ADVERTISEMENT

ಟಿ20 ವಿಶ್ವಕಪ್‌: ಮ್ಯಾಕ್ಸ್‌ವೆಲ್‌ ಅರ್ಧಶತಕ, ಆಸ್ಟ್ರೇಲಿಯಾ ಸೆಮಿ ಆಸೆ ಜೀವಂತ

ಪಿಟಿಐ
Published 4 ನವೆಂಬರ್ 2022, 14:30 IST
Last Updated 4 ನವೆಂಬರ್ 2022, 14:30 IST
ಗ್ಲೆನ್‌ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ – ಎಪಿ ಚಿತ್ರ
ಗ್ಲೆನ್‌ ಮ್ಯಾಕ್ಸ್‌ವೆಲ್‌ ಬ್ಯಾಟಿಂಗ್‌ – ಎಪಿ ಚಿತ್ರ   

ಅಡಿಲೇಡ್‌: ರಶೀದ್‌ ಖಾನ್‌ ಕೊನೆಯಲ್ಲಿ ಅಬ್ಬರದ ಆಟವಾಡಿದರೂ ಒತ್ತಡವನ್ನು ಮೆಟ್ಟಿನಿಂತ ಆಸ್ಟ್ರೇಲಿಯಾ ತಂಡ ಅಫ್ಗಾನಿಸ್ತಾನ ವಿರುದ್ಧ 4 ರನ್‌ ಜಯ ಪಡೆದು ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿತು.

ಅಡಿಲೇಡ್‌ ಓವಲ್‌ನಲ್ಲಿ ಶುಕ್ರವಾರ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ತಮ್ಮ ಕೊನೆಯ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 168 ರನ್‌ ಗಳಿಸಿತು. ಮೊಹಮ್ಮದ್‌ ನಬಿ ಬಳಗ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 ರನ್‌ ಪೇರಿಸಿತು.

ಈ ಪಂದ್ಯದಲ್ಲಿ ಗೆದ್ದರೂ ಆತಿಥೇಯರಿಗೆ ನಾಲ್ಕರಘಟ್ಟದಲ್ಲಿ ಸ್ಥಾನ ಖಚಿತ ಆಗಿಲ್ಲ. ಶನಿವಾರ ನಡೆಯಲಿರುವ ಇಂಗ್ಲೆಂಡ್‌– ಶ್ರೀಲಂಕಾ ಪಂದ್ಯದ ಫಲಿತಾಂಶವನ್ನು ಅವಲಂಬಿಸಬೇಕಾಗಿದೆ. ಲಂಕಾ ಗೆದ್ದರೆ ಮಾತ್ರ ಆಸ್ಟ್ರೇಲಿಯಾ ಸೆಮಿ ಪ್ರವೇಶಿಸಲಿದೆ.

ADVERTISEMENT

ರನ್‌ರೇಟ್‌ನಲ್ಲಿ ಇಂಗ್ಲೆಂಡ್‌ಅನ್ನು ಹಿಂದಿಕ್ಕಲು, ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ನಬಿ ಬಳಗವನ್ನು 106 ರನ್‌ಗಳ ಒಳಗೆ ನಿಯಂತ್ರಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.

ಸವಾಲಿನ ಗುರಿ ಬೆನ್ನಟ್ಟಿದ ಅಫ್ಗನ್‌ ತಂಡ ಎರಡು ವಿಕೆಟ್‌ಗೆ 99 ರನ್‌ ಗಳಿಸಿ ಅಚ್ಚರಿಯ ಫಲಿತಾಂಶದ ಸೂಚನೆ ನೀಡಿತ್ತು. ಅಗ್ರ ಕ್ರಮಾಂಕದಲ್ಲಿ ರಹ್ಮಾನುಲ್ಲಾ ಗುರ್ಬಾಜ್‌ (30 ರನ್‌, 17 ಎ.), ಇಬ್ರಾಹಿಂ ಜದ್ರಾನ್ (26) ಮತ್ತು ಗುಲ್ಬದಿನ್‌ ನೈಬ್ (39 ರನ್‌, 23 ಎ.) ಉತ್ತಮ ಕೊಡುಗೆ ನೀಡಿದರು.

ಆದರೆ ನಾಲ್ಕು ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ರಶೀದ್‌ ಖಾನ್‌ (ಔಟಾಗದೆ 48, 23 ಎ.) ಕೊನೆಯ ಓವರ್‌ಗಳಲ್ಲಿ ಆತಿಥೇಯ ಬೌಲರ್‌ಗಳ ಮೇಲೆ ಸುಂಟರಗಾಳಿಯಂತೆ ಎರಗಿದರು. ಮೂರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಹೊಡೆದರು.

ಮಾರ್ಕಸ್‌ ಸ್ಟೊಯಿನಿಸ್‌ ಬೌಲ್‌ ಮಾಡಿದ ಕೊನೆಯ ಓವರ್‌ನಲ್ಲಿಅಫ್ಗನ್‌ ಜಯಕ್ಕೆ 22 ರನ್‌ಗಳು ಬೇಕಿದ್ದವು. ರಶೀದ್‌ ಒಂದು ಸಿಕ್ಸರ್‌, ಎರಡು ಬೌಂಡರಿ ಹೊಡೆದರಾದರೂ ಗೆಲುವು ದಕ್ಕಲಿಲ್ಲ.

ಮ್ಯಾಕ್ಸ್‌ವೆಲ್‌ ಅರ್ಧಶತಕ: ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಗ್ಲೆನ್‌ ಮ್ಯಾಕ್ಸ್‌ವೆಲ್‌ (ಔಟಾಗದೆ 54, 32 ಎ., 4X6, 6X2) ಆಸರೆಯಾದರು. ಅಗ್ರ ಕ್ರಮಾಂಕದಲ್ಲಿ ಮಿಚೆಲ್‌ ಮಾರ್ಷ್‌ (45 ರನ್‌, 30 ಎ.) ಮಿಂಚಿದರು. ನಾಯಕ ಆ್ಯರನ್‌ ಫಿಂಚ್‌ ಅವರ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪರ್‌ ಬ್ಯಾಟರ್‌ ಮ್ಯಾಥ್ಯೂ ವೇಡ್‌ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು.

ಅಫ್ಗನ್‌ ಪರ ನವೀನ್‌ ಉಲ್‌ ಹಕ್‌ (21ಕ್ಕೆ 3) ಪ್ರಭಾವಿ ಎನಿಸಿದರೆ, ಫಜಲ್‌ಹಕ್‌ ಫರೂಕಿ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 168 (ಡೇವಿಡ್‌ ವಾರ್ನರ್‌ 25, ಮಿಷೆಲ್‌ ಮಾರ್ಷ್‌ 45, ಮಾರ್ಕಸ್‌ ಸ್ಟೊಯಿನಿಸ್‌ 25, ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗದೆ 54, ಫಜಲ್‌ಹಕ್‌ ಫರೂಕಿ 29ಕ್ಕೆ 2, ನವೀನ್‌ ಉಲ್‌ ಹಕ್‌ 21ಕ್ಕೆ 3, ರಶೀದ್‌ ಖಾನ್‌ 29ಕ್ಕೆ 1)

ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164 (ರಹ್ಮಾನುಲ್ಲಾ ಗುರ್ಬಾಜ್‌ 30, ಇಬ್ರಾಹಿಂ ಜದ್ರಾನ್ 26, ಗುಲ್ಬದಿನ್‌ ನೈಬ್ 39, ರಶೀದ್‌ ಖಾನ್‌ ಔಟಾಗದೆ 48, ಜೋಶ್‌ ಹ್ಯಾಜಲ್‌ವುಡ್‌ 33ಕ್ಕೆ 2, ಆ್ಯಡಮ್‌ ಜಂಪಾ 22ಕ್ಕೆ 2)

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 4 ರನ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.