ADVERTISEMENT

ಐಪಿಎಲ್ ತಂಡಗಳ ಮಾಲೀಕರೊಂದಿಗೆ ಸಭೆ ಕರೆದ ಬಿಸಿಸಿಐ; ಹರಾಜು ಕುರಿತು ಚರ್ಚೆ ಸಾಧ್ಯತೆ

ಪಿಟಿಐ
Published 1 ಏಪ್ರಿಲ್ 2024, 9:25 IST
Last Updated 1 ಏಪ್ರಿಲ್ 2024, 9:25 IST
   

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ಹತ್ತು ತಂಡಗಳ ಮಾಲೀಕರ ಅನೌಪಚಾರಿಕ ಸಭೆಯನ್ನು ಏಪ್ರಿಲ್‌ 16ರಂದು ಅಹಮದಾಬಾದಿನಲ್ಲಿ ಕರೆದಿದೆ. ಆಟಗಾರರ ಬಿಡ್‌, ಉಳಿಸಿಕೊಳ್ಳುವ ಹರಾಜು ಪ್ರಕ್ರಿಯೆಗೆ ಈಗಿರುವ ಮೊತ್ತವನ್ನು ಹೆಚ್ಚಿಸುವ ವಿಷಯಕ್ಕೆ ಸಂಬಂಧಿಸಿ ಚರ್ಚೆಯಾಗುವ ಸಾಧ್ಯತೆಯಿದೆ.

ಅಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಪಂದ್ಯ ಇದ್ದು, ಈ ಸಂದರ್ಭದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

‘ಈ ಅನೌಪಚಾರಿಕ ಸಭೆಗೆ ನಿರ್ದಿಷ್ಟ ಕಾರ್ಯಸೂಚಿಯಿಲ್ಲ. ಐಪಿಎಲ್ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಎಲ್ಲ ಭಾಗಿದಾರರ ಒಟ್ಟಿಗೆ ಸೇರಲು ಇದು ಅವಕಾಶ ಕಲ್ಪಿಸಲಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ADVERTISEMENT

ವರ್ಷದ ಕೊನೆಗೆ ನಡೆಯಲಿರುವ ಮೆಗಾ ಆಕ್ಷನ್ (ಹರಾಜು), ಹರಾಜು ಪ್ರಕ್ರಿಯೆಗೆ ಫ್ರಾಂಚೈಸಿಗೆ ಈಗಿರುವ ₹100 ಕೋಟಿ ಮೊತ್ತವನ್ನು ಹೆಚ್ಚಿಸುವ ವಿಷಯ ಚರ್ಚೆಯಾಗುವ ನಿರೀಕ್ಷೆಯಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಐಪಿಎಲ್‌ ಚೇರ್ಮನ್ ಅರುಣ್ ಧುಮಾಲ್ ಅವರು ಭಾಗವಹಿಸಲಿದ್ದಾರೆ.

ಈಗಿರುವ ನಿಯಮದ ಪ್ರಕಾರ ತಂಡಗಳು ಆಕ್ಷನ್‌ಗೆ ಪೂರ್ವದಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಮೆಗಾ ಆಕ್ಷನ್ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, 2022ರಲ್ಲಿ ಕೊನೆಯ ಬಾರಿ ನಡೆದಿತ್ತು. 2025ರ ಆವೃತ್ತಿಗೆ ಮುಂದಿನ ಆಕ್ಷನ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.