ADVERTISEMENT

ಆಟಗಾರರಿಗೆ ನೆಕ್‌ ಗಾರ್ಡ್‌ ಹೆಲ್ಮೆಟ್‌ ಮಹತ್ವ ತಿಳಿಸಿದ ಬಿಸಿಸಿಐ

ಪಿಟಿಐ
Published 20 ಆಗಸ್ಟ್ 2019, 19:30 IST
Last Updated 20 ಆಗಸ್ಟ್ 2019, 19:30 IST
   

ನವದೆಹಲಿ: ಹೊಡೆತ ತಾಳಿಕೊಳ್ಳಬಲ್ಲ ಹೆಲ್ಮೆಟ್‌ಗಳನ್ನು ಧರಿಸುವ ಮಹತ್ವದ ಕುರಿತು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಆಟಗಾರರಿಗೆ ಮಾಹಿತಿ ನೀಡಿದೆ. ಆದರೆ ‘ನೆಕ್‌ ಗಾರ್ಡ್‌’ (ಕತ್ತಿನ ಕವಚ) ಇರುವ ಹೆಲ್ಮೆಟ್‌ ಧರಿಸುವ ನಿರ್ಧಾರವನ್ನು ಅದು ಕ್ರಿಕೆಟಿಗರಿಗೇ ಬಿಟ್ಟಿದೆ.

‘ನೆಕ್‌ ಗಾರ್ಡ್‌’ ಕಡ್ಡಾಯ ಮಾಡಬೇಕೆಂಬ ಕೂಗೆದ್ದಿರುವ ನಡುವೆಯೇ ಬಿಸಿಸಿಐ ಈ ರೀತಿ ಹೇಳಿದೆ. ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನ ನಾಲ್ಕನೇ ದಿನ ಇಂಗ್ಲೆಂಡ್‌ನ ‌‌ವೇಗಿ ಜೋಫ್ರಾ ಆರ್ಚರ್‌ ಅವರ ಬೌನ್ಸರ್‌ ಒಂದು ಕತ್ತಿಗೆ ಅಪ್ಪಳಿಸಿದ ಕಾರಣ ಸ್ಟೀವ್‌ ಸ್ಮಿತ್‌ ಕುಸಿದು ಬಿದ್ದು ಕೆಲಕಾಲ ನರಳಿದ್ದರು.

‘ಆಸ್ಟ್ರೇಲಿಯಾದ ಆಟಗಾರರು ಕತ್ತಿನ ಕವಚ ಹೊಂದಿರುವ ಶಿರಸ್ತ್ರಾಣಗಳನ್ನು ಧರಿಸಬೇಕಾದ ದಿನಗಳು ಬಹಳ ದೂರವಿಲ್ಲ’ ಎಂದುಸ್ಮಿತ್‌ ಅವರಿಗಾದ ಏಟಿನ ಘಟನೆಯ ನಂತರ ರಾಷ್ಟ್ರೀಯ ತಂಡದ ವೈದ್ಯಕೀಯ ಮುಖ್ಯಸ್ಥರು ಹೇಳಿದ್ದರು.‌

ADVERTISEMENT

‘ಹೆಲ್ಮೆಟ್‌ಗಳ ಜೊತೆ ಬೌನ್ಸರ್‌ ಏಟುಗಳನ್ನು ತಾಳಿಕೊಳ್ಳಬಲ್ಲ ನೆಕ್‌ ಗಾರ್ಡ್‌ ಧರಿಸುವುದಕ್ಕೆ ಸಂಬಂಧಿಸಿ ಆಟಗಾರರ ಜೊತೆ ಮಾತನಾಡಿದ್ದೇವೆ. ಶಿಖರ್‌ ಧವನ್‌ ಸೇರಿದಂತೆ ಕೆಲವು ಆಟಗಾರರು ಅದನ್ನು ಬಳಸುತ್ತಿದ್ದಾರೆ. ಆದರೆ ಇದನ್ನು ನಾವು ಅವರ ಮೇಲೆ ಹೇರುವಂತಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಹೆಲ್ಮೆಟ್‌ಗಳು ಆಟಗಾರರಿಗೆ ಆರಾಮದಾಯಕವಾಗಿರಬೇಕು. ಕೆಲವು ಆಟಗಾರರಿಗೆ ಕುತ್ತಿಗೆಯ ಸುತ್ತ ಸುರಕ್ಷಾ ಕವಚ ಇದ್ದರೆ ಕಿರಿಕಿರಿ ಎನಿಸಬಹುದು. ಅಂತಿಮವಾಗಿ ಈ ವಿಷಯ ಆಟಗಾರರಿಗೇ ಬಿಡುವುದು ಒಳ್ಳೆಯೆನಿಸುತ್ತದೆ ಎಂದರು.

‘ನೆಕ್‌ ಗಾರ್ಡ್‌ ಹೊಂದಿರುವ ಹೆಲ್ಮೆಟ್‌ಗಳನ್ನು ಧರಿಸುವುದನ್ನು ಕಡ್ಡಾಯ ಮಾಡಬೇಕು’ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ಜೊತೆ 2012–17ರವರೆಗೆ ಕೆಲಸ ಮಾಡಿದ್ದ ವೈದ್ಯ ಪೀಟರ್ ಬ್ರೂಕ್ನರ್‌, ಆಸ್ಟ್ರೇಲಿಯಾದ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.