ADVERTISEMENT

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್| ರಹಾನೆ ಆಯ್ಕೆಗೂ ಮುನ್ನ ಧೋನಿ ಜತೆ ಸಮಾಲೋಚಿಸಿದ್ದ BCCI?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2023, 16:16 IST
Last Updated 27 ಏಪ್ರಿಲ್ 2023, 16:16 IST
ಮಹೇಂದ್ರ ಸಿಂಗ್‌ ಧೋನಿ ಮತ್ತು ಅಜಿಂಕ್ಯ ರಹಾನೆ
ಮಹೇಂದ್ರ ಸಿಂಗ್‌ ಧೋನಿ ಮತ್ತು ಅಜಿಂಕ್ಯ ರಹಾನೆ    

ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಅಜಿಂಕ್ಯ ರಹಾನೆ ಅವರನ್ನು ಆಯ್ಕೆ ಮಾಡುವುದಕ್ಕೂ ಮೊದಲು ಬಿಸಿಸಿಐ ಎಂಎಸ್ ಧೋನಿಯಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿತ್ತು ಎಂದು ವರದಿಯಾಗಿದೆ.

ಈ ಬಗ್ಗೆ ಸುದ್ದಿ ಮಾಧ್ಯಮ ‘SportsKeeda’ ಮೂಲಗಳ ಮಾಹಿತಿ ಉಲ್ಲೇಖಿಸಿ ಗುರುವಾರ ವರದಿ ಪ್ರಕಟಿಸಿದೆ.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ರಹಾನೆ ಆಡುತ್ತಿದ್ದಾರೆ. ಈ ಋತುವಿನಲ್ಲಿ ರಹಾನೆ ಐದು ಪಂದ್ಯಗಳಿಂದ 209 ರನ್ ಗಳಿಸಿದ್ದಾರೆ.

ADVERTISEMENT

ಐಪಿಎಲ್‌ನಲ್ಲಿನ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ರಹಾನೆ ಅವರು, 15 ತಿಂಗಳ ನಂತರ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

ಏ.23ರಂದು ಕೆಕೆಆರ್‌ ವಿರುದ್ಧ ಕೋಲ್ತತ್ತದ ಈಡನ್‌ ಗಾರ್ಡನ್‌ನಲ್ಲಿ ನಡೆದಿದ್ದ ಐಪಿಎಲ್‌ ಪಂದ್ಯದಲ್ಲಿ ರಹಾನೆ ಅವರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೇವಲ 29 ಎಸೆತೆಗಳಲ್ಲಿ 71ರನ್‌ ಗಳಿಸಿ ಗಮನ ಸೆಳೆದಿದ್ದರು.

ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ತಂಡ ಪ್ರಕಟಿಸಿದ ಬಿಸಿಸಿಐ: ರಹಾನೆಗೆ ಸ್ಥಾನ

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.

ಡಬ್ಲ್ಯುಟಿಸಿ ಫೈನಲ್‌ ಓವಲ್‌ ಕ್ರೀಡಾಂಗಣದಲ್ಲಿ ಜೂನ್‌ 7 ರಿಂದ 11ರವರೆಗೆ ಭಾರತ – ಆಸ್ಟ್ರೇಲಿಯಾ ನಡುವೆ ನಡೆಯಲಿದೆ.

ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್‌.ಭರತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್‌ ಉನದ್ಕತ್‌

ಭಾರತ ಕ್ರಿಕೆಟ್‌ ತಂಡದ ಪ್ರಮುಖ ಆಟಗಾರರು ಐಪಿಎಲ್‌ ಟೂರ್ನಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರೆ, ತಂಡದ ಕೋಚಿಂಗ್‌ ಸಿಬ್ಬಂದಿ ಮುಂಬರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯದತ್ತ ಗಮನ ಕೇಂದ್ರೀಕರಿಸಿದೆ.

ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡವನ್ನು ಸಜ್ಜುಗೊಳಿಸುವ ಸಂಬಂಧ ಚರ್ಚಿಸಲು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ನೇತೃತ್ವದಲ್ಲಿ ತಂಡದ ಕೋಚಿಂಗ್‌ ಸಿಬ್ಬಂದಿ ಬೆಂಗಳೂರಿನ ಎನ್‌ಸಿಎನಲ್ಲಿ ಸಭೆ ನಡೆಸಲಾಗಿತ್ತು.

‘ದ್ರಾವಿಡ್‌, ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆ ಮತ್ತು ಕೋಚಿಂಗ್‌ನ ಇತರ ಸಿಬ್ಬಂದಿ ಸೇರಲಿದ್ದಾರೆ. ತಂಡಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಎನ್‌ಸಿಎ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್‌ ಅವರೊಂದಿಗೆ ಚರ್ಚೆ ನಡೆಯಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.