ್ಥಾನಕ್ಕೆ 2025ರ ಆವೃತ್ತಿಗೂ ಮುನ್ನ ಬ್ರಾವೋ ಅವರನ್ನು ಕೆಕೆಆರ್‌ ನೇಮಿಸಿದೆ.

ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿರುವ ಬ್ರಾವೊ, 'ದುರದೃಷ್ಟವಶಾತ್‌, ನಾವು ಕೆಲವು ಆಟಗಾರರನ್ನು (ಹರಾಜಿನಲ್ಲಿ) ಕಳೆದುಕೊಂಡಿದ್ದೇವೆ. ಗೌತಮ್‌ ಗಂಭೀರ್‌ ಅವರು ತಮ್ಮದೇ ಶೈಲಿಯನ್ನು ಹೊಂದಿದ್ದರು. ನಾನೂ ನನ್ನದೇ ಶೈಲಿ ಹೊಂದಿದ್ದೇನೆ. ನಮ್ಮದೇ ವಿಧಾನಗಳ ಮೂಲಕ ಇಬ್ಬರೂ ಯಶಸ್ವಿಯಾಗಿದ್ದೇವೆ' ಎಂದಿದ್ದಾರೆ.

ಗಂಭೀರ್‌ ಹಾಕಿಕೊಟ್ಟ ಆಟದ ಅಡಿಪಾಯವನ್ನು ಗೌರವಿಸುತ್ತಲೇ, ತಮ್ಮದೇ ವಿಧಾನಗಳನ್ನು ಕಾರ್ಯಗತಗೊಳಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಅವರು, ಸಲಹೆಗಳಿಗಾಗಿ ಗಂಭೀರ್‌ ಅವರನ್ನು ಸಂಪರ್ಕಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. 'ಖಂಡಿತ ಹಲವು ಸಲ ಸಂದೇಶ ಕಳುಹಿಸಿದ್ದೆ. ಅವರು ಯಶಸ್ಸಿನ ಸೂತ್ರವನ್ನು ಅಳವಡಿಸಿಕೊಂಡಿದ್ದ ಕಾರಣ, ಅವರ ಮಾರ್ಗ ಅನುಸರಿಸುವುದು ಮುಖ್ಯ' ಎಂದು ಹೇಳಿದ್ದಾರೆ.

ತಂಡದ ಮೂಲತತ್ವವನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ಋತುವಿನ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಕಂಡುಕೊಳ್ಳುವುದು ಅಗತ್ಯ ಎಂದಿರುವ ಬ್ರಾವೊ, ಹಿಂದಿನ ಆವೃತ್ತಿಯ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.

ಮೂರು ಬಾರಿ ಚಾಂಪಿಯನ್‌
ತಲಾ ಐದು ಬಾರಿ ಕಪ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ಬಿಟ್ಟರೆ, ಐಪಿಎಲ್‌ನಲ್ಲಿ ಆಡುವ ಅತ್ಯಂತ ಯಶಸ್ವಿ ತಂಡ ಕೆಕೆಆರ್‌. ಈ ತಂಡ ಮೂರು ಸಲ ಚಾಂಪಿಯನ್‌ ಪಟ್ಟಕ್ಕೇರಿದೆ. 2012 ಹಾಗೂ 2014ರಲ್ಲಿ ಗಂಭೀರ್‌ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸಿದ್ದ ಈ ತಂಡ, 2024ರಲ್ಲಿ ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ಟ್ರೋಫಿಗೆ ಮುತ್ತಿಕ್ಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.