ADVERTISEMENT

ಚೆನ್ನೈ ರಸ್ತೆಗೆ ಕ್ರಿಕೆಟಿಗ ಆರ್.ಅಶ್ವಿನ್ ಹೆಸರು: ಮಹಾನಗರ ಪಾಲಿಕೆಯಿಂದ ನಿರ್ಧಾರ

ಪಿಟಿಐ
Published 22 ಮಾರ್ಚ್ 2025, 12:52 IST
Last Updated 22 ಮಾರ್ಚ್ 2025, 12:52 IST
   

ಚೆನ್ನೈ: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ರವಿಚಂದ್ರನ್‌ ಅಶ್ವಿನ್‌ ಅವರು ಕ್ರೀಡೆಗೆ ನೀಡಿರುವ ಕೊಡುಗೆಯನ್ನು ಗುರುತಿಸಿ, ಗೌರವಿಸುವ ಸಲುವಾಗಿ ಚೆನ್ನೈ ಮಹಾನಗರ ಪಾಲಿಕೆ (ಜಿಸಿಸಿ) ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದ ರಸ್ತೆಯೊಂದಕ್ಕೆ ಅವರ ಹೆಸರಿಡುವ ನಿರ್ಣಯವನ್ನು ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ತಮಿಳುನಾಡಿನ ಕ್ರಿಕೆಟ್‌ ದಿಗ್ಗಜರಾಗಿರುವ ಅಶ್ವಿನ್‌ ಅವರ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ, ಕೇರಂ ಬಾಲ್‌ ಈವೆಂಟ್‌ ಹಾಗೂ ಮಾರ್ಕೆಟಿಂಗ್ ಪ್ರೈವೇಟ್‌ ಲಿಮಿಟೆಡ್‌ನ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಎಸ್‌.ಕಾರ್ತಿಕ್‌ ಅವರು ಈ ಮನವಿ ಸಲ್ಲಿಸಿದ್ದರು.

ಅದರಂತೆ ಪಶ್ಚಿಮ ಮಾಂಬಲಮ್‌ನ ರಾಮಕೃಷ್ಣಪುರಂ ರಸ್ತೆಗೆ ಕ್ರಿಕೆಟಿಗನ ಹೆಸರಿಡುವ ನಿರ್ಣಯವನ್ನು ಚೆನ್ನೈ ಮೇಯರ್‌ ಆರ್‌.ಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಗೀಕರಿಸಲಾಗಿದೆ.

ADVERTISEMENT

ಪದ್ಮಶ್ರೀ ಪುರಸ್ಕೃತ ಅಶ್ವಿನ್‌ ಅವರು ತಮಿಳುನಾಡು ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ಸ್ಪಿನ್ನರ್‌ ಮತ್ತು ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.

ಈ ನಿರ್ಣಯವನ್ನು ಅಂಗೀಕರಿಸುವ ಮುನ್ನ ಜಿಸಿಸಿ, ರಾಜ್ಯ ಸರ್ಕಾರದ ಅನುಮೋದನೆ ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.