ADVERTISEMENT

ಶ್ರೀಲಂಕಾದ ಇಬ್ಬರು ಕ್ರಿಕೆಟಿಗರಿಗೆ ಕೋವಿಡ್‌

ನಿಗದಿಯಂತೆ ಏಕದಿನ ಪಂದ್ಯ: ನಿರ್ಧಾರ

ಏಜೆನ್ಸೀಸ್
Published 23 ಮೇ 2021, 6:16 IST
Last Updated 23 ಮೇ 2021, 6:16 IST

ಢಾಕ್ಕಾ: ಶ್ರೀಲಂಕಾ ತಂಡದ ಇಬ್ಬರು ಆಟಗಾರರಿಗೆ ಮತ್ತು ಬೌಲಿಂಗ್‌ ಕೋಚ್‌ಗೆ ಕೋವಿಡ್‌ ದೃಢಪಟ್ಟಿದೆ. ಇದರ ಹೊರತಾಗಿಯೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಣ ಮೊದಲ ಏಕದಿನ ಕ್ರಿಕೆಟ್‌ ಪಂದ್ಯ ನಿಗದಿಯಂತೆ ಇಂದು ನಡೆಯಲಿದೆ.

ಈ ವಿಷಯವನ್ನು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಇಸುರು ಉಡಾನ ಮತ್ತು ಶಿರಾನ್‌ ಫೆರ್ನಾಂಡೊ ಜೊತೆಗೆ ಬೌಲಿಂಗ್‌ ಕೋಚ್‌ ಚಾಮಿಂದ ವಾಸ್‌ ಅವರಿಗೂ ಸೋಂಕು ತಗುಲಿರುವುದು ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಖಚಿತವಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಭಾನುವಾರ ತಿಳಿಸಿದೆ.

‘ಭಾನುವಾರ ಅವರನ್ನು ಎರಡನೇ ಬಾರಿ ಪರೀಕ್ಷೆಗೊಳಪಡಿಸಲಾಗಿದೆ. ಫಲಿತಾಂಶ ಎದುರುನೋಡಲಾಗಿದೆ’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಿರ್ದೇಶಕ ಜಲಾಲ್‌ ಯೂನಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರಿಗೆ ವರದಿಯಲ್ಲಿ ಸೋಂಕು ದೃಢಪಟ್ಟರೆ, ಏಕಾಂತವಾಸಕ್ಕೆ ವ್ಯವಸ್ಥೆ ಮಾಡಲಾಗುವುದು. ಆದರೆ ಇಂದಿನ ಪಂದ್ಯ ನಿಗದಿಯಂತೆ ನಡೆಯಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಮೂರು ಪಂದ್ಯಗಳ ಏಕದಿನ ಸರಣಿಯ ಉಳಿದ ಎರಡು ಪಂದ್ಯಗಳು ಇದೇ ತಿಂಗಳ 25 ಮತ್ತು 28ರಂದು ನಡೆಯಲಿದೆ. ಈ ಪಂದ್ಯಗಳೂ ಢಾಕಾದ ಶೇರ್‌–ಇ–ಬಾಂಗ್ಲಾ ನ್ಯಾಷನಲ್‌ ಸ್ಟೇಡಿಯಮ್‌ನಲ್ಲಿ ನಡೆಯಲಿವೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಈಗ ಕೊರೊನಾ ಅಲೆ ಜೋರಾಗಿಯೇ ಎದ್ದಿದೆ. ಏಪ್ರಿಲ್‌ ತಿಂಗಳ ಮಧ್ಯದಿಂದ ಬಾಂಗ್ಲಾದೇಶದಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಯಲ್ಲಿದೆ. ಮಾರುಕಟ್ಟೆಗಳು ಬಂದ್‌ ಆಗಿವೆ. ಸೋಂಕು ನಿಯಂತ್ರಣಕ್ಕೆ ವಿಮಾನ ಸಂಚಾರದ ಮೇಲೂ ನಿರ್ಬಂಧ ಹೇರಲಾಗಿದೆ.

ಶ್ರೀಲಂಕಾದಲ್ಲೂ ಈಗ ಒಂದು ವಾರದ ಕರ್ಫ್ಯೂ ಜಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.