ಪಂದ್ಯದ ವೇಳೆ ಮುಖಾಮುಖಿಯಾದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಮತ್ತು ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ (ಬಲ)
ಕೃಪೆ: @cricketcomau
ಬ್ರಿಸ್ಬೇನ್: ಆತಿಥೇಯ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲೂ ಗೆದ್ದು ಬೀಗಿದೆ. ಇದರೊಂದಿಗೆ 2–0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
'ದಿ ಗಬ್ಬಾ' ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, 311 ರನ್‌ಗೆ ಸರ್ವಪತನ ಕಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಆಸಿಸ್, 534 ರನ್ ಗಳಿಸಿ ಆಲೌಟ್ ಆಗಿತ್ತು.
ಹೀಗಾಗಿ, 177 ರನ್‌ಗಳ ಹಿನ್ನಡೆ ಅನುಭವಿಸಿದ ಬೆನ್ ಸ್ಟೋಕ್ಸ್ ಪಡೆ, ಎರಡನೇ ಇನಿಂಗ್ಸ್‌ನಲ್ಲೂ ಚೇತರಿಕೆಯ ಆಟವಾಡಲಿಲ್ಲ. ಕೇವಲ 241 ರನ್ ಗಳಿಸಿ ಆಲೌಟ್ ಆಯಿತು. ಅದರೊಂದಿಗೆ, 65 ರನ್‌ಗಳ ಅಲ್ಪ ಗುರಿ ನೀಡಿತು.
ಈ ಗುರಿ ಎದುರು ಲೀಲಾಜಾಲವಾಗಿ ಬ್ಯಾಟ್ ಬೀಸಿದ ಸ್ಟೀವ್ ಸ್ಮಿತ್ ಪಡೆ, ಕೇವಲ ಎರಡು ವಿಕೆಟ್ ಕಳೆದುಕೊಂಡು 69 ರನ್ ಗಳಿಸಿ ಜಯದ ನಗೆ ಬೀರಿತು.
ಟ್ರಾವಿಸ್ ಹೆಡ್ 22 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದರೆ, ಜೇಕ್ ವೆದರ್‌ಲ್ಯಾಂಡ್ 17 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ಸ್ಮಿತ್ ಕೇವಲ 9 ಎಸೆತಗಳಲ್ಲೇ 23 ರನ್ ಸಿಡಿಸಿ ಜಯ ತಂದುಕೊಟ್ಟರು.
ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ (77) ಹಾಗೂ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 8 ವಿಕೆಟ್ ಪಡೆದ ವೇಗಿ ಮಿಚೇಲ್ ಸ್ಟಾರ್ಕ್ ಪಂದ್ಯಶ್ರೇಷ್ಠ ಎನಿಸಿದರು.
ಅಡಿಲೇಡ್‌ನಲ್ಲಿ 'ಸರಣಿ'ಗಾಗಿ ಹೋರಾಟ
ಸರಣಿಯ ಮೂರನೇ ಪಂದ್ಯವು ಅಡಿಲೇಡ್‌ನ ಓವಲ್ ಕ್ರೀಡಾಣಗಣದಲ್ಲಿ ಡಿಸೆಂಬರ್ 17ರಂದು ಆರಂಭವಾಗಲಿದೆ.
ಮೊದಲೆರಡೂ ಪಂದ್ಯ ಗೆದ್ದಿರುವ ಆತಿಥೇಯರು ಓವಲ್‌ನಲ್ಲೂ ಗೆದ್ದು ಸರಣಿಯ ಜಯ ಖಾತ್ರಿಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಪ್ರವಾಸಿ ಬಳಗದ ಪರಿಸ್ಥಿತಿ ಭಿನ್ನವಾಗಿದೆ. ಸರಣಿ ಗೆಲ್ಲಲು ಮುಂದಿನ ಮೂರೂ ಪಂದ್ಯ ಜಯಿಸಬೇಕಿದೆ.
ಜಯದ ಹಳಿಗೆ ಮರಳಲು ಹಾಗೂ ಸರಣಿ ಸೋಲನ್ನು ತಪ್ಪಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡ ಸ್ಟೋಕ್ಸ್ ಬಳಗದ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.