ಮುಂಬೈ: ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ಕೇರಳದ ಸಂಜು ಸ್ಯಾಮ್ಸನ್ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದ್ದಾರೆ.
ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಸಂಜು ಸಾರಥ್ಯದ ರಾಜಸ್ಥಾನ ರಾಯಲ್ಸ್ ತಂಡಗಳು ಕಣಕ್ಕಿಳಿಯಲಿವೆ. ಈ ವರ್ಷ ಹೆಸರಿನಲ್ಲಿ ಬದಲಾವಣೆ ಮಾಡಿಕೊಂಡಿರುವ ಪಂಜಾಬ್ ತಂಡದಲ್ಲಿ (ಈ ಹಿಂದೆ ಕಿಂಗ್ಸ್ ಇಲೆವನ್ ಪಂಜಾಬ್) ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ, ರಾಹುಲ್ ಮತ್ತು ಕರ್ನಾಟಕದ ಮಯಂಕ್ ಅಗರವಾಲ್ ಮಾತ್ರ ಇದ್ದಾರೆ. ಇನ್ನುಳಿದ ಮೂವರು ಕನ್ನಡಿಗರು ಬೇರೆ ತಂಡಗಳಿಗೆ ಹೋಗಿದ್ದಾರೆ.
ಹೋದ ವರ್ಷದ ಟೂರ್ನಿಯಲ್ಲಿ ಎರಡನೇ ಸುತ್ತಿನಲ್ಲಿ ತಂಡವು ಅಮೋಘವಾಗಿ ಆಡಿತ್ತು. ಆದರೆ, ಪ್ರಶಸ್ತಿ ಹಂತದಿಂದ ದೂರವೇ ಉಳಿದಿತ್ತು. ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ‘ಪದಾರ್ಪಣೆ‘ ಮಾಡಿದ್ದ ರಿಷಭ್ ಪಂತ್ ತಮ್ಮ ‘ಗುರು‘ ಮಹೇಂದ್ರಸಿಂಗ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಬಳಗದ ವಿರುದ್ಧ ಜಯ ಸಾಧಿಸಿದ್ದರು.
ಆದ್ದರಿಂದ ಈಗ ಮತ್ತಿಬ್ಬರು ವಿಕೆಟ್‌ಕೀಪರ್‌ಗಳ ಹಣಾಹಣಿ ಕುತೂಹಲ ಕೆರಳಿಸಿದೆ. ಅಲ್ಲದೇ ಎರಡೂ ಬದಿಯಲ್ಲಿ ಅಬ್ಬರದಾಟವಾಡುವ ಬ್ಯಾಟ್ಸ್‌ಮನ್‌ಗಳಿರುವುದರಿಂದಾಗಿ ಸಿಕ್ಸರ್, ಬೌಂಡರಿಗಳ ಆಟ ಜೋರಾಗಿರುವ ನಿರೀಕ್ಷೆ ಮೂಡಿಸಿದೆ.
ಆ ಟೂರ್ನಿಯಲ್ಲಿ ರಾಹುಲ್, ಮಯಂಕ್, ಕ್ರಿಸ್ ಗೇಲ್ ಮತ್ತು ನಿಕೊಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ, ಸ್ಪಿನ್ನರ್ ರವಿ ಬಿಷ್ಣೋಯಿ ಹೊಸದಾಗಿ ಸೇರ್ಪಡೆಯಾಗಿರುವ ಜೇ ರಿಚರ್ಡ್ಸನ್, ಕ್ರಿಸ್ ಮೊರಿಸ್, ಪ್ರಮುಖರಾಗಿದ್ದಾರೆ.
ಎರಡೂ ತಂಡಗಳಲ್ಲಿ ಬಿರುಸಿನ ಹೊಡೆತಗಳನ್ನು ಆಡುವ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇದೇ ಮೊದಲ ಸಲ ನಾಯಕರಾಗಿ ಕಣಕ್ಕಿಳಿಯಲಿರುವ ಸಂಜು ಸ್ಯಾಮ್ಸನ್ ಈ ಹಿಂದಿನ ಐಪಿಎಲ್‌ಗಳಲ್ಲಿ ವೇಗದ ರನ್ ಗಳಿಕೆಯ ಇನಿಂಗ್ಸ್ ಆಡಿರುವ ಆಟಗಾರ. ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಕೂಡ ಕಿಚ್ಚು ಹಚ್ಚಬಲ್ಲರು. ಹೋದ ವರ್ಷ ಸಿಕ್ಸರ್‌ಗಳಿಂದ ಗಮನ ಸೆಳೆದಿದ್ದ ರಾಹುಲ್ ತೆವಾಟಿಯಾ ಮತ್ತು ‘ಬಿಹು‘ ನೃತ್ಯದ ಖ್ಯಾತಿಯ ರಿಯಾನ್ ಪರಾಗ್ ಕೂಡ ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದ್ದಾರೆ. ಇವರೊಂದಿಗೆ ಈಗ ಶಿವಂ ದುಬೆ ಸೇರಿಕೊಂಡಿದ್ದಾರೆ.
ಜೈದೇವ್ ಉನದ್ಕತ್ ಸಾರಥ್ಯದ ಬೌಲಿಂಗ್ ಪಡೆಯಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್, ಆ್ಯಂಡ್ರ್ಯೂ ಟೈ ಮತ್ತು ಕ್ರಿಸ್ ಮೊರಿಸ್ ಎದುರಾಳಿ ತಂಡಕ್ಕೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.
ತಂಡಗಳು:
ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್/ನಾಯಕ), ಜಾಸ್ ಬಟ್ಲರ್ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ಅನುಜ್ ರಾವತ್, ರಿಯಾನ್ ಪರಾಗ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಮಹಿಪಾಲ್ ಲೊಮ್ರೊರ್, ಶ್ರೇಯಸ್ ಗೋಪಾಲ್, ಮಯಂಕ್ ಮಾರ್ಕಂಡೆ, ಆ್ಯಂಡ್ರ್ಯೂ ಟೈ, ಜೈದೇವ್ ಉನದ್ಕತ್, ಕಾರ್ತಿಕ್ ತ್ಯಾಗಿ, ಶಿವಂ ದುಬೆ, ಕ್ರಿಸ್ ಮೊರಿಸ್, ಮುಸ್ತಫಿಜರ್ ರೆಹಮಾನ್, ಚೇತನ್ ಸಕಾರಿಯಾ, ಕೆ.ಸಿ. ಕಾರ್ಯಪ್ಪ, ಲಿಯಾಮ್ ಲಿವಿಂಗ್‌ಸ್ಟೋನ್, ಕುಲದೀಪ್ ಯಾದವ್, ಆಕಾಶ್ ಸಿಂಗ್.
ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್), ಮಯಂಕ್ ಅಗರವಾಲ್, ಕ್ರಿಸ್ ಗೇಲ್, ಮನದೀಪ್ ಸಿಂಗ್, ಪ್ರಭಸಿಮ್ರನ್ ಸಿಂಗ್, ನಿಕೊಲಾಸ್ ಪೂರನ್ (ವಿಕೆಟ್‌ಕೀಪರ್), ಸರ್ಫರಾಜ್ ಖಾನ್, ದೀಪಕ್ ಹೂಡಾ, ಮುರುಗನ್ ಅಶ್ವಿನ್, ರವಿ ಬಿಷ್ಣೊಯ, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಇಶಾನ್ ಪೊರೆಲ್, ದರ್ಶನ್ ನಾಲ್ಕಂಡೆ, ಕ್ರಿಸ್ ಜೋರ್ಡಾನ್, ಡೇವಿಡ್ ಮಲಾನ್, ಜೇ ರಿಚರ್ಡ್ಸನ್, ಶಾರೂಕ್ ಖಾನ್, ರಿಲೀ ಮೆರೆದಿತ್, ಮೊಯಿಸೆಸ್ ಹೆನ್ರಿಕ್ಸ್, ಜಲಜ್ ಸಕ್ಸೆನಾ, ಉತ್ಕರ್ಷ್ ಸಿಂಗ್, ಫ್ಯಾಬಿಯನ್ ಅಲನ್, ಸೌರಭ್ ಕುಮಾರ್
ಪಂದ್ಯ ಆರಂಭ; ರಾತ್ರಿ 7.30
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.