ನವದೆಹಲಿ: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಲಿಖಿತ ವಿವರಣೆ ಸಲ್ಲಿಸಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂಬುಡ್ಸ್‌ಮನ್ ಮತ್ತು ನೈತಿಕ ಅಧಿಕಾರಿ ಅರುಣ್ ಮಿಶ್ರಾ ಸೂಚಿಸಿದ್ದಾರೆ.
ಹೋದ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡವು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿತ್ತು. ಆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. 11 ಮಂದಿ ಮೃತರಾಗಿದ್ದರು.
ಈ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರು ನೀಡಿರುವ ಲಿಖಿತ ದೂರಿಗೆ ಸ್ಪಂದಿಸಿರುವ ಒಂಬುಡ್ಸ್‌ಮನ್ ಮಿಶ್ರಾ ಅವರು ನಾಲ್ಕು ವಾರದೊಳಗೆ ವಿವರಣೆ ಸಲ್ಲಿಸಬೇಕು ಎಂದು ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ನಿರ್ದೇಶಿಸಿದ್ದಾರೆ.
ಈ ದುರಂತದ ವಿಚಾರಣೆ ಮುಕ್ತಾಯವಾಗುವ ತನಕ ಫ್ರ್ಯಾಂಚೈಸಿಯನ್ನು ಬೇರೆಯವರಿಗೆ ಮಾರಾಟ ಮಾಡಬಾರದೆಂದು ಸೂಚಿಸಬೇಕು ಎಂದು ವಿಕಾಸ್ ಕುಮಾರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಒಂಬುಡ್ಸ್‌ಮನ್ ನಿರ್ದೇಶಿಸಿರುವ ಪತ್ರವು ಪಿಟಿಐ ಕೈಸೇರಿದೆ.
‘ಈ ದುರ್ಘಟನೆಯ ತೀವ್ರತೆಯನ್ನು ಅನುಲಕ್ಷಿಸಿ ಕೆಎಸ್‌ಸಿಎ ಮತ್ತು ಆರ್‌ಸಿಬಿ ಫ್ರ್ಯಾಂಚೈಸಿಯು ದೂರುದಾರರಿಗೆ ಲಿಖಿತ ವಿವರಣೆ ಸಲ್ಲಿಸಬೇಕು. ಈ ದೂರನ್ನು ಅವರು 2025ರ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಕೊಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿಯು ಸುರಕ್ಷತಾ ಕ್ರಮಗಳನ್ನು ಪಾಲಿಸದ ಮತ್ತು ನಿರ್ಲಕ್ಷ್ಯದ ಕಾರಣದಿಂದ ದುರ್ಘಟನೆ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದೂ ದೂರಿನಲ್ಲಿ ಹೇಳಿದ್ದಾರೆ. ಆರ್‌ಸಿಬಿಯನ್ನು ಅಮಾನತು ಮಾಡಬೇಕು ಮತ್ತು ಸದ್ಯ ನಡೆಯುತ್ತಿರುವ ಮಾರಾಟ ಪ್ರಕ್ರಿಯೆಯನ್ನು ತಡೆಯಬೇಕೆಂದೂ ದೂರುದಾರರು ಮನವಿ ಮಾಡಿದ್ದಾರೆ’ ಎಂದು ನಿವೃತ್ತ ನ್ಯಾಯಮೂರ್ತಿಯೂ ಆಗಿರುವ ಮಿಶ್ರಾ ನಿರ್ದೇಶಿಸಿದ್ದಾರೆ.
‘ನಾಲ್ಕು ವಾರಗಳಲ್ಲಿ ಕೆಎಸ್‌ಸಿಎ ಮತ್ತು ಆರ್‌ಸಿಬಿಯು ದೂರುದಾರರ ಸವಾಲಿಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು. ಅದರ ಪ್ರತಿಯನ್ನು ದೂರುದಾರರಿಗೂ ಲಗತ್ತಿಸಬೇಕು. ಇದಕ್ಕೆ ಪ್ರತಿಯಾಗಿ ಮರುದೂರು ಸಲ್ಲಿಸಲು ವಿಕಾಸ್ ಕುಮಾರ್ ಅವರಿಗೆ 10 ದಿನಗಳ ಕಾಲಾವಕಾಶ ಇರುತ್ತದೆ’ ಎಂದೂ ತಿಳಿಸಲಾಗಿದೆ.
ಆರ್‌ಸಿಬಿ ಫ್ರ್ಯಾಂಚೈಸಿಯನ್ನು ಪರಭಾರೆ ಮಾಡುತ್ತಿರುವ ಕುರಿತು ಐಪಿಎಲ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ಫ್ರ್ಯಾಂಚೈಸಿಯ ಮಾಲೀಕರು ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನದಲ್ಲಿದ್ಧಾರೆ ಎಂದೂ ಹೇಳಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ. ದಯಾನಂದ್ ಮತ್ತು ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರನ್ನು ಅಮಾನತು ಮಾಡಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ ವಿಕಾಸ್ ಕುಮಾರ್ ಅವರು ಕೇಂದ್ರ ಆಡಳಿತ ಟ್ರಿಬ್ಯುನಲ್ (ಸಿಎಟಿ) ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಎಇ ಅಮಾನತು ಆದೇಶವನ್ನು ರದ್ದು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.