ADVERTISEMENT

ಶಮಿ, ಜಡೇಜ, ಬೂಮ್ರಾ, ಪೂನಂ ಯಾದವ್‌ಗೆ ಅರ್ಜುನ ಪ್ರಶಸ್ತಿ: ಬಿಸಿಸಿಐ ಶಿಫಾರಸು

ಪಿಟಿಐ
Published 27 ಏಪ್ರಿಲ್ 2019, 12:19 IST
Last Updated 27 ಏಪ್ರಿಲ್ 2019, 12:19 IST
ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ ಹಾಗೂ ಪೂನಂ ಯಾದವ್
ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ ಹಾಗೂ ಪೂನಂ ಯಾದವ್    

ನವದೆಹಲಿ:ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜ ಮತ್ತು ಪೂನಮ್‌ ಯಾದವ್‌ ಅವರ ಹೆಸರುಗಳನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಶನಿವಾರ ನಡೆದ ಆಡಳಿತಾಧಿಕಾರಿಗಳ (ಸಿಒಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

25 ವರ್ಷ ವಯಸ್ಸಿನ ಬೂಮ್ರಾ, ಮೂರು ಮಾದರಿಗಳಲ್ಲೂ (ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20) ಭಾರತ ತಂಡದ ಸದಸ್ಯರಾಗಿದ್ದಾರೆ. ವಿಶ್ವಕಪ್‌ ತಂಡದಲ್ಲೂ ಸ್ಥಾನ ಗಳಿಸಿದ್ದಾರೆ. 49 ಏಕದಿನ ಪಂದ್ಯಗಳನ್ನು ಆಡಿರುವ ಅವರು 22.15ರ ಸರಾಸರಿಯಲ್ಲಿ 85 ವಿಕೆಟ್‌ ಕಬಳಿಸಿದ್ದಾರೆ. 42 ಟ್ವೆಂಟಿ–20 ಪಂದ್ಯಗಳಿಂದ 51 ವಿಕೆಟ್‌ ಉರುಳಿಸಿದ್ದಾರೆ. 10 ಟೆಸ್ಟ್‌ ಆಡಿರುವ ಅವರ ಖಾತೆಯಲ್ಲಿ 49 ವಿಕೆಟ್‌ಗಳು ಇವೆ.

ADVERTISEMENT

ಮಧ್ಯಮ ವೇಗದ ಬೌಲರ್‌ ಶಮಿ ಮತ್ತು ಆಲ್‌ರೌಂಡರ್‌ ಜಡೇಜ ಅವರೂ ವಿಶ್ವಕಪ್‌ ತಂಡದಲ್ಲಿ ಸ್ಥಾನ ಹೊಂದಿದ್ದಾರೆ. ಪಶ್ಚಿಮ ಬಂಗಾಳದ ಶಮಿ, 40 ಟೆಸ್ಟ್‌, 63 ಏಕದಿನ ಮತ್ತು ಏಳು ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 144, 113 ಮತ್ತು ಎಂಟು ವಿಕೆಟ್‌ ಪಡೆದಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಅವರು ಒಟ್ಟು 17 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು. ಮೊಣಕಾಲು ಮತ್ತು ಮಂಡಿಯ ನೋವಿನ ಕಾರಣ ವಿಶ್ವಕಪ್‌ ನಂತರ ಒಟ್ಟು 27 ತಿಂಗಳು ಅಂಗಳದಿಂದ ದೂರ ಉಳಿದಿದ್ದರು.

ಈ ವರ್ಷ ಶಮಿ, 11 ಏಕದಿನ ಪಂದ್ಯಗಳನ್ನು ಆಡಿದ್ದು 19 ವಿಕೆಟ್‌ ಕಬಳಿಸಿದ್ದಾರೆ.

30 ವರ್ಷದ ಜಡೇಜ 41 ಟೆಸ್ಟ್‌, 151 ಏಕದಿನ ಮತ್ತು 40 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು ಕ್ರಮವಾಗಿ 1485, 2035 ಮತ್ತು 116ರನ್‌ಗಳನ್ನು ದಾಖಲಿಸಿದ್ದಾರೆ. ಜೊತೆಗೆ ಕ್ರಮವಾಗಿ 192, 174 ಮತ್ತು 31 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.

27 ವರ್ಷದ ಲೆಗ್‌ಸ್ಪಿನ್ನರ್‌ ಪೂನಮ್‌ ಕೂಡಾ ಅಮೋಘ ಸಾಧನೆ ಮಾಡಿದ್ದಾರೆ. 41 ಏಕದಿನ ಪಂದ್ಯಗಳನ್ನು ಆಡಿರುವ ಅವರು ಒಟ್ಟು 63 ವಿಕೆಟ್‌ ಉರುಳಿಸಿದ್ದಾರೆ. 54 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ ಅವರ ಖಾತೆಯಲ್ಲಿ 74 ವಿಕೆಟ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.