
ಭಾರತ ಕ್ರಿಕೆಟ್ ತಂಡ
ಚಿತ್ರ: ಗೆಟ್ಟಿ
ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಸೂಪರ್–8ರ ಮಹತ್ವದ ಪಂದ್ಯಕ್ಕೂ ಮುನ್ನ ಚೆನ್ನೈನ ಎಂ.ಎ. ಚಿದಂಬಂರಂ ಕ್ರೀಡಾಂಗಣಕ್ಕೆ ಮೈದಾನದಲ್ಲಿನ ತೇವಾಂಶ ನಿಭಾಯಿಸಲು ಅಮೆರಿಕದಿಂದ ತರಿಸಿರುವ 'ಡ್ಯೂ ಕ್ಯೂರ್' ಎಂಬ ಹೊಸ ರಾಸಾಯನಿಕವನ್ನು ಬಳಸಲಾಗುವುದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕಳೆದ ಒಂದು ವಾರದಿಂದ ನಗರದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಜಿಂಬಾಬ್ವೆ ಹಾಗೂ ಭಾರತದ ಪಂದ್ಯದಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್, ಯಾವುದೇ ತಂಡಕ್ಕೂ ನಷ್ಟ ಆಗಬಾರದು ಎಂದು ಡ್ಯೂ ಕ್ಯೂರ್ ರಾಸಾಯನಿಕ ತರಿಸಿದೆ ಎಂದು ವರದಿ ತಿಳಿಸಿದೆ.
ಗುರುವಾರ ನಡೆಯುವ ಪಂದ್ಯದ ಮೇಲೆ ಇಬ್ಬನಿ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ, ಹಾಗಾಗಬಾರದೆಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಅಮೆರಿಕದಿಂದ ಡ್ಯೂ ಕ್ಯೂರ್ ಅನ್ನು ತರಿಸಿದೆ. ಈ ಡ್ಯೂ ಕ್ಯೂರ್ ಅನ್ನು ಕೆಲವೊಮ್ಮೆ ಬೇಸ್‌ಬಾಲ್ ಪಂದ್ಯಗಳು ನಡೆಯುವ ಸ್ಥಳಗಳಲ್ಲಿ ಬಳಸಲಾಗುತ್ತದೆ.
ಭಾರತ ಮತ್ತು ಜಿಂಬಾಬ್ವೆ ಪಂದ್ಯಕ್ಕೆ ಮೈದಾನ ಸಿದ್ಧತೆಯ ಭಾಗವಾಗಿ, ರಾಸಾಯನಿಕವನ್ನು ನೀರಿನೊಂದಿಗೆ ಬೆರೆಸಿ ಮಂಗಳವಾರ ಮತ್ತು ಬುಧವಾರ ಸಂಜೆ ಹೊರಾಂಗಣದಲ್ಲಿ ಸಿಂಪಡಿಸಲಾಗಿದೆ. ಗುರುವಾರ ಕೂಡ ಅದನ್ನು ಮತ್ತೊಮ್ಮೆ ಬಳಸುವ ಯೋಜನೆ ಇರುವುದಾಗಿ ತಿಳಿದು ಬಂದಿದೆ.
‘ಒಮ್ಮೆ ಡ್ಯೂ ಕ್ಯೂರ್ ಅನ್ನು ಸಿಂಪಡಿಸಿದ ಬಳಿಕ, ಗರಿಕೆಯ ಮೇಲೆ ಬೀಳುವ ಇಬ್ಬನಿಯನ್ನು ಒಣಗಿಸುತ್ತದೆ. ಒದ್ದೆಯಾದ ತಕ್ಷಣ ಅದು ತನ್ನ ಕೆಲಸ ಆರಂಭಿಸುತ್ತದೆ ಮತ್ತು ಎಲೆಗಳು ಒಣಗುವಂತೆ ಮಾಡುತ್ತದೆ’ ಎಂದು ಮೂಲವೊಂದು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅಹಮದಾಬಾದ್‌ನಲ್ಲಿ ಮುಕ್ತಾಯಗೊಂಡ ಸೂಪರ್–8ರ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹೀನಾಯವಾಗಿ ಸೋತ ಬಳಿಕ ಭಾರತ ತಂಡವು ಬಾಕಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ವಿಶೇಷವಾಗಿ ಇಂದು ನಡೆಯಲಿರುವ ಜಿಂಬಾಂಬ್ವೆ ವಿರುದ್ಧದ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲುವ ಯೋಜನೆ ರೂಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.