ADVERTISEMENT

ಬಾಂಗ್ಲಾದೇಶಕ್ಕೆ ಗೆಲುವು

ಮಹಮದುಲ್ಲಾಗೆ ಜಯದ ಕಾಣಿಕೆ

ಏಜೆನ್ಸೀಸ್
Published 11 ಜುಲೈ 2021, 15:49 IST
Last Updated 11 ಜುಲೈ 2021, 15:49 IST

ಹರಾರೆ (ಎಎಫ್‌ಪಿ): ಕೊನೆಯ ಹಂತದಲ್ಲಿ ಬ್ಯಾಟ್ಸಮನ್ನರ ಪ್ರತಿರೋಧ ಮತ್ತು ಕೈಬಿಟ್ಟ ಕ್ಯಾಚುಗಳ ಹೊರತಾಗಿಯೂ ಬಾಂಗ್ಲಾದೇಶ ತಂಡ ಏಕೈಕ ಕ್ರಿಕೆಟ್‌ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು 220 ರನ್‌ಗಳ ದೊಡ್ಡ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಯಿತು.

ಗೆಲುವಿಗೆ 477 ರನ್‌ಗಳ ದೊಡ್ಡ ಗುರಿಯನ್ನು ಬೆಂಬತ್ತಿದ್ದ ಆತಿಥೇಯರು ಪಂದ್ಯದ ಅಂತಿಮ ದಿನವಾದ ಭಾನುವಾರ 256 ರನ್‌ಗಳಿಗೆ ಆಲೌಟ್‌ ಆದರು. ನೈಟ್‌ ವಾಚ್‌ಮನ್ ಡೊನಾಲ್ಡ್‌ ಟಿರಿಪಾನೊ ಮತ್ತು ವೇಗದ ಬೌಲರ್‌ ಬ್ಲೆಸಿಂಗ್‌ ಮುಝರಬಾನಿ ಅವರು ದಿಟ್ಟ ಆಟವಾಡಿ ಬಾಂಗ್ಲಾ ತಂಡದ ಸಂಭ್ರಮಾಚರಣೆಯನ್ನು ವಿಳಂಬಗೊಳಿಸಿದರು.

ದೇಶದ ಹೊರಗೆ ಬಾಂಗ್ಲಾ ತಂಡಕ್ಕೆ ಇದು ಐದನೇ ಜಯ. ಮಾತ್ರವಲ್ಲ, ಬಾಂಗ್ಲಾ ಆಟಗಾರರು ಟೆಸ್ಟ್‌ಗೆ ವಿದಾಯ ಘೋಷಿಸಿದ ಮಹಮದುಲ್ಲಾ ರಿಯಾದ್‌ ಅವರಿಗೂ ಕೊನೆಯ ಟೆಸ್ಟ್‌ನಲ್ಲಿ ಗೆಲುವಿನ ಕಾಣಿಕೆ ನೀಡಿದರು. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅನುಭವಿ ಮಹಮದುಲ್ಲಾ ಜೀವನಶ್ರೇಷ್ಠ ಗಳಿಕೆಯಾಗಿ ಅಜೇಯ 150 ರನ್‌ ಬಾರಿಸಿದ್ದರು.

ADVERTISEMENT

2009ರಲ್ಲಿ ಟೆಸ್ಟ್‌ಗೆ ನಾಂದಿ ಹಾಡಿದ್ದ ಮಹಮದುಲ್ಲಾ ಅವರಿಗೆ ಇದು 50ನೇ ಟೆಸ್ಟ್‌ ಪಂದ್ಯವಾಗಿತ್ತು. ಪಂದ್ಯದ ಕೊನೆಯ ದಿನ ಅವರು ತಂಡವನ್ನು ಕ್ರೀಡಾಂಗಣದೊಳಕ್ಕೆ ಮುನ್ನಡೆಸಿದರು.

ಲಂಚ್‌ ನಂತರ ತಿರಿಪಾನೊ 144 ಎಸೆತಗಳನ್ನು ಆಡಿ 52 ರನ್‌ ಗಳಿಸಿದರೆ, ಮುಝರಬಾನಿ 93 ನಿಮಿಷ ಬೇರೂರಿ ಅಜೇಯ 30 ರನ್‌ ಗಳಿಸಿದರು. 9ನೇ ವಿಕೆಟ್‌ಗೆ 41 ರನ್‌ ಸೇರಿಸಿ ಪ್ರವಾಸಿಗರಿಗೆ ಕೆಲಕಾಲ ತಲೆಬೇನೆ ಉಂಟುಮಾಡಿದರು.

ಸ್ಕೋರುಗಳು: ಬಾಂಗ್ಲಾದೇಶ: 468 ಮತ್ತು 1 ವಿಕೆಟ್‌ಗೆ 284 ಡಿ.; ಜಿಂಬಾಬ್ವೆ: 276 ಮತ್ತು 94.4 ಓವರುಗಳಲ್ಲಿ 256 (ಬ್ರೆಂಡನ್‌ ಟೇಲರ್‌ 92, ಡಿ.ಮೈರ್ಸ್‌ 26, ಡಿ.ತಿರಪಾನೊ 52, ಬಿ.ಮುಝರಬಾನಿ ಔಟಾಗದೇ 30; ಮೆಹಿದಿ ಹಸನ್‌ 66ಕ್ಕೆ4, ತಸ್ಕಿನ್‌ ಅಹ್ಮದ್‌ 82ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.