ಜಸ್‌ಪ್ರೀತ್ ಬೂಮ್ರಾ
(ಚಿತ್ರ ಕೃಪೆ: X/@BCCI)
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್‌ಗಳ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ರವೀಂದ್ರ ಜಡೇಜ ಅಗ್ರಸ್ಥಾನದಲ್ಲಿ (400 ರೇಟಿಂಗ್ ಪಾಯಿಂಟ್ಸ್) ಮುಂದುವರಿದಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಸಾಗಿದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿತ್ತು. ಆದರೆ ಸರಣಿಯುದ್ದಕ್ಕೂ ಅಮೋಘ ನಿರ್ವಹಣೆ ನೀಡಿದ ಬೂಮ್ರಾ 32 ವಿಕೆಟ್‌ಗಳನ್ನು ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಬೂಮ್ರಾ ಒಟ್ಟು 908 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿದ್ದಾರೆ. ಇದು ಬೂಮ್ರಾ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.
ಬೂಮ್ರಾ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ (841) ಇದ್ದಾರೆ. ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (837) ಮೂರು ಮತ್ತು ಆಸೀಸ್‌ನ ಜೋಶ್ ಹ್ಯಾಜಲ್‌ವುಡ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ಜಡೇಜ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ ತಲುಪಿದ್ದಾರೆ.
ಬ್ಯಾಟಿಂಗ್ ವಿಭಾಗವನ್ನು ಇಂಗ್ಲೆಂಡ್‌ನ ಜೋ ರೂಟ್ (895) ಮುನ್ನಡೆಸುತ್ತಿದ್ದಾರೆ. ಇಂಗ್ಲೆಂಡ್‌ನವರೇ ಆದ ಹ್ಯಾರಿ ಬ್ರೂಕ್ (876) ಎರಡು ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (867) ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ಯಶಸ್ವಿ ಜೈಸ್ವಾಲ್ (847) ನಾಲ್ಕನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ (739) ತಲುಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.