ಆರ್. ಅಶ್ವಿನ್
ಸಿಡ್ನಿ: ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಮುಂಬರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲಿದ್ದು, ಅವರು ಗುರುವಾರ ಸಿಡ್ನಿ ಥಂಡರ್ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಬಿಗ್ ಬ್ಯಾಷ್ ಲೀಗ್ ಆಡಲಿರುವ ಭಾರತದ ಮೊದಲ ಪ್ರಮುಖ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ ಕಳೆದ ವರ್ಷದ ಕೊನೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಾಗೂ ಇತ್ತೀಚೆಗೆ ಐಪಿಎಲ್‌ನಿಂದಲೂ ನಿವೃತ್ತಿ ಘೊಷಿಸಿದ್ದರು. ಹಾಗಾಗಿ ಅವರು ವಿಶ್ವದ ಯಾವುದೇ ಲೀಗ್ ಆಡಲು ಅವಕಾಶ ಪಡೆದುಕೊಂಡಿದ್ದಾರೆ. ಟೀಂ ಇಂಡಿಯಾ ಹಾಗೂ ಐಪಿಎಲ್ ಆಡುವ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನು ಬಿಸಿಸಿಐ ನಿಷೇಧಿಸಿದೆ.
39 ವರ್ಷದ ಅನುಭವಿ ಸ್ಪಿನ್ನರ್ ಡಿಸೆಂಬರ್ 14 ರಿಂದ ಜನವರಿ 25 ರವರೆಗೆ ನಡೆಯಲಿರುವ ಬಿಬಿಎಲ್‌ನ ದ್ವಿತೀಯಾರ್ಧಕ್ಕೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.
‘ಅವರು ನನ್ನನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ನನಗೆ ಸ್ಪಷ್ಟವಾಗಿತ್ತು ಹಾಗಾಗಿ ಅವರ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ನಾಯಕನ ಜೊತೆಗಿನ ಮಾತುಕತೆ ಅತ್ಯುತ್ತಮವಾಗಿತ್ತು ಮತ್ತು ತಂಡದಲ್ಲಿ ನನ್ನ ಪಾತ್ರ ಏನಿರಲಿದೆ ಎಂಬುದರ ಮಾಹಿತಿ ಹೊಂದಿದ್ದೇನೆ‘ ಎಂದು ಅಶ್ವಿನ್ ಹೇಳಿರುವುದಾಗಿ cricket.com.au ವರದಿ ಮಾಡಿದೆ.
ಅಶ್ವಿನ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 537 ವಿಕೆಟ್‌ಗಳನ್ನು ಪಡೆದು ಅತೀ ಹೆಚ್ಚು ವಿಕೆಟ್ ಪಡೆದ ದೇಶದ ಎರಡನೇ ಬೌಲರ್ ಎಂಬ ಖ್ಯಾತಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.