ಸಕಿಬುಲ್ ಗನಿ
ಚಿತ್ರ:@Prakharr___
ರಾಂಚಿ: ವಿಜಯ್ ಹಜಾರೆ ಟ್ರೋಫಿಯ ಮೊದಲ ಬಿಹಾರ ಹಾಗೂ ಅರುಣಾಚಲ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ ವೇಗದ 190 ರನ್ ಕಲೆಹಾಕುವ ಮೂಲಕ ದಾಖಲೆ ಬರೆದರು. ಇದೇ ಪಂದ್ಯದಲ್ಲಿ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
26 ವರ್ಷದ ಸಕಿಬುಲ್ ಗನಿ ಅವರು ಬುಧವಾರ (ಡಿಸೆಂಬರ್ 24) ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಸಾಧನೆ ಮಾಡಿದರು. ಅವರು ಕೇವಲ 32 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು.
ಇದಕ್ಕೂ ಮೊದಲು ಈ ದಾಖಲೆ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಪಂಜಾಬ್‌ನ ಅನ್ಮೋಲ್‌ಪ್ರೀತ್ ಸಿಂಗ್ ಹೆಸರಿನಲ್ಲಿತ್ತು. ಸದ್ಯ, ಅನ್ಮೋಲ್‌ಪ್ರೀತ್ ಸಿಂಗ್ ಅವರು ಈ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇಂದು ಕರ್ನಾಟಕ ವಿರುದ್ಧ ನಡೆದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ 33 ಎಸೆತಗಳಲ್ಲಿ ಶತಕ ಸಿಡಿಸಿದ ಜಾರ್ಖಾಂಡ್ ತಂಡದ ನಾಯಕ ಇಶಾನ್ ಕಿಶನ್ ಅವರು ಎರಡನೇ ಸ್ಥಾನಕ್ಕೆ ಏರಿದರು.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಆಟಗಾರರು
ಸಕಿಬುಲ್ ಗನಿ – 32 ಎಸೆತ ವಿರುದ್ಧ ಅರುಣಾಚಲ ಪ್ರದೇಶ
ಇಶಾನ್ ಕಿಶನ್ – 33 ಎಸೆತ ವಿರುದ್ಧ ಕರ್ನಾಟಕ
ಅನ್ಮೋಲ್‌ಪ್ರೀತ್ ಸಿಂಗ್ –35 ಎಸೆತ ವಿರುದ್ಧ ಅರುಣಾಚಲ ಪ್ರದೇಶ
ವೈಭವ್ ಸೂರ್ಯವಂಶಿ – 36 ಎಸೆತ ವಿರುದ್ಧ ಅರುಣಾಚಲ ಪ್ರದೇಶ
ಯುಸೂಫ್ ಪಠಾಣ್ – 40 ಎಸೆತ ವಿರುದ್ಧ ಮಹಾರಾಷ್ಟ್ರ
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಸಾಧನೆಯನ್ನು ಸಕಿಬುಲ್ ಗನಿ ತಮ್ಮ ಹೆಸರಿಗೆ ಬರೆದುಕೊಂಡರು. 29 ಎಸೆತಗಳಲ್ಲಿ ಶತಕ ಸಿಡಿಸಿರುವ ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಹಾಗೂ 31 ಎಸೆತಗಳಲ್ಲಿ ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾದ ಎ.ಬಿ. ಡಿವಿಲಿಯರ್ಸ್ ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.