
ಪಣಜಿ (ಗೋವಾ): ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರ್ಜುನ್ ಇರಿಗೇಶಿ ಮತ್ತು ಪೆಂಟಾಲ ಹರಿಕೃಷ್ಣ ಅವರು ವಿಶ್ವಕಪ್ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನ ಟೈಬ್ರೇಕರ್‌ನಲ್ಲಿ ಕ್ರಮವಾಗಿ ಹಂಗೆರಿಯ ಪೀಟರ್ ಲೆಕೊ ಮತ್ತು ಸ್ವೀಡನ್‌ನ ನಿಲ್ಸ್ ಗ್ರಾಂಡೆಲಿಯಸ್ ಅವರನ್ನು ಸೋಲಿಸಿ ಅಂತಿಮ 16ರ ಸುತ್ತು ತಲುಪಿದರು. ಆದರೆ ಹೋದ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಆರ್.ಪ್ರಜ್ಞಾನಂದ ಹೊರಬಿದ್ದರು.
ಇದರಿಂದಾಗಿ ಪ್ರಿಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಭಾರತದ ಇಬ್ಬರು ಆಟಗಾರರಷ್ಟೇ ಉಳಿದಿದ್ದಾರೆ.
ಎರಡನೇ ಶ್ರೇಯಾಂಕದ ಅರ್ಜುನ್, ಹಂಗೆರಿಯ ಅನುಭವಿ ಆಟಗಾರನ ವಿರುದ್ಧ ಗುರುವಾರ ಟೈಬ್ರೇಕರ್‌ನ ಮೊದಲ ಸೆಟ್‌ನಲ್ಲಿ ಎರಡೂ ಆಟ ಗೆಲ್ಲುವ ಮೂಲಕ 3–1ರಿಂದ ಪಂದ್ಯ ಗೆದ್ದರು.
ವೈಭವೊಪೇತ ರೆಸಾರ್ಟ್ ರಿಯೊದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಹರಿಕೃಷ್ಣ ಅವರು ಟೈಬ್ರೇಕರ್‌ನ ಮೊದಲ ಆಟ ಡ್ರಾ ಮಾಡಿದರು. ನಂತರ ಎರಡನೆಯನ್ನು ಗೆದ್ದು 2.5–1.5ರಲ್ಲಿ ಪಂದ್ಯ ಗೆದ್ದರು.
2023ರ ವಿಶ್ವಕಪ್‌ನಲ್ಲಿ ಕಾರ್ಲ್‌ಸನ್ ಎದುರು ಫೈನಲ್ ಆಡಿದ್ದ ಪ್ರಜ್ಞಾನಂದ ಇಲ್ಲಿ ಟೈಬ್ರೇಕರಿನಲ್ಲಿ ರಷ್ಯಾದ (ಫಿಡೆ ಪ್ರತಿನಿಧಿಸಿರುವ) ಡೇನಿಯಲ್ ದುಬೋವ್ ಅವರಿಗೆ ಸೋತರು. ಟೈಬ್ರೇಕರಿನ ಮೊದಲ ಆಟ ಡ್ರಾ ಆಯಿತು. ಎರಡನೇ ಆಟವನ್ನು ದುಬೋವ್ 53 ನಡೆಗಳಲ್ಲಿ ಗೆದ್ದರು.
ಅರ್ಜುನ್ ಇರಿಗೇಶಿ ಅವರಿಗೆ ಮುಂದಿನ ಸುತ್ತಿನಲ್ಲಿ ಉತ್ತಮ ಲಯದಲ್ಲಿರುವ ಅಮೆರಿಕದ ಆಟಗಾರ ಲೆವೋನ್ ಅರೋನಿಯನ್ ಅವರ ಸವಾಲು ಕಾದಿದೆ. ಅರೋನಿಯನ್ ಎರಡು ಬಾರಿಯ ಚಾಂಪಿಯನ್ ಆಗಿದ್ದಾರೆ.
ಮೂರನೇ ಸುತ್ತಿನಲ್ಲಿ, ವಿಶ್ವ ಚಾಂಪಿಯನ್ ಗುಕೇಶ್ ಅವರನ್ನು ಹೊರದೂಡಿದ್ದ ಜರ್ಮನಿಯ ಫ್ರೆಡೆರಿಕ್ ಸ್ವೇನ್ ಅವರು ನಾಲ್ಕನೇ ಸುತ್ತಿನಲ್ಲಿ ಅರ್ಮೇನಿಯಾದ ಸೆರ್ಗಿಸ್ಯಾನ್ ಶಾಂತ್ ಅವರನ್ನು 2.5–1.5 ರಿಂದ ಸೋಲಿಸಿ ಯಶಸ್ಸಿನ ಓಟ ಮುಂದುವರಿಸಿದ್ದಾರೆ.
ಲಗ್ರಾವ್‌ಗೆ ಆಘಾತ
ರಷ್ಯಾದ ಅಲೆಕ್ಸಿ ಗ್ರೆಬ್ನೆವ್, ಫ್ರಾನ್ಸ್‌ನ ತಾರೆ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು 2.5–1.5 ರಿಂದ ಸೋಲಿಸಿದ್ದು ದಿನದ ಅನಿರೀಕ್ಷಿತವೆನಿಸಿತು.
ಜರ್ಮನಿಯ ವಿನ್ಸೆಂಟ್ ಕೀಮರ್ ಅವರೂ ಹೊರಬಿದ್ದರು. ರಷ್ಯಾದ ಆಂಡ್ರಿ ಎಸಿಪೆಂಕೊ 4–2 ರಿಂದ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೀಮರ್ ಅವರನ್ನು ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ಸ್ಯಾಮ್ ಶಂಕ್ಲಾಂಡ್ (ಅಮೆರಿಕ) ಗೆಲುವಿನ ಓಟ ಮುಂದುವರಿಸಿ 3–1 ರಿಂದ ಹಂಗೆರಿಯ ರಿಚರ್ಡ್ ರ‍್ಯಾಪೋರ್ಟ್ ಅವರನ್ನು ಸೋಲಿಸಿದರು. ಉಜ್ಬೇಕ್ ಆಟಗಾರ ಜಾವೊಖಿರ್ ಸಿಂದರೊವ್ 2.5–1.5 ರಿಂದ ಚೀನಾದ ಯು ಯಾಂಗ್‌ಯಿ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.