ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ
ದುಬೈ: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ, ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024 ವರ್ಷದ ಪುರುಷರ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹನ್ನೊಂದು ಆಟಗಾರರ ತಂಡದಲ್ಲಿ ಇಂಗ್ಲೆಂಡ್‌ನ ನಾಲ್ವರು, ಭಾರತದ ಮೂವರು, ನ್ಯೂಜಿಲೆಂಡ್‌ನ ಇಬ್ಬರು ಮತ್ತು ಶ್ರೀಲಂಕಾದ ಒಬ್ಬರು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಏಕೈಕ ಆಟಗಾರ ಪ್ಯಾಟ್ ಕಮಿನ್ಸ್ ತಂಡಕ್ಕೆ ನಾಯಕರಾಗಿದ್ದಾರೆ.
2024ರ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿರುವ 31 ವರ್ಷ ವಯಸ್ಸಿನ ಬೂಮ್ರಾ 14.92ರ ಸರಾಸರಿಯಲ್ಲಿ ಒಟ್ಟು 71 ವಿಕೆಟ್ ಪಡೆದಿದ್ದಾರೆ. ವರ್ಷದಲ್ಲಿ ಒಟ್ಟು ವಿಕೆಟ್ ಗಳಿಕೆಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್–ಗಾವಸ್ಕರ್ ಸರಣಿಯಲ್ಲಿ 32 ವಿಕೆಟ್ ಪಡೆದು, ಸರಣಿಯ ಆಟಗಾರ ಗೌರವಕ್ಕೂ ಅವರು ಪಾತ್ರವಾಗಿದ್ದರು.
36 ವರ್ಷ ವಯಸ್ಸಿನ ಜಡೇಜ ಅವರು ಕಳೆದ ವರ್ಷ 29.27ರ ಸರಾಸರಿಯಲ್ಲಿ 527 ರನ್ ಗಳಿಸಿಸುವ ಜೊತೆಗೆ 24.29ರ ಸರಾಸರಿಯಲ್ಲಿ 48 ವಿಕೆಟ್ ಪಡೆದಿದ್ದಾರೆ. 23 ವರ್ಷ ವಯಸ್ಸಿನ ಜೈಸ್ವಾಲ್ ವರ್ಷದಲ್ಲಿ 54.74ರ ಸರಾಸರಿಯಲ್ಲಿ 1,478 ರನ್ ಗಳಿಸಿದ್ದಾರೆ. ವರ್ಷದ ರನ್ ಗಳಿಕೆಯಲ್ಲಿ ಇಂಗ್ಲೆಂಡ್‌ನ ಜೋ ರೂಟ್ (1,556) ಅವರ ನಂತರದ ಸ್ಥಾನದಲ್ಲಿ ಜೈಸ್ವಾಲ್ ಇದ್ದಾರೆ.
ಟೆಸ್ಟ್ ತಂಡ ಹೀಗಿದೆ: ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್(ನಾಯಕ), ಭಾರತದ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಇಂಗ್ಲೆಂಡ್‌ನ ಬೆನ್ ಡಕೆಟ್, ಜೊ ರೂಟ್, ಹ್ಯಾರಿ ಬ್ರೂಕ್, ಜೆಮ್ಮಿ ಸ್ಮಿತ್ (ವಿಕೆಟ್ ಕೀಪರ್), ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಮ್ಯಾಟ್ ಹೆನ್ರಿ, ಶ್ರೀಲಂಕಾದ ಕಮಿಂದು ಮೆಂಡೀಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.