ADVERTISEMENT

ಇಂದಿನಿಂದ Champions Trophy | ಮೂವರು ‘ಚಾಂಪಿಯನ್’ಗಳಿಗೆ ಕೊನೆ ಆಟ!

ಗಿರೀಶದೊಡ್ಡಮನಿ
Published 18 ಫೆಬ್ರುವರಿ 2025, 23:37 IST
Last Updated 18 ಫೆಬ್ರುವರಿ 2025, 23:37 IST
ಚಾಂಪಿಯನ್ಸ್ ಟ್ರೋಫಿ
ಚಾಂಪಿಯನ್ಸ್ ಟ್ರೋಫಿ   

ಚಾಂಪಿಯನ್ಸ್‌ ಟ್ರೋಫಿ..

ಈ ಹೆಸರು ಕೇಳಿದಾಗಲೆಲ್ಲ ಥಟ್ಟನೇ ನೆನಪಾಗುವುದೆಂದರೆ ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ!

2013ರಲ್ಲಿ ಭಾರತವು ಚಾಂಪಿಯನ್ಸ್ ಟ್ರೋಫಿ ಜಯಿಸಿದಾಗ ನಾಯಕರಾಗಿದ್ದವರು ಧೋನಿ. 2017ರಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಫೈನಲ್‌ ಪಂದ್ಯದಲ್ಲಿ ಸೋತಾಗ ನಾಯಕರಾಗಿದ್ದವರು ವಿರಾಟ್ ಕೊಹ್ಲಿ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್‌ ವಿರುದ್ಧ ಸೋತ ಮೊದಲ ಪಂದ್ಯ ಅದು.

ಇದರಿಂದಾಗಿ ಆಗಿನ ನಾಯಕ ವಿರಾಟ್, ಮುಖ್ಯ ಕೋಚ್ ಅನಿಲ್ ಕುಂಬ್ಳೆ, ಅನುಭವಿ ಆಟಗಾರರಾದ ಧೋನಿ, ರೋಹಿತ್ ಶರ್ಮಾ ಅವರೆಲ್ಲರೂ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದು ತಂಡದ ಡ್ರೆಸಿಂಗ್ ರೂಮ್ ‘ನೆಮ್ಮದಿ’ಯನ್ನೂ ಕದಡಿತ್ತು  ಎಂದು ವರದಿಯಾಗಿತ್ತು.

ADVERTISEMENT

ಬುಧವಾರ ಮತ್ತೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆರಂಭವಾಗುತ್ತಿದೆ. ಈ ಬಾರಿ ಧೋನಿ, ಕುಂಬ್ಳೆ ಅವರು ಚಿತ್ರಣದಲ್ಲಿ  ಇಲ್ಲ. ಅದರೆ ಕೊಹ್ಲಿ, ರೋಹಿತ್, ರವೀಂದ್ರ ಜಡೇಜ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.

ಮೂವರಿಗೆ ಕೊನೆ ಆಟ?

ಕೊಹ್ಲಿ, ರೋಹಿತ್ ಮತ್ತು ಆಲ್‌ರೌಂಡರ್ ಜಡೇಜ ಅವರಿಗೆ  ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಇದು ಬಹುತೇಕ ಕೊನೆಯ ಐಸಿಸಿ ಟ್ರೋಫಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಟ್ರೋಫಿಗೆ ಮುತ್ತಿಟ್ಟು ಹೊರಹೋಗುವರೇ ಎಂಬುದಷ್ಟೇ ಈಗಿರುವ ಕುತೂಹಲ. 2013ರಲ್ಲಿ ಭಾರತ ಚಾಂಪಿಯನ್ ಆದಾಗಲೂ ಈ ಮೂವರು ತಂಡದಲ್ಲಿದ್ದರು. 

ಹೋದ ವರ್ಷ ಅಮೆರಿಕ–ವೆಸ್ಟ್ ಇಂಡೀಸ್ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆದ್ದ ನಂತರ ವಿರಾಟ್, ರೋಹಿತ್ ಹಾಗೂ ಜಡೇಜ ಚುಟುಕು ಮಾದರಿಗೆ ವಿದಾಯ ಹೇಳಿದ್ದರು. ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮುಂದುವರಿದಿದ್ದರು. ಜಡೇಜ ಅವರು ತಮ್ಮ ಚುರುಕಾದ ಸ್ಪಿನ್ ಬೌಲಿಂಗ್, ಕೆಳಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಮಿಂಚು ಮತ್ತು ಫೀಲ್ಡಿಂಗ್‌ನಲ್ಲಿ ಸಂಚಲನ ಮೂಡಿಸುತ್ತಲೇ ಇದ್ದಾರೆ. ಅವರ ಸಾಮರ್ಥ್ಯದ ಬಗ್ಗೆ ಯಾರಿಗೂ ಸಂಶಯವಿಲ್ಲ.  ಆದರೆ 36 ವರ್ಷದ ಎಡಗೈ ಆಲ್‌ರೌಂಡರ್‌ 2027ರ ಏಕದಿನ ವಿಶ್ವಕಪ್ ಮತ್ತು 2029ರ ಚಾಂಪಿಯನ್ಸ್‌ ಟ್ರೋಫಿಯವರೆಗೂ ಆಡುವುದು ಅನುಮಾನ. ಆದ್ದರಿಂದ ಇದೇ ಅವರ ಕೊನೆಯ ಏಕದಿನ ಐಸಿಸಿ ಟೂರ್ನಿಯಾಗಬಹುದು. ನಾಯಕತ್ವದ ಉಸಾಬರಿಗೆ ಹೋಗದೇ ತಮ್ಮ ಪಾಡಿಗೆ ತಾವು ಆಡುತ್ತ ಸಾಗಿರುವ ಜಡೇಜ ಇನ್ನೊಂದೆರಡು ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯಲೂ ಬಹುದು. 

ಆದರೆ ರೋಹಿತ್ ಮತ್ತು ಕೊಹ್ಲಿ ಪರಿಸ್ಥಿತಿ ಬೇರೆ ಇದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ತಂಡಗಳ ಎದುರಿನ ಟೆಸ್ಟ್ ಸರಣಿಗಳಲ್ಲಿ ವೈಫಲ್ಯ ಅನುಭವಿಸಿದ್ದ ಇಬ್ಬರೂ ‘ದಿಗ್ಗಜ‘ ಬ್ಯಾಟರ್‌ಗಳು ಅಪಾರ ಟೀಕೆಗೆ ಒಳಗಾಗಿದ್ದರು. 

ರೋಹಿತ್ ಶರ್ಮಾ 

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ  ಏಕದಿನ ಸರಣಿಯಲ್ಲಿ ಶತಕ ಹೊಡೆಯುವ ಮೂಲಕ ತಮ್ಮಲ್ಲಿನ್ನೂ ಸಾಮರ್ಥ್ಯ ಇದೆ ಎಂಬುದನ್ನು ತೋರಿಸಿಕೊಟ್ಟರು. ’ಆಫ್‌ಸ್ಟಂಪ್‌’ ಹೊರಗಿನ ಎಸೆತಗಳನ್ನು ಕೆಣಕಿ ಕೈಸುಟ್ಟುಕೊಳ್ಳುತ್ತಿರುವ ವಿರಾಟ್ ಇಂಗ್ಲೆಂಡ್ ಎದುರು ಒಂದು ಅರ್ಧಶತಕವನ್ನೇನೋ ಹೊಡೆದರು. ಆದರೆ ಅದರಲ್ಲಿ ವಿರಾಟ್ ಅವರ ಸಹಜ ಆಟದ ಸ್ಪರ್ಶ ಕಂಡಿದ್ದು ಕಡಿಮೆ.  ದೈಹಿಕವಾಗಿ ಈಗಲೂ ಅತ್ಯಂತ ಫಿಟ್ ಆಟಗಾರನೇ ಆಗಿರುವ ವಿರಾಟ್ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡರೆ, ಭಾರತಕ್ಕೆ ಟ್ರೋಫಿ ಜಯದ ಕನಸು ಕೈಗೂಡಬಹುದು. 

ಅಲ್ಲದೇ ಎಂಟು ವರ್ಷಗಳ ಹಿಂದೆ ಪಾಕ್ ವಿರುದ್ಧ ಸೋತ ಸೇಡು ತೀರಿಸಿಕೊಂಡಂತೆಯೂ ಆಗಲಿದೆ. ಏಕೆಂದರೆ ಈ ಬಾರಿ ಪಾಕಿಸ್ತಾನವೇ ಆತಿಥೇಯ ದೇಶ. 

ರವೀಂದ್ರ ಜಡೇಜ

ಪಾಕ್ ಕ್ರಿಕೆಟ್‌ಗೆ ಮರುಜನ್ಮ!

ಕಳೆದ ಕೆಲವು ವರ್ಷಗಳಲ್ಲಿ ವಿವಾದ ಹಣದ ಬಿಕ್ಕಟ್ಟು ಹಾಗೂ ಭಯೋತ್ಪಾದಕರ ಭೀತಿ ಮತ್ತಿತರ ವಿಷಯಗಳಿಂದಲೇ ಪಾಕಿಸ್ತಾನದ ಕ್ರಿಕೆಟ್‌ ಸುದ್ದಿಯಾಗಿದ್ದು ಹೆಚ್ಚು. ಆದರೆ ಈಗ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಮೂಲಕ ತನ್ನ ಗತವೈಭವಕ್ಕೆ ಮರಳುವತ್ತ ಪಾಕಿಸ್ತಾನ ಪ್ರಯತ್ನಿಸುತ್ತಿದೆ.

ಈ ಟೂರ್ನಿಯಲ್ಲಿ ಪಾಕ್ ಇದೇ ಮೊದಲ ಸಲ ಆಯೋಜಿಸುತ್ತಿದೆ. ದಶಕಗಳ ಹಿಂದೆ ಭಾರತ ಮತ್ತು ಪಾಕಿಸ್ತಾನವು ಏಷ್ಯಾದ ಘಟಾನುಘಟಿ ಕ್ರಿಕೆಟ್ ತಂಡಗಳಾಗಿದ್ದವು. ಭಾರತ ಮಾತ್ರ ಆಟ ಮತ್ತು ಆರ್ಥಿಕ ಶಕ್ತಿಯಲ್ಲಿ ಇವತ್ತು ಕ್ರಿಕೆಟ್ ಲೋಕದ ‘ದೊಡ್ಡಣ್ಣ’ನಾಗಿ ಬೆಳೆಯಿತು. ತನ್ನ ತಾರೆಗಳ ಹೊಳಪು ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಸಿರಿವಂತಿಕೆಯನ್ನು ಬಳಸಿಕೊಂಡ ಭಾರತದ ಕ್ರಿಕೆಟ್‌ ಬೆಳೆದ ರೀತಿ ಅಗಾಧವಾಗಿದೆ.  ಆದರೆ ಒಂದು ಕಾಲದಲ್ಲಿ ಜಗತ್ತಿನ ಎಲ್ಲ ದೇಶಗಳ ತಂಡಗಳಿಗೂ ಸವಾಲೊಡ್ಡಿದ್ದ ಇಮ್ರಾನ್ ಖಾನ್ ವಾಸೀಂ ಅಕ್ರಂ ಜಹೀರ್ ಅಬ್ಬಾಸ್ ಜಾವೇದ್ ಮಿಯಾಂದಾದ್ ಇಂಜಮಾಮ್ ಉಲ್ ಹಕ್ ಶೋಯಬ್ ಅಖ್ತರ್ ಶಾಹೀದ್  ಆಫ್ರಿದಿ ಸಕ್ಲೇನ್ ಮುಷ್ತಾಕ್ ಅವರಂತಹ ಖ್ಯಾತನಾಮರು ಬೆಳಗಿದ ಪಾಕ್ ಕ್ರಿಕೆಟ್ ಈಗ ತಳ ಕಂಡಿದೆ.

ಕಾಲಕಾಲಕ್ಕೆ ಇಲ್ಲಿಯೂ ಉತ್ತಮ ಪ್ರತಿಭೆಗಳು ಬಂದಿವೆ. ಸರ್ಫರಾಜ್ ಖಾನ್ ನಾಯಕತ್ವದ ತಂಡವು 2017ರಲ್ಲಿ ಚಾಂಪಿಯನ್ ಆಗಿದ್ದೇ ಇದಕ್ಕೆ ಉದಾಹರಣೆ.  ಆದರೆ ಅಂತಹ ಆಟಗಾರರನ್ನು ಪೋಷಿಸುವ ವ್ಯವಸ್ಥೆ ಹಳಿ ತಪ್ಪಿದ್ದರಿಂದ ಮತ್ತು ರಾಜಕೀಯದ ಆಟವೇ ಜೋರಾಗಿದ್ದರಿಂದ ಕ್ರಿಕೆಟ್ ಬೆಳೆಯಲಿಲ್ಲ. ಅಲ್ಲದೇ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್‌ ಮೇಲೆ ಭಯೋತ್ಪಾದಕರ ದಾಳಿ ಹಾಗೂ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕರ ಕೈವಾಡದ ಕರಿನೆರಳು ಕೂಡ ಅಲ್ಲಿಯ ಕ್ರಿಕೆಟ್ ನಲುಗಲು ಕಾರಣವಾದವು.  ಇದೀಗ ವಿಕೆಟ್‌ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಆತಿಥೇಯ ತಂಡದ ಸಾರಥ್ಯ ವಹಿಸಿದ್ದಾರೆ. ಇದೀಗ ಅವೆಲ್ಲವನ್ನೂ ಹಿಂದಿಕ್ಕಿ ಮತ್ತೆ ಹೊಸತನದತ್ತ ಮರಳುವ ಹಂಬಲ ಪಾಕ್‌ನಲ್ಲಿ ಮೂಡಿದೆ. ಆದರೆ ರಾಜತಾಂತ್ರಿಕ ಕಾರಣಗಳಿಂದ ಭಾರತ ತಂಡವು ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಒಪ್ಪಿಲ್ಲ.

ಭಾರತ ತಂಡವು ಟೂರ್ನಿಯಲ್ಲಿ ಕಣಕ್ಕಿಳಿಯದಿದ್ದರೆ ಆಗುವ ನಷ್ಟದ ಅಂದಾಜು ಐಸಿಸಿ ಬಳಿ ಇದೆ. ಅದರಿಂದಾಗಿ ಭಾರತದ ಪಂದ್ಯಗಳು ತಟಸ್ಥ ಸ್ಥಳ ದುಬೈನಲ್ಲಿ ನಡೆಯುತ್ತಿವೆ.

ಒಂದೊಮ್ಮೆ ಭಾರತ ಫೈನಲ್ ತಲುಪಿದರೆ ಪಂದ್ಯ ದುಬೈನಲ್ಲಿ ನಡೆಯಲಿದೆ. ತಲುಪದಿದ್ದರೆ ಲಾಹೋರ್‌ನಲ್ಲಿ ಫೈನಲ್ ನಡೆಯಲಿದೆ.  ಪಾಕಿಸ್ತಾನದಲ್ಲಿಯೂ ಭಾರತದ ವಿರಾಟ್ ಕೊಹ್ಲಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ತಮ್ಮ ನೆಲದಲ್ಲಿ ಕೊಹ್ಲಿ ಆಟವನ್ನು ನೋಡುವ ಅವರ ಆಸೆ ಈಗಲೂ ಈಡೇರಿಲ್ಲ. ಅದೇ ರೀತಿ ದಶಕಗಳ ಹಿಂದೆ ಭಾರತದ ಆಟಗಾರರು ಪಾಕ್ ತಂಡವನ್ನು ಅದರ ನೆಲದಲ್ಲಿಯೇ ಸೋಲಿಸಿ ಬಂದ ಸ್ವಾರಸ್ಯಕರ ನೆನಪುಗಳನ್ನು ಈಗಲೂ ಹಂಚಿಕೊಳ್ಳುತ್ತಾರೆ. ಅಂತಹ ಅವಕಾಶ ಈಗಿನ ತಲೆಮಾರಿನ ಆಟಗಾರರಿಗೆ ಕೈತಪ್ಪಿದೆ. ನೆರೆಹೊರೆಯ ದೇಶಗಳ ಸಂಬಂಧಗಳು ಹಳಸಿದರೆ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಶಾಂತಿ ಸೌಹಾರ್ದತೆಗಳೇ ಚಾಂಪಿಯನ್ ಆಗಿ ಮೆರೆದಾಗ ಮಾತ್ರ ಕ್ರಿಕೆಟ್‌ ಜಯಿಸುತ್ತದೆ. ಅಂತಹದೊಂದು ಕಾಲಕ್ಕಾಗಿ ಶಾಂತಿಪ್ರಿಯ ಹೃದಯಗಳು ನಿರುಕಿಸುತ್ತಿವೆ.

ಗಂಭೀರ್ ಮುಂದಿನ ಸವಾಲು

ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿರುವ ತಂಡದ ಬಗ್ಗೆ ಈಗಾಗಲೇ ಪರ–ವಿರೋಧ ಚರ್ಚೆಗಳು ನಡೆಯುತ್ತಿವೆ. ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು ವೇಗಿ ಹರ್ಷಿತ್ ರಾಣಾ ಅವರಿಗೆ ಅವಕಾಶ ಕೊಟ್ಟಿರುವುದು ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಇದರಿಂದಾಗಿ ಕೋಚ್ ಗೌತಮ್ ಗಂಭೀರ್ ಅವರ ಮೇಲೂ ಈಗ ಒತ್ತಡವಿದೆ.  ಹರ್ಷಿತ್  ರಾಣಾ ಅವರು ತಮ್ಮ ‘ಮೆಂಟರ್’ ಗಂಭೀರ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ಆಡಬೇಕಿದೆ. ಅದರಲ್ಲೂ ಜಸ್‌ಪ್ರೀತ್ ಬೂಮ್ರಾ ಅವರ ಅನುಪಸ್ಥಿತಿಯಲ್ಲಿ ರಾಣಾಗೆ ಒಳ್ಳೆಯ ಅವಕಾಶವಿದೆ.  ಶುಭಮನ್ ಗಿಲ್ ತಮ್ಮ ಉಪನಾಯಕ ಪಟ್ಟಕ್ಕೆ ನ್ಯಾಯ ಸಲ್ಲಿಸಬೇಕಿದೆ. ಅಲ್ಲದೇ ಕೆ.ಎಲ್. ರಾಹುಲ್ ಅವರನ್ನು ಮೊದಲ ವಿಕೆಟ್‌ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ರಿಷಭ್ ಪಂತ್ ಎರಡನೇ ವಿಕೆಟ್‌ಕೀಪರ್ ಆಗಿದ್ದಾರೆ.  ಐವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿರುವುದನ್ನು ಈಚೆಗೆ ಆರ್. ಅಶ್ವಿನ್ ಅವರೇ ಪ್ರಶ್ನಿಸಿದ್ದರು. ಈ ಎಲ್ಲ ವೈರುಧ್ಯಗಳಿರುವ ತಂಡವನ್ನು ಟ್ರೋಫಿಯೆಡೆಗೆ ಮುನ್ನಡೆಸುವ ಗಂಭೀರ ಸವಾಲು ಗೌತಮ್ ಮುಂದಿದೆ. 

ಪ್ರಮುಖ ಬೌಲರ್‌ಗಳ ಗೈರು

ಚಾಂಪಿಯನ್ಸ್ ಟ್ರೋಫಿಯಲ್ಲಿ ಅಗ್ರ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಆಡದಿದ್ದರೆ ಭಾರತ ಟ್ರೋಫಿ ಗೆಲ್ಲುವ ಸಾಧ್ಯತೆ ಶೇ 30 ರಿಂದ 35ರಷ್ಟು ಕಡಿಮೆಯಾಗುತ್ತದೆ ಎಂದು ತಂಡದ ಮಾಜಿ ನಾಯಕ– ಕೋಚ್‌ ರವಿ ಶಾಸ್ತ್ರಿ ಕೆಲವು ದಿನಗಳ ಹಿಂದೆಯೇ ಹೇಳಿದ್ದರು. ಬೂಮ್ರಾ ಬೆನ್ನುನೋವು ಗುಣವಾಗಿಲ್ಲ. ಎದುರಾಳಿಗಳಿಗೆ ಸಿಂಹಸ್ವಪ್ನವಾಗಿರುವ ಬೂಮ್ರಾ ಅಲಭ್ಯತೆ ಇತರ ತಂಡಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ, ಬೂಮ್ರಾ ಎಲ್ಲ ಮಾದರಿಗೆ ಸಲ್ಲುವವರು ಎನ್ನುವುದು ನಿರ್ವಿವಾದ.

ಈ ಬಾರಿ ಬೂಮ್ರಾ ಸೇರಿದಂತೆ ಕೆಲವು ಪ್ರಮುಖ ತಾರೆಗಳು ಗಾಯಾಳುಗಳಾಗಿ ತಮ್ಮ ತಂಡಗಳಿಂದ ಹೊರಬಿದ್ದಿದ್ದಾರೆ. ಕಾಂಗರೂ ಪಡೆಗೆ ಹೊಡೆತ: ಆಸ್ಟ್ರೇಲಿಯಾ ತಂಡದ ವೇಗದ ದಾಳಿ ಈಗ ಅನನುಭವಿಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಮೂವರು ದಿಗ್ಗಜ ಬೌಲರ್‌ಗಳಾದ ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್ ಮತ್ತು ಜೋಶ್‌ ಹ್ಯಾಜಲ್‌ವುಡ್‌ ಅವರು ಆಡುತ್ತಿಲ್ಲ. ಕಮಿನ್ಸ್‌ಗೆ ಪಾದದ ನೋವು, ಹ್ಯಾಜಲ್‌ವುಡ್‌ಗೆ ಪೃಷ್ಠದ ನೋವು ಬಾಧಿಸಿದೆ. ಸ್ಟಾರ್ಕ್ ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿದ್ದಾರೆ. ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಬೆನ್ನುನೋವು ಕಡಿಮೆಯಾಗಿಲ್ಲ. ಅನುಭವಿ ಆಲ್‌ರೌಂಡರ್ ಮಾರ್ಕಸ್‌ ಸ್ಟೊಯಿನಿಸ್‌ ಏಕದಿನ ಕ್ರಿಕೆಟ್‌ಗೆ ದಿಢೀರ್‌ ಆಗಿ ನಿವೃತ್ತಿ ಘೋಷಿಸಿರುವುದು ಆ ತಂಡಕ್ಕೆ ಹೊಡೆತ ನೀಡಿದೆ.

ದಕ್ಷಿಣ ಆಫ್ರಿಕಾ ತಂಡದ ವೇಗಿ ಆನ್ರಿಚ್‌ ನಾಕಿಯಾ ತೊಡೆಸಂದು ನೋವಿನಿದ ಬಳಲುತ್ತಿರುವ ಕಾರಣ ಡಿಸೆಂಬರ್‌ನಿಂದ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ಅವರ ಬದಲು ಸ್ಥಾನ ಪಡೆದಿದ್ದ ಜೆರಾಲ್ಡ್ ಕೋಟ್ಸಿಯಾ ಅವರಿಗೂ ತೊಡೆಸಂದು ನೋವು ಬಾಧಿಸಿದ್ದು ಅವರೂ ಹಿಂದೆ ಸರಿದಿದ್ದಾರೆ. ಕಗಿಸೊ ರಬಾಡ, ಮಾರ್ಕೊ ಯಾನ್ಸೆನ್ ಮೇಲೆ ಈಗ ಒತ್ತಡ ಬಿದ್ದಿದೆ.

ಲಯದಲ್ಲಿದ್ದ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್‌ ಸಯೀಮ್ ಅಯೂಬ್ ಅವರು ಪಾದದ ನೋವಿನಿಂದಾಗಿ ಅಲಭ್ಯರಾಗಿದ್ದಾರೆ. ಅಫ್ಗಾನಿಸ್ತಾನವು, ಬೆನ್ನುಮೂಳೆ ನೋವಿನಿಂದ ಬಳಲುತ್ತಿರುವ ಭರವಸೆಯ ಸ್ಪಿನ್ನರ್‌ ಅಲ್ಲಾ ಘಜನ್ಫರ್‌ ಅವರಿಲ್ಲದೆ ಆಡಬೇಕಾಗಿದೆ.

ನ್ಯೂಜಿಲೆಂಡ್ ತಂಡದ ಅನುಭವಿ ವೇಗದ ಬೌಲರ್ ಲಾಕಿ ಫರ್ಗ್ಯೂಸನ್ ಜೊತೆಗೆ ಯುವ ವೇಗಿ ಬೆನ್‌ ಸಿಯರ್ಸ್‌ ಅವರು ಕೂಡ ತಂಡದಲ್ಲಿಲ್ಲ. ಪಾಕಿಸ್ತಾನದಲ್ಲಿ ತ್ರಿಕೋನ ಸರಣಿ ಏಕದಿನ ಪಂದ್ಯದ ವೇಳೆ ಮುಖಕ್ಕೆ ಚೆಂಡುಬಡಿದು ಗಾಯಗೊಂಡಿರುವ ರಚಿನ್ ರವೀಂದ್ರ ಅವರಿಗೆ ಗಾಯದ ಜಾಗಕ್ಕೆ ಹೊಲಿಗೆ ಹಾಕಲಾಗಿದ್ದು, ತಂಡದಲ್ಲಿದ್ದರೂ ಆಡುವುದು ಖಚಿತವಾಗಿಲ್ಲ. ಇಂಗ್ಲೆಂಡ್ ತಂಡಕ್ಕೆ ಜೇಕಬ್‌ ಬೆಥೆಲ್ ಅಲಭ್ಯರಾಗಿದ್ದಾರೆ. ಒಟ್ಟಾರೆ ಈ ಆಟಗಾರರ ಗೈರುಹಾಜರಿ ಟೂರ್ನಿಯ ಪ್ರಭಾವಳಿಯನ್ನು ಒಂದಿಷ್ಟು ಮಸುಕುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.