ADVERTISEMENT

Champions Trophy Final: ಮರಳುನಾಡಿನಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಕಿರೀಟ

ವರುಣ್, ಕುಲದೀಪ್ ಸ್ಪಿನ್ ಮೋಡಿ; ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಉಪಯುಕ್ತ ಕಾಣಿಕೆ

ಪಿಟಿಐ
Published 9 ಮಾರ್ಚ್ 2025, 23:35 IST
Last Updated 9 ಮಾರ್ಚ್ 2025, 23:35 IST
   

ದುಬೈ: ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಸ್ಪಿನ್ನರ್‌ಗಳ ಮೋಡಿ, ರೋಹಿತ್ ಶರ್ಮಾ–ಶುಭಮನ್‌ ಗಿಲ್ ಜೋಡಿಯ ಅಂದದ ಬ್ಯಾಟಿಂಗ್, ಶ್ರೇಯಸ್ ಅಯ್ಯರ್–ಅಕ್ಷರ್ ಪಟೇಲ್ ಜವಾಬ್ದಾರಿಯುತ ಜೊತೆಯಾಟಗಳನ್ನು ವ್ಯರ್ಥವಾಗಲು ಬಿಡಲಿಲ್ಲ ಕನ್ನಡಿಗ ಕೆ.ಎಲ್. ರಾಹುಲ್.  

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಬಳಗವು  ಡ್ಯಾರಿಲ್ ಮಿಚೆಲ್ ಮತ್ತು ಮಿಚೆಲ್ ಬ್ರೆಸ್‌ವೆಲ್  ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 251 ರನ್ ಗಳಿಸಿತು. 

ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ (45ಕ್ಕೆ2) ಮತ್ತು ಕುಲದೀಪ್ ಯಾದವ್ (40ಕ್ಕೆ2) ಅವರ ಮೋಡಿಯಿಂದಾಗಿ ಕಿವೀಸ್ ಬಳಗಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. 

ADVERTISEMENT

ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಗೆಲುವು ಅತ್ಯಂತ ಸುಲಭವಾಗಿ ಒಲಿಯುವಂತೆ ಭಾಸವಾಗಲು ರೋಹಿತ್ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ಕಾರಣವಾಯಿತು. 

ಅದರಲ್ಲೂ ರೋಹಿತ್ ಅವರ ಆಟಕ್ಕೆ ಬೌಲರ್‌ಗಳು ನಿರುತ್ತರರಾದರು. ಇನಿಂಗ್ಸ್‌ನ ಎರಡನೇ ಎಸೆತವನ್ನೇ ಸಿಕ್ಸರ್‌ಗೆ ಎತ್ತುವ ಮೂಲಕ ತಮ್ಮ ಹಾಗೂ ತಂಡದ ಖಾತೆ ತೆರೆದ ರೋಹಿತ್ ಅವರನ್ನು ತಡೆಯುವುದು ಅಸಾಧ್ಯವಾಯಿತು. ಗಿಲ್ ಕೂಡ ತಮ್ಮ ನಾಯಕನ ಆಟಕ್ಕೆ ಪ್ರೇಕ್ಷಕನಾದರು. ತಮಗೆ ಸಿಕ್ಕ ಅವಕಾಶಗಳಲ್ಲಿ ದೊಡ್ಡ ಹೊಡೆತ ಆಡಲಿಲ್ಲ. ಒಂದು, ಎರಡು ರನ್ ಹೊಡೆದು ಆಡಿದರು. ಒಂದು ಬಾರಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಗಿಲ್ ಜೀವದಾನ ಪಡೆದರು. 

ಆದರೆ ರೋಹಿತ್ ಅವರ ಪುಲ್, ಫ್ಲಿಕ್, ಫ್ರಂಟ್‌ಫುಟ್ ಶಾಟ್‌ಗಳು ಮತ್ತು ಬೌಲರ್‌ಗಳು ಚೆಂಡನ್ನು ರಿಲೀಸ್ ಮಾಡುವ ಮುನ್ನವೇ ಕ್ರೀಸ್‌ನಲ್ಲಿ ತೋರಿದ ಪಾದಚಲನೆಯು ಗಮನ ಸೆಳೆಯುವಂತಿತ್ತು. 41 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಅದರಲ್ಲಿ 3 ಸಿಕ್ಸರ್‌ಗಳು, 5 ಬೌಂಡರಿಗಳು ಇದ್ದವು. ರನ್‌ ರೇಟ್ ಕೂಡ ಕುದುರೆಯಂತೆ ವೇಗವಾಗಿ ಓಡುತ್ತಿತ್ತು. ಆಧರೆ 19ನೇ ಓವರ್‌ನಲ್ಲಿ ಗಿಲ್ ವಿಕೆಟ್ ಪಡೆದ ಮಿಚೆಲ್ ಸ್ಯಾಂಟನರ್ ಜೊತೆಯಾಟ ಮುರಿದರು. 

ನಂತರದ ಓವರ್‌ನಲ್ಲಿ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ 1 ರನ್ ಗಳಿಸಿದ್ದರು. ಆದರೆ ಮೈಕೆಲ್ ಬ್ರೇಸ್‌ವೆಲ್ ಅವರ ಕೆಳಮಟ್ಟದ ಸ್ಪಿನ್ ಎಸೆತವನ್ನು ಸ್ವೀಪ್ ಮಾಡುವ ಪ್ರಯತ್ನದಲ್ಲಿ ಕೊಹ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರಿಂದ ಕಿವೀಸ್ ಬಳಗದ ಆತ್ಮವಿಶ್ವಾಸ ಇಮ್ಮಡಿಸಿತು. 

ರೋಹಿತ್ ಅಬ್ಬರವೂ ತಗ್ಗತೊಡಗಿತು. 27ನೇ ಓವರ್‌ನಲ್ಲಿ ರಚಿನ್ ರವೀಂದ್ರ ಎಸೆತವನ್ನು ಎರಡೆಜ್ಜೆ ಮುಂದೆ ಜಿಗಿದು ಆಡಲು ಯತ್ನಿಸಿದ ರೋಹಿತ್ ಅವರನ್ನು ವಿಕೆಟ್‌ಕೀಪರ್ ಟಾಮ್ ಲೇಥಮ್ ಸ್ಟಂಪಿಂಗ್ ಮಾಡಿದರು. ಇಲ್ಲಿಂದ ಇನಿಂಗ್ಸ್‌ ಮೇಲೆ ಹಿಡಿತ ಸಾಧಿಸಲು ಕಿವೀಸ್‌ ಪಡೆ ಯತ್ನಿಸಿತು. ಕೊನೆಯ ಓವರ್‌ನವರೆಗೂ ಹಗ್ಗಜಗ್ಗಾಟ ಸಾಗಿತು. ಇದರಿಂದಾಗಿ ರೋಚಕತೆ ಮೂಡಿಸಿತು. 

ಶ್ರೇಯಸ್ ಅಯ್ಯರ್ (48 ರನ್) ಮತ್ತೊಂದು ಉಪಯುಕ್ತ ಇನಿಂಗ್ಸ್ ಆಡಿದರು. ಅವರಿಗೆ ಅಕ್ಷರ್ (29 ರನ್) ಜೊತೆ ನೀಡಿದರು. ಅವರಿಬ್ಬರನ್ನೂ ಕಟ್ಟಿಹಾಕುವಲ್ಲಿ ಕಿವೀಸ್‌ ಸ್ಪಿನ್ನರ್‌ಗಳು ಯಶಸ್ವಿಯಾದರು. 

ಆಗ ಮತ್ತೆ ಆಸರೆಯಾದವರು 6ನೇ ಕ್ರಮಾಂಕದ ರಾಹುಲ್ ಯೋಜನಾಬದ್ಧವಾಗಿ ಆಡಿದ ಅವರಿಗೆ ಹಾರ್ದಿಕ್ ಕೂಡ ಜೊತೆಗೂಡಿದರು. ಆದರೆ ಎಂದಿನಂತೆ ಕೊನೆಯ ಹಂತದಲ್ಲಿ ಹಾರ್ದಿಕ್ ಅವಸರಕ್ಕೆ ಈಡಾಗಿ ವಿಕೆಟ್ ಕೊಟ್ಟರು. ಜಡೇಜ (ಅಜೇಯ 9) ಮಾತ್ರ ತಾಳ್ಮೆಯಿಂದ ರಾಹುಲ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಡ್ಯಾರಿಲ್, ಮಿಚೆಲ್ ಬ್ಯಾಟಿಂಗ್: ನ್ಯೂಜಿಲೆಂಡ್ ತಂಡದ ಆರಂಭಿಕ ಜೋಡಿ ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಅವರುಮೊದಲ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು. ವೇಗಿ ಮೊಹಮ್ಮದ್ ಶಮಿ ಎಸೆತಗಳನ್ನು ರವೀಂದ್ರ ಲೀಲಾಜಾಲವಾಗಿ ಆಡಿದರು. ಅವರ ಒಂದೇ ಓವರ್‌ನಲ್ಲಿ 3 ಬೌಂಡರಿ ಹೊಡೆದರು.

ಆದರೆ ಭಾರತದ ಸ್ಪಿನ್ನರ್‌ಗಳು ದಾಳಿಗಿಳಿದ ನಂತರ 21 ರನ್‌ಗಳ ಅಂತರದಲ್ಲಿ ಕಿವೀಸ್ ಬಳಗದ 3 ವಿಕೆಟ್‌ಗಳು ಪತನವಾದವು. ಈ ಸಂದರ್ಭದಲ್ಲಿ ಡ್ಯಾರಿಲ್ ಮಿಚೆಲ್ (63; 101ಎ) ಮತ್ತು ಕೊನೆಯ ಹಂತದಲ್ಲಿ ಮಿಚೆಲ್ ಬ್ರೇಸ್‌ ವೆಲ್ (53; 40ಎ) ಅವರು ಮಿಂಚಿದರು. ಅರ್ಧಶತಕ ದಾಖಲಿಸಿದರು. ಅದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು. 

ನೃತ್ಯ, ಸಂಗೀತ ಹಾಗೂ ಬಿಳಿ ಕೋಟು..

ಹೋದ ವರ್ಷ ಅಮೆರಿಕ–ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್ ಆಗಿತ್ತು. ಆಗ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಬ್ಬರೂ ಭಾವುಕರಾಗಿ ಪರಸ್ಪರ ಆಲಂಗಿಸಿಕೊಂಡಿದ್ದು ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿತ್ತು. ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶವನ್ನೂ ಆ ಗೆಲುವು ನೀಡಿತು. 

ಇದೀಗ ದುಬೈ ಅಂಗಳದಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ನಂತರ ಅವರಿಬ್ಬರ ಸ್ನೇಹದ ಮತ್ತೊಂದು ಸುಮಧುರ ಕ್ಷಣ ದಾಖಲಾಯಿತು. ಗೆಲುವು ಒಲಿದ ಕೂಡಲೇ ಮೈದಾನಕ್ಕೆ ಧುಮುಕಿದ ಇಬ್ಬರೂ ಸ್ಟಂಪ್‌ಗಳನ್ನು ತೆಗೆದುಕೊಂಡು ದಾಂಡಿಯಾ (ಕೋಲಾಟ) ನೃತ್ಯ ಮಾಡುತ್ತ ಸಂಭ್ರಮಿಸಿದರು. ಅರ್ಷದೀಪ್ ಸಿಂಗ್ ಭಲ್ಲೆ ಭಲ್ಲೆ ಎಂದು ಬಾಂಗ್ರಾನೃತ್ಯ ಮಾಡಿದರೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಅವರ ನೃತ್ಯವೂ ರಂಗೇರಿತು. ಅಷ್ಟೇ ಅಲ್ಲ. ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಕೂಡ ಕುಣಿದು ಕುಪ್ಪಳಿಸಿದರು. 

ರೋಹಿತ್ ಶರ್ಮಾ ಅವರು ಗಣ್ಯರ ಗ್ಯಾಲರಿಯಲ್ಲಿದ್ದ ತಮ್ಮ ಪತ್ನಿ ರಿತಿಕಾ ಸಜ್ದೆ ಮತ್ತು ಮಗಳನ್ನೂ ಸೇರಿಕೊಂಡರು. ವಿರಾಟ್ ಕೊಹ್ಲಿ ಅವರನ್ನು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಬಂದು ಸೇರಿಸಿಕೊಂಡರು. ಹಬ್ಬದ ವಾತಾವರಣ ಗರಿಗೆದರಿತು. ಕ್ರೀಡಾಂಗಣದಲ್ಲಿ ಸಿಡಿಮದ್ದಿನ ಬೆಳಕು ಪ್ರಜ್ವಲಿಸಿತು. 

ಐಸಿಸಿ ಮುಖ್ಯಸ್ಥ ಜಯ್ ಶಾ ಮತ್ತು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೂ ಸಾಂಪ್ರದಾಯಿಕ ಬಿಳಿ ಕೋಟು ತೊಡಿಸಿ ಅಭಿನಂದಿಸಿದರು. 

ನ್ಯೂಜಿಲೆಂಡ್‌: 7ಕ್ಕೆ 251 (50 ಓವರ್‌ಗಳಲ್ಲಿ)

ಯಂಗ್ ಎಲ್‌ಬಿಡಬ್ಲ್ಯು ಬಿ ವರುಣ್‌ 15 (23ಎ, 4x2)

ರಚಿನ್‌ ಬಿ ಕುಲದೀಪ್‌ 37 (29ಎ, 4x4, 6x1)

ವಿಲಿಯಮ್ಸನ್‌ ಸಿ ಮತ್ತು ಬಿ ಕುಲದೀಪ್‌ 11 (14ಎ, 4x1)

ಡ್ಯಾರಿಲ್‌ ಸಿ ಶರ್ಮಾ ಬಿ ಶಮಿ 63 (101ಎ, 4x3)

ಲೇಥಮ್‌ ಎಲ್‌ಬಿಡಬ್ಲ್ಯು ಬಿ ಜಡೇಜ 14 (30ಎ)

ಫಿಲಿಪ್ಸ್‌ ಬಿ ವರುಣ್‌ 34 (52ಎ, 4x2, 6x1)

ಮೈಕಲ್‌ ಬ್ರೇಸ್‌ವೆಲ್‌ ಔಟಾಗದೇ 53 (40ಎ, 4x3, 6x2)

ಸ್ಯಾಂಟನರ್‌ ರನೌಟ್‌ (ಕೊಹ್ಲಿ/ರಾಹುಲ್‌) 8 (10ಎ)

ನೇಥನ್‌ ಸ್ಮಿತ್‌ ಔಟಾಗದೇ 0 (1ಎ)

ಇತರೆ: 16 (ಲೆಗ್‌ಬೈ 3, ವೈಡ್‌ 13)

ವಿಕೆಟ್ ಪತನ: 1-57 (ವಿಲ್ ಯಂಗ್, 7.5), 2-69 (ರಚಿನ್ ರವೀಂದ್ರ, 10.1), 3-75 (ಕೇನ್ ವಿಲಿಯಮ್ಸನ್, 12.2), 4-108 (ಟಾಮ್ ಲೇಥಮ್, 23.2), 5-165 (ಗ್ಲೆನ್ ಫಿಲಿಪ್ಸ್, 37.5), 6-211 (ಡ್ಯಾರಿಲ್ ಮಿಚೆಲ್, 45.4), 7-239 (ಮಿಚೆಲ್ ಸ್ಯಾಂಟನರ್‌, 48.6)

ಬೌಲಿಂಗ್‌: ಮೊಹಮ್ಮದ್‌ ಶಮಿ 9–0–74–1, ಹಾರ್ದಿಕ್‌ ಪಾಂಡ್ಯ 3–0–30–0, ವರುಣ್‌ ಚಕ್ರವರ್ತಿ 10–0–45–2, ಕುಲದೀಪ್‌ ಯಾದವ್ 10–0–40–2, ಅಕ್ಷರ್‌ ಪಟೇಲ್ 8–0–29–0, ರವೀಂದ್ರ ಜಡೇಜ 10–0–30–1 ಭಾರತ 6ಕ್ಕೆ 254 (49 ಓವರ್‌ಗಳಲ್ಲಿ)

ರೋಹಿತ್‌ ಸ್ಟಂಪ್ಡ್‌ ಲೇಥಮ್ ಬಿ ರಚಿನ್‌ 76 (83ಎ, 4x7,6x3)

ಶುಭಮನ್‌ ಸಿ ಫಿಲಿಪ್ಸ್‌ ಬಿ ಸ್ಯಾಂಟನರ್‌ 31 (50ಎ, 6x1)

ಕೊಹ್ಲಿ ಎಲ್‌ಬಿಡಬ್ಲ್ಯು ಬಿ ಬ್ರೇಸ್‌ವೆಲ್‌ 1 (2ಎ)

ಶ್ರೇಯಸ್‌ ಸಿ ರಚಿನ್‌ ಬಿ ಸ್ಯಾಂಟನರ್‌ 48 (62ಎ, 4x2, 6x2)

ಅಕ್ಷರ್‌ ಸಿ ಒ ರೂರ್ಕಿ ಬಿ ಬ್ರೇಸ್‌ವೆಲ್‌ 29 (40ಎ, 4x1, 6x1)

ಕೆ.ಎಲ್‌.ರಾಹುಲ್‌ ಔಟಾಗದೇ 34 (33ಎ, 4x1, 6x1)

ಹಾರ್ದಿಕ್‌ ಸಿ ಮತ್ತು ಬಿ ಜೆಮಿಸನ್‌ 18 (18ಎ, 4x1, 6x1)

ರವೀಂದ್ರ ಜಡೇಜ ಔಟಾಗದೇ 9 (6ಎ, 4x1)

ಇತರೆ: 8 (ವೈಡ್‌ 8)

ವಿಕೆಟ್ ಪತನ: 1–105 (ಶುಭಮನ್‌ ಗಿಲ್‌, 18.4), 2–106 (ವಿರಾಟ್‌ ಕೊಹ್ಲಿ, 19.1), 3–122 (ರೋಹಿತ್‌ ಶರ್ಮಾ, 26.1), 4–183 (ಶ್ರೇಯಸ್‌ ಅಯ್ಯರ್‌, 38.4), 5–203 (ಅಕ್ಷರ್‌ ಪಟೇಲ್‌, 41.3), 6–241 (ಹಾರ್ದಿಕ್‌ ಪಾಂಡ್ಯ, 47.3) 

ಬೌಲಿಂಗ್‌: ಕೈಲ್‌ ಜೆಮಿಸನ್‌ 5–0–24–1, ವಿಲ್‌ ಒ ರೂರ್ಕಿ
7–0–56–0, ನೇಥನ್‌ ಸ್ಮಿತ್‌ 2–0–22–0, ಮಿಚೆಲ್‌ ಸ್ಯಾಂಟನರ್‌ 10–0–46–2, ರಚಿನ್‌ ರವೀಂದ್ರ 10–1–47–1, ಮೈಕಲ್‌ ಬ್ರೇಸ್‌ವೆಲ್‌ 10–1–28–2, ಗ್ಲೆನ್‌ ಫಿಲಿಪ್ಸ್‌ 5–0–31–0

ಪಂದ್ಯದ ಆಟಗಾರ: ರೋಹಿತ್‌ ಶರ್ಮಾ
ಸರಣಿಯ ಆಟಗಾರ: ರಚಿನ್‌ ರವೀಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.