ADVERTISEMENT

ದೇಣಿಗೆ ಸಂಗ್ರಹಿಸಲು ಹಾಫ್‌ ಮ್ಯಾರಥಾನ್‌ ಓಡಿದ ಸ್ಟೋಕ್ಸ್‌

​ಪ್ರಜಾವಾಣಿ ವಾರ್ತೆ
Published 5 ಮೇ 2020, 19:30 IST
Last Updated 5 ಮೇ 2020, 19:30 IST
   

ಬೆಂಗಳೂರು: ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ಅವರು ಕೋವಿಡ್‌–19 ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುವ ಸಲುವಾಗಿ ಮಂಗಳವಾರ ಹಾಫ್‌ ಮ್ಯಾರಥಾನ್‌ ಓಡಿದ್ದಾರೆ.

‘ಬ್ರಿಟನ್‌ನ ನ್ಯಾಷನಲ್‌ ಹೆಲ್ತ್‌ ಸರ್ವಿಸಸ್‌ (ಎನ್‌ಎಚ್‌ಎಸ್‌) ಹಾಗೂ ‘ಚಾನ್ಸ್‌ ಟು ಶೈನ್‌’ ಕ್ರಿಕೆಟ್‌ ಫೌಂಡೇಷನ್‌ಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ‘ಕ್ರಿಕೆಟ್‌ ಗಾರ್ಡನ್‌ ಮ್ಯಾರಥಾನ್‌ ಟೀಮ್‌’ನ ಮೂವರು ಸದಸ್ಯರು ತಮ್ಮ ಮನೆಯ ಸುತ್ತ ಮುತ್ತ ಒಟ್ಟು 42 ಕಿಲೊ ಮೀಟರ್ಸ್ (ಫುಲ್‌ ಮ್ಯಾರಥಾನ್‌) ಓಡಿದ ಸುದ್ದಿ ತಿಳಿದು ಖುಷಿಯಾಯಿತು. ಆ ತಂಡದಿಂದ ಪ್ರೇರಣೆ ಪಡೆದು ನಾನು ಮನೆಯ ಅಕ್ಕಪಕ್ಕದ ರಸ್ತೆಗಳಲ್ಲಿ ಓಡಿದೆ’ ಎಂದುಸ್ಟೋಕ್ಸ್‌, ತಿಳಿಸಿದ್ದಾರೆ.

ಹಾಫ್‌ ಮ್ಯಾರಥಾನ್‌ ಪೂರ್ಣಗೊಳಿಸಿದ ಬಳಿಕ ಅವರನ್ನು ಮಕ್ಕಳು ಅಭಿನಂದಿಸಿದ್ದಾರೆ. ಈ ವಿಡಿಯೊವನ್ನು ಅವರು ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿಹಾಕಿದ್ದಾರೆ. ‘ಒಂದು ಒಳ್ಳೆಯ ಕೆಲಸಕ್ಕಾಗಿ ಅಂತೂ ಹಾಫ್‌ ಮ್ಯಾರಥಾನ್‌ ಪೂರ್ಣಗೊಳಿಸಿದೆ’ ಎಂದೂ ಬರೆದಿದ್ದಾರೆ.

ADVERTISEMENT

‘ಎಂಟು ಕಿಲೊ ಮೀಟರ್ಸ್‌ ಓಡಿದ್ದೇ ನನ್ನ ಈವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. 21.10 ಕಿಲೊ ಮೀಟರ್ಸ್ ದೂರವನ್ನು 1 ಗಂಟೆ 39 ನಿಮಿಷ 41 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದೆ. 1,760 ಕ್ಯಾಲೊರಿಯನ್ನೂ ಕರಗಿಸಿದೆ. ನನ್ನ ಈ ಕಾರ್ಯ ಹಲವರಿಗೆ ಸ್ಫೂರ್ತಿಯಾಗಲಿದೆ ಎಂಬ ನಂಬಿಕೆ ಇದೆ. ಸಾಧ್ಯವಾದಷ್ಟು ಹೆಚ್ಚು ಮಂದಿ ಕ್ರಿಕೆಟ್‌ ಗಾರ್ಡನ್‌ ಮ್ಯಾರಥಾನ್‌ ತಂಡಕ್ಕೆ ದೇಣಿಗೆ ನೀಡಲು ಮುಂದೆ ಬನ್ನಿ. ನಾನೂ ಅವರೊಂದಿಗೆ ಕೈಜೋಡಿಸಿದ್ದೇನೆ’ ಎಂದಿದ್ದಾರೆ.

‌ಇಂಗ್ಲೆಂಡ್‌ ತಂಡವು 2019ರ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ 28 ವರ್ಷ ವಯಸ್ಸಿನ ಸ್ಟೋಕ್ಸ್‌ ಬಹುಮುಖ್ಯ ಪಾತ್ರ ವಹಿಸಿದ್ದರು. ಆಂಗ್ಲರ ನಾಡಿನ ತಂಡ ಜಯಿಸಿದ ಚೊಚ್ಚಲ ವಿಶ್ವಕಪ್‌ ಅದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.