ಆರ್‌ಸಿಬಿ ಬೌಲರ್ ಯಶ್ ದಯಾಳ್ ಸಂಭ್ರಮ
ಬೆಂಗಳೂರು: ಎರಡು ವರ್ಷಗಳ ಹಿಂದೆ, ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಯಶ್ ದಯಾಳ್ ಅವರು ಗುಜರಾತ್ ಟೈಟನ್ಸ್ ತಂಡದಲ್ಲಿ ಆಡಿದ್ದರು. ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ಯಶ್ ದಯಾಳ್ ಹಾಕಿದ್ದ ನಿರ್ಣಾಯಕ ಓವರ್‌ನಲ್ಲಿ ರಿಂಕು ಸಿಂಗ್ ಐದು ಸಿಕ್ಸರ್ ಹೊಡೆದಿದ್ದರು.
ಇದರಿಂದಾಗಿ ಯಶ್ ಅವರು ಗುಜರಾತ್ ಅಭಿಮಾನಿಗಳಿಂದ ಬಹಳಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲ. ಅವರನ್ನು ತಂಡವು ರಿಲೀಸ್ ಕೂಡ ಮಾಡಿತು. ಆದರೆ ಹೋದ ವರ್ಷದ ಆವೃತ್ತಿಯ ಟೂರ್ನಿಯಲ್ಲಿ ಆಡಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಶ್ ಅವರನ್ನು ಖರೀದಿಸಿದಾಗ ಬಹಳಷ್ಟು ಮಂದಿ ಅಚ್ಚರಿಗೊಂಡರು. ಆರ್‌ಸಿಬಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ಪೋಸ್ಟ್‌ಗಳು ಹರಿದಾಡಿದ್ದವು.
ಆದರೆ ದಯಾಳ್ ಅವರು ಅದೇ ವರ್ಷ ಎಲ್ಲ ಟೀಕೆಗಳಿಗೂ ಉತ್ತರ ಕೊಟ್ಟರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರಿನ ಪಂದ್ಯದ ಕೊನೆಯ ಓವರ್‌ನಲ್ಲಿ ಎಡಗೈ ವೇಗಿ ತೋರಿದ ಕೈಚಳಕವು ಅಭಿಮಾನಿಗಳ ಮನಗೆದ್ದಿತು. ಆ ಓವರ್‌ನಲ್ಲಿ ಅವರು ಮಹೇಂದ್ರಸಿಂಗ್ ಧೋನಿ ವಿಕೆಟ್ ಉರುಳಿಸಿದ್ದರು. ಅದರಿಂದಾಗಿ ಚೆನ್ನೈ ತಂಡವು ಪಂದ್ಯ ಸೋತು, ಪ್ಲೇಆಫ್ ಅವಕಾಶ ಕಳೆದುಕೊಂಡಿತ್ತು.
ಶನಿವಾರ ಮತ್ತೊಮ್ಮೆ ಅದೇ ಯಶ್ ದಯಾಳ್ ಮತ್ತು ಚೆನ್ನೈನ ಕೊನೆಯ ಓವರ್‌ನ ಥ್ರಿಲ್ಲರ್ ಮರುಕಳಿಸಿತು. 214 ರನ್‌ಗಳ ಗುರಿ ಬೆನ್ನಟ್ಟಿದ್ದ ಚೆನ್ನೈ ತಂಡಕ್ಕೆ ಕೊನೆ ಓವರ್‌ನಲ್ಲಿ ಗೆಲುವಿಗೆ 16 ರನ್ ಗಳು ಬೇಕಾಗಿದ್ದವು. ಯಶ್ ಎಸೆತದಲ್ಲಿ ಧೋನಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆರ್‌ಸಿಬಿ 2 ರನ್‌ಗಳ ರೋಚಕ ಜಯ ಸಾಧಿಸಿತು.
ಉತ್ತರಪ್ರದೇಶ ಅಲಹಾಬಾದಿನ ಯಶ್ ಏಕಾಗ್ರತೆ ಮತ್ತು ದಿಟ್ಟತನವು ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.