ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಮುಂಬೈ: ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಆಟಗಾರರು ತಮ್ಮ ಕುಟುಂಬದವರನ್ನು ಕರೆದೊಯ್ಯುವುದರ ಮೇಲೆ ನಿಯಂತ್ರಣ ಹೇರಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೀಗ ನಿಯಮ ಸಡಿಲಿಸಲು ಮಾಡಲು ಮುಂದಾಗಿದೆ.
ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಕುಟುಂಬದವರನ್ನು ದೀರ್ಘಾವಧಿಗೆ ತಮ್ಮೊಂದಿಗೆ ಇರಿಸಿಕೊಳ್ಳಲು ಆಟಗಾರರು ಬಯಸುವುದಾದರೆ ಅನುಮತಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ನಡೆದ ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3–1 ಅಂತರದ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ, ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಆಟಗಾರರು ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ನಿಯಂತ್ರಿಸಲು ಬಿಸಿಸಿಐ ಕ್ರಮ ಕೈಗೊಂಡಿತ್ತು. 45 ದಿನಗಳ ಪ್ರವಾಸದ ಸಂದರ್ಭದಲ್ಲಿ, ಕುಟುಂಬದವರೊಂದಿಗೆ ಇರಲು 14 ದಿನಗಳಿಗಷ್ಟೇ ಅವಕಾಶ ನೀಡಿತ್ತು. ಆಟಗಾರರ ಪತ್ನಿ, ಮಕ್ಕಳು ಅಥವಾ ಗೆಳತಿ, ಅಲ್ಪಾವಧಿಯ ಪ್ರವಾಸಗಳ ಸಂದರ್ಭದಲ್ಲಿ ಗರಿಷ್ಠ ಒಂದು ವಾರವಷ್ಟೇ ಜೊತೆಗಿರಬಹುದಾಗಿತ್ತು.
ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ ಅವರ ಕುಟುಂಬದವರು ದುಬೈನಲ್ಲಿ ಉಳಿದಿದ್ದರು. ಆದರೆ, ಅವರ ವೆಚ್ಚವನ್ನು ಆಟಗಾರರೇ ನೋಡಿಕೊಂಡಿದ್ದರು.
ಐಪಿಎಲ್‌ನಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರಾ ಆಟಗಾರ ವಿರಾಟ್, ಬಿಸಿಸಿಐ ನಿಲುವಿನ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಆಟಗಾರರು ಎದುರಿಸುವ ಮಾನಸಿಕ ಸವಾಲುಗಳ ಬಗ್ಗೆ ಒತ್ತಿಹೇಳುತ್ತಲ್ಲೇ, ಮಂಡಳಿಯ ಕ್ರಮವನ್ನು ಟೀಕಿಸಿದ್ದರು.
'ಕುಟುಂಬದ ಪಾತ್ರವನ್ನು ವಿವರಿಸುವುದು ತುಂಬಾ ಕಷ್ಟ. ನನ್ನ ಕೋಣೆಯಲ್ಲಿ ಒಬ್ಬಂಟಿಯಾಗಿ ಬೇಸರದಿಂದ ಇರಲು ಇಷ್ಟಪಡುವುದಿಲ್ಲ. ಸಾಮಾನ್ಯರಂತೆ ಇರಲು ಬಯಸುತ್ತೇನೆ. ಆಗಷ್ಟೇ, ನಮ್ಮ ಆಟವನ್ನು ಜವಾಬ್ದಾರಿಯುತವಾಗಿ ಪರಿಗಣಿಸಲು ಸಾಧ್ಯ' ಎಂದಿದ್ದರು.
ಮಾಜಿ ಕ್ರಿಕೆಟಿಗ ಮತ್ತು ಭಾರತಕ್ಕೆ ಮೊದಲ ಸಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಅವರೂ ಆಟಗಾರರೊಂದಿಗೆ ಕುಟುಂಬ ಪ್ರಯಾಣಿಸುವುದನ್ನು ಬೆಂಬಲಿಸಿದ್ದರು. ಇದರ ಬೆನ್ನಲ್ಲೇ, ಬಿಸಿಸಿಐ ತನ್ನ ನಿಯಮ ಸಡಿಲಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.