
ಕ್ಯಾನ್‌ಬೆರಾ: ಸೂರ್ಯಕುಮಾರ್ ಯಾದವ್ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳುವ ಒತ್ತಡದಲ್ಲಿದ್ದಾರೆ. ಆದ್ದರಿಂದಲೇ ಬುಧವಾರ ಆಸ್ಟ್ರೇಲಿಯಾ ಎದುರು ಆರಂಭವಾಗುವ ಟಿ20 ಕ್ರಿಕೆಟ್ ಸರಣಿಯು ಅವರ ಪಾಲಿಗೆ ‘ಸತ್ವಪರೀಕ್ಷೆ’ಯ ಕಣವಾಗಲಿದೆ.
ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯು ಮನುಕಾ ಓವೆಲ್‌ನಲ್ಲಿ ನಡೆಯಲಿದೆ. ಸೂರ್ಯ ನಾಯಕತ್ವದ ಭಾರತ ತಂಡವು ಕಣಕ್ಕಿಳಿಯಲಿದೆ. ಏಕದಿನ ಸರಣಿಯಲ್ಲಿ 2–1ರಿಂದ ಜಯಭೇರಿ ಬಾರಿಸಿರುವ ಆತಿಥೇಯ ಬಳಗವನ್ನು ಮಿಚೆಲ್ ಮಾರ್ಷ್ ಮುನ್ನಡೆಸುವರು.
ಭಾರತ ತಂಡವು ತಾನು ಆಡಿರುವ ಕಳೆದ ಹತ್ತು ಪಂದ್ಯಗಳಲ್ಲಿ 8ರಲ್ಲಿ ಜಯಿಸಿದೆ. ಒಂದು ಟೈ ಆಗಿದೆ. ಇನ್ನೊಂದರಲ್ಲಿ ಸೋತಿತ್ತು. ಆಸ್ಟ್ರೇಲಿಯಾ ಕೂಡ ಇತ್ತೀಚೆಗೆ ಆಡಿದ ಹತ್ತು ಪಂದ್ಯಗಳಲ್ಲಿ ಒಂದರಲ್ಲಿ ಸೋತಿತ್ತು. ಇನ್ನೊಂದು ಪಂದ್ಯ ಮಳೆಗೆ ರದ್ದಾಗಿತ್ತು.
ಸೂರ್ಯಕುಮಾರ್ ಅವರು ನಾಯಕತ್ವ ವಹಿಸಿದ ನಂತರ ತಂಡವು 29 ಪಂದ್ಯಗಳಲ್ಲಿ 23ರಲ್ಲಿ ಜಯಿಸಿದೆ. ಚುಟುಕು ಕ್ರಿಕೆಟ್‌ನ ಹೊಸ ಶೈಲಿಯಾದ ‘ನಿರ್ಭೀತ ಆಟ’ಕ್ಕೆ ತಂಡವು ಹೊಂದಿಕೊಂಡಿದೆ. ಸೂರ್ಯ ನಾಯಕತ್ವದಲ್ಲಿ ಮೊದಲ ಎಸೆತದಿಂದಲೇ ಬೀಸಾಟವಾಡುವ ಶೈಲಿ ಈಗ ಹೆಚ್ಚು ಕಂಡುಬರುತ್ತಿದೆ.
ಏಷ್ಯಾ ಕಪ್ ಜಯಿಸಿರುವ ತಂಡದ ನಾಯಕತ್ವ ವಹಿಸಿದ್ದ ಸೂರ್ಯ ಆಸ್ಟ್ರೇಲಿಯಾ ನೆಲದಲ್ಲಿಯೂ ಯಶಸ್ಸಿನ ಕನಸು ಕಾಣುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗಾಗಿ ಈ ಸರಣಿಯಿಂದಲೇ ಭಾರತದ ಪೂರ್ವಾಭ್ಯಾಸ ನಡೆಯಲಿದೆ. ವಿಶ್ವಕಪ್ ಟೂರ್ನಿಯವರೆಗೂ 15 ಪಂದ್ಯಗಳಲ್ಲಿ ತಂಡ ಆಡಬೇಕಿದೆ. ಈ ಸರಣಿ ನಂತರ ತಂಡವು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಎದುರು ಕೂಡ ಆಡಲಿದೆ.
ಬ್ಯಾಟಿಂಗ್‌ನಲ್ಲಿ ಫಾರ್ಮ್ ಕಳೆದುಕೊಂಡಿರುವ ಸೂರ್ಯ ಅವರಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ‘ಅಭಯಹಸ್ತ’ ಇದೆ. ನಾಯಕನಾಗಿ ಉತ್ತಮ ಸಾಧನೆ ಮಾಡಿರುವ ಸೂರ್ಯ ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳುವ ವಿಶ್ವಾಸ ಅವರಿಗೆ ಇದೆ. 2023ರಲ್ಲಿ ಸೂರ್ಯ 18 ಇನಿಂಗ್ಸ್‌ಗಳಿಂದ 733 ರನ್ ಸೇರಿಸಿದ್ದರು. 156ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್ ಗಳಿಸಿದ್ದರು. ಅದರಲ್ಲಿ ಎರಡು ಶತಕ ಮತ್ತು ಐದು ಅರ್ಧಶತಕಗಳಿದ್ದವು.
2024ರಲ್ಲಿ 151ರ ಸ್ಟ್ರೈಕ್‌ರೇಟ್‌ನಲ್ಲಿ 450 ರನ್ ಪೇರಿಸಿದ್ದರು. ಆದರೆ ಈ ವರ್ಷದಲ್ಲಿ 10 ಇನಿಂಗ್ಸ್‌ಗಳಿಂದ 100 ರನ್ ಕಲೆಹಾಕಿದ್ದಾರೆ. ಆದರೆ 105ರ ಸ್ಟ್ರೈಕ್‌ರೇಟ್ ಅವರದ್ದಾಗಿದೆ. ಇದು ಅವರ ಆಕ್ರಮಣಶೀಲ ಬ್ಯಾಟಿಂಗ್ ಇನ್ನೂ ಮಂಕಾಗಿಲ್ಲ ಎಂಬುದಕ್ಕೆ ನಿದರ್ಶನ.
‘ನಾನು ತಂಡದ ಗುರಿಸಾಧನೆಯ ಕುರಿತು ಹೆಚ್ಚು ಗಮನ ಹರಿಸಿರುವೆ. ವೈಯಕ್ತಿಕ ರನ್ ಗಳಿಕೆ ಪರಿಸ್ಥಿತಿಗೆ ಅನುಗುಣವಾಗಿ ಸಾಧ್ಯವಾಗಲಿದೆ. ಇಲ್ಲಿ ಉತ್ತಮ ಲಯಕ್ಕೆ ಮರಳುವ ವಿಶ್ವಾಸವಿದೆ. ತಂಡದ ಜಯದ ಗುರಿಗೆ ಆದ್ಯತೆ ನೀಡುವೆ’ ಎಂದು ಸೂರ್ಯ ಹೇಳಿದರು.
ಏಷ್ಯಾ ಕಪ್ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಶೈಲಿಯ ಬ್ಯಾಟಿಂಗ್ ಮೂಲಕ ಅಮೋಘ ಆರಂಭ ನೀಡಿದ್ದ ಅಭಿಷೇಕ್ ಶರ್ಮಾ ಈಗ ಯುವ ಅಭಿಮಾನಿಗಳ ಕಣ್ಮಣಿಯಾಗಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯಗಳಲ್ಲಿ ಅಭಿಷೇಕ್ ಅಬ್ಬರದ ಆರಂಭ ನೀಡಿದರೆ ಮಹತ್ವದ ಕಾಣಿಕೆಯಾಗಲಿದೆ. ಮಧ್ಯಮಕ್ರಮಾಂಕದಲ್ಲಿ ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಬಲವಿದೆ.
ವೇಗಿ ಜಸ್‌ಪ್ರೀತ್ ಬೂಮ್ರಾ ತಂಡಕ್ಕೆ ಮರಳಿರುವುದು ಸೂರ್ಯ ಆತ್ಮವಿಶ್ವಾಸ ಇಮ್ಮಡಿಸಿದೆ. ಅವರೊಂದಿಗೆ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಇದ್ದಾರೆ. ವರುಣ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಅವರು ಸೇರಿ ಪ್ರಯೋಗಿಸುವ ಒಟ್ಟು 12 ಓವರ್‌ಗಳು ಪಂದ್ಯಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.
ಈ ಬೌಲಿಂಗ್ ಪಡೆಗೆ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಹಾಗೂ ಮಿಚೆಲ್ ಒವೆನ್ ಅವರನ್ನು ಕಟ್ಟಿಹಾಕುವ ಸವಾಲು ಇದೆ. ಈಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಒವೆನ್ ಅಮೋಘವಾಗಿ ಆಡಿದ್ದರು.
ತಂಡಗಳು ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ವರ್ಮಾ ಶುಭಮನ್ ಗಿಲ್ (ಉಪನಾಯಕ) ತಿಲಕ್ ವರ್ಮಾ ನಿತೀಶ್ ಕುಮಾರ್ ರೆಡ್ಡಿ ಶಿವಂ ದುಬೆ ಅಕ್ಷರ್ ಪಟೇಲ್ ಜಿತೇಶ್ ಶರ್ಮಾ (ವಿಕೆಟ್‌ಕೀಪರ್) ವರುಣ್ ಚಕ್ರವರ್ತಿ ಜಸ್‌ಪ್ರೀತ್ ಬೂಮ್ರಾ ಅರ್ಷದೀಪ್ ಸಿಂಗ್ ಕುಲದೀಪ್ ಯಾದವ್ ಹರ್ಷಿತ್ ರಾಣಾ ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್) ರಿಂಕು ಸಿಂಗ್ ವಾಷಿಂಗ್ಟನ್ ಸುಂದರ್.
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ) ಸೀನ್ ಅಬಾಟ್ (1 3ನೇ ಪಂದ್ಯ) ಝೇವಿಯರ್ ಬಾರ್ಟ್‌ಲೆಟ್ ಮಹಲಿ ಬಿಯರ್ಡ್‌ಮ್ಯಾನ್ (3 5ನೇ ಪಂದ್ಯ) ಟಿಮ್ ಡೇವಿಡ್ ಬೆನ್ ಡ್ವಾರ್‌ಷಿಯಸ್ (4 5 ನೇ ಪಂದ್ಯ) ನೇಥನ್ ಎಲಿಸ್ ಜೋಶ್ ಹೇಜಲ್‌ವುಡ್ (1 2ನೇ ಪಂದ್ಯ) ಗ್ಲೆನ್ ಮ್ಯಾಕ್ಸ್‌ವೆಲ್ (3 5ನೇ ಪಂದ್ಯ) ಟ್ರಾವಿಸ್ ಹೆಡ್ ಜೋಷ್ ಇಂಗ್ಲಿಸ್ ಮ್ಯಾಥ್ಯೂ ಕ್ಹುನೇಮನ್ ಮಿಚೆಲ್ ಒವೆನ್ ಜೋಶ್ ಫಿಲಿಪ್ ತನ್ವೀರ್ ಸಂಘಾ ಮ್ಯಾಥ್ಯೂ ಶಾರ್ಟ್ ಮಾರ್ಕಸ್ ಸ್ಟೋಯಿನಿಸ್.
ಪಂದ್ಯ ಆರಂಭ: ಮಧ್ಯಾಹ್ನ 1.45 (ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊಸ್ಟಾರ್ ಆ್ಯಪ್
ಟಿ20 ಮುಖಾಮುಖಿ ಪಂದ್ಯ; 32
ಭಾರತ ಜಯ; 20
ಆಸ್ಟ್ರೇಲಿಯಾ ಗೆಲುವು; 11
ಫಲಿತಾಂಶವಿಲ್ಲ;1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.