ADVERTISEMENT

Chinnaswamy Stadium: ‘ಚಿನ್ನ’ದ ನೆನಪಲ್ಲಿ ತೇಲಿದ ದಿಗ್ಗಜರು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
<div class="paragraphs"><p>ಕೆಎಸ್‌ಸಿಎ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣಮಹೋತ್ಸವ ಸಮಾರಂಭದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರಾದ ಶಾಂತಾ ರಂಗಸ್ವಾಮಿ, ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರ ಹೆಸರುಗಳನ್ನು ಇಡಲಾಯಿತು. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಜರಿದ್ದರು</p></div>

ಕೆಎಸ್‌ಸಿಎ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣಮಹೋತ್ಸವ ಸಮಾರಂಭದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ಗಳಿಗೆ ದಿಗ್ಗಜ ಕ್ರಿಕೆಟಿಗರಾದ ಶಾಂತಾ ರಂಗಸ್ವಾಮಿ, ಅನಿಲ್ ಕುಂಬ್ಳೆ ಹಾಗೂ ರಾಹುಲ್ ದ್ರಾವಿಡ್ ಅವರ ಹೆಸರುಗಳನ್ನು ಇಡಲಾಯಿತು. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಜರಿದ್ದರು

   

ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್‌ ಪಿ.ಎಸ್.

ಬೆಂಗಳೂರು: ‘ನಾವು ಕ್ರಿಕೆಟ್ ಆಡುವ ದಿನಗಳಲ್ಲಿ ಅನಿಲ್ ಕುಂಬ್ಳೆ ಬೌಲಿಂಗ್ ಮಾಡುವಾಗ ನಾನು ಅವರ ಎದುರು ಫೀಲ್ಡಿಂಗ್ (ಸ್ಲಿಪ್/ಕೀಪಿಂಗ್) ಮಾಡಲು ನಿಲ್ಲುತ್ತಿದ್ದೆ. ಈಗ ನಮ್ಮಿಬ್ಬರ ಕ್ರಿಕೆಟ್ ಜೀವನ ಆರಂಭವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಅನಿಲ್ ಹೆಸರಿನ ಸ್ಟ್ಯಾಂಡ್‌ಗೆ ಎದುರಿಗೆ ನನ್ನ ಹೆಸರೂ ಇರಲಿದೆ..’–

ADVERTISEMENT

ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದ ಹುಲ್ಲುಹಾಸಿನ ಮೇಲೆ ಹಾಕಲಾಗಿದ್ದ ವೇದಿಕೆಯಲ್ಲಿ ಮೈಕ್ ಹಿಡಿದು ನಿಂತಿದ್ದ ರಾಹುಲ್ ದ್ರಾವಿಡ್ ಅವರ ಮಾತಿಗೆ ಅಲ್ಲಿದ್ದವರೆಲ್ಲರೂ ನಗೆಗಡಲಿಲ್ಲ ತೇಲಿದರು.  ಕ್ರೀಡಾಂಗಣದ ಪೆವಿಲಿಯನ್ ಎಂಡ್‌ಗೆ ಅನಿಲ್ ಕುಂಬ್ಳೆ ಮತ್ತು ನಾರ್ಥರನ್ ಎಂಡ್‌ಗೆ ರಾಹುಲ್ ದ್ರಾವಿಡ್ ಅವರ ಹೆಸರನ್ನು ನಾಮಕರಣ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ದ್ರಾವಿಡ್ ಮಾತನಾಡಿದರು. 

‘ನಾನು ಮೊದಲ ಸಲ ಈ ಕ್ರೀಡಾಂಗಣಕ್ಕೆ ಬಂದಿದ್ದು ಅಪ್ಪನೊಂದಿಗೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ನೋಡಲು. ನನ್ನ ಹೀರೊ ಜಿ.ಆರ್. ವಿಶ್ವನಾಥ್ ಅವರ ಬ್ಯಾಟಿಂಗ್ ನೋಡಲು ಬಂದಿದ್ದೆ. ಆ ಪಂದ್ಯದಲ್ಲಿ ಅವರು ಜಾನ್ ಲಿವರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಆದಾಗ ಬಹಳ ಬೇಸರಪಟ್ಟುಕೊಂಡಿದ್ದೆ. ಆ ಟೆಸ್ಟ್‌ನಲ್ಲಿ ಸುನಿಲ್ ಗಾವಸ್ಕರ್ ಶಕತ ಗಳಿಸಿದ್ದರು. 13–14 ವರ್ಷದವನಿದ್ದಾಗ ಇಲ್ಲಿ ನಡೆದ ಬೇಸಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡೆ.  ಹೆಸರಾಂತ ತರಬೇತುದಾರರಾದ ಪಿ.ಎಸ್. ವಿಶ್ವನಾಥ್ ಮತ್ತು ಕೆಕಿ ತಾರಾಪುರ್ ಅವರ ಮಾರ್ಗದರ್ಶನ ಲಭಿಸಿತು’ ಎಂದು ರಾಹುಲ್ ನೆನಪಿಸಿಕೊಂಡರು. 

‘ಈ ಕ್ರೀಡಾಂಗಣವು ಐತಿಹಾಸಿಕ ಮಹತ್ವದ್ದು. ಇಲ್ಲಿ ನಾನು ಅಭ್ಯಾಸ ಮಾಡುವಾಗ ನನ್ನ ಎದುರಿಗೆ ರಾಷ್ಟ್ರೀಯ ತಂಡದಲ್ಲಿ ಆಡಿದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಡೇವಿಡ್ ಜಾನ್ಸನ್, ದೊಡ್ಡ ಗಣೇಶ್ ಅವರಂತಹ ಖ್ಯಾತನಾಮರು ಬೌಲಿಂಗ್ ಮಾಡುತ್ತಿದ್ದರು. ಸುಜಿತ್ ಸೋಮಸುಂದರ್ ಬ್ಯಾಟಿಂಗ್ ನೋಡಿ ಕಲಿತೆ. ಅಂತಹ ಮಹನೀಯರ ಎದುರು ಅಭ್ಯಾಸ ಮಾಡಿ ನಾನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡದೇ ಹೋಗಿದ್ದರೆ ನನ್ನದೇ ತಪ್ಪಾಗುತ್ತಿತ್ತು’ ಎಂದರು. 

ರಣಜಿ ತಂಡಕ್ಕೆ ಕುಂಬ್ಳೆ ಹಾರೈಕೆ

‘ನಾನು 9 ವರ್ಷದವನಿದ್ದಾಗ ಮೊದಲ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ–ತಮಿಳುನಾಡು ರಣಜಿ ಪಂದ್ಯ ನೋಡಲು ಬಂದಿದ್ದೆ. ಕ್ರೀಡಾಂಗಣ ಜನರಿಂದ ಭರ್ತಿಯಾಗಿತ್ತು. ಆ ಪಂದ್ಯದಲ್ಲಿ ರೋಜರ್ ಬಿನ್ನಿ ಶತಕ ಬಾರಿಸಿದ್ದರು. ನಾನು ಕರ್ನಾಟಕ ತಂಡಕ್ಕೆ  ಆಡಲು ಆರಂಭಿಸಿದಾಗ ಬಿನ್ನಿ ಅವರೇ ನಾಯಕರಾಗಿದ್ದರು. ಈ ವರ್ಷ ನಮ್ಮ ಕರ್ನಾಟಕ ತಂಡವು ಸೆಮಿಫೈನಲ್‌ಗೆ ಬಂದಿದೆ. ಈ ಬಾರಿ ಚಾಂಪಿಯನ್ ಆಗುವ ಸಾಮರ್ಥ್ಯ ಈ ತಂಡಕ್ಕೆ ಇದೆ ಎಂಬ ವಿಶ್ವಾಸ ನನಗೆ ಇದೆ. ತಂಡಕ್ಕೆ ಶುಭವಾಗಲಿ’ ಎಂದು ಕುಂಬ್ಳೆ ಹೇಳಿದರು.

‘1974ರಲ್ಲಿ ಈ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ನಡೆದಿತ್ತು. ಆ ಐತಿಹಾಸಿಕ ದಿನಕ್ಕೆ ಐವತ್ತು ವರ್ಷಗಳು ತುಂಬಿವೆ. ಅದಕ್ಕಾಗಿ ಈ ಕಾರ್ಯಕ್ರಮ ನಡೆಯುತ್ತಿದೆ. ತವರಿನಂಗಳದಲ್ಲಿ ನನಗೆ ಇಂತಹ ಗೌರವ ಲಭಿಸಿರುವುದು ಸಂತಸವಾಗಿದೆ’ ಎಂದರು. 

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸಂತೋಷ್ ಮೆನನ್, ವಕ್ತಾರ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಬಿ.ಕೆ. ರವಿ ಹಾಗೂ ಮಂಜುನಾಥ್ ಅವರು ಮುಂಬರುವ ಯೋಜನೆಗಳು, ಟೂರ್ನಿಗಳ ಕುರಿತು ವಿವರ ನೀಡಿದರು. 

ಪ್ರೇಕ್ಷಕರ ಸ್ಟ್ಯಾಂಡ್‌ಗೆ ಶಾಂತಾ ಹೆಸರು

ಭಾರತ ಮಹಿಳಾ ಕ್ರಿಕೆಟ್ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ಪ್ರೇಕ್ಷಕರ (ಬಿ ಲೋವರ್‌) ಸ್ಟ್ಯಾಂಡ್‌ ಗೆ ಇಡಲಾಯಿತು. 

80ರ ದಶಕದಲ್ಲಿ ಅವರು ಇಲ್ಲಿ ಆಡಿದ್ದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸಿಕ್ಸರ್‌ಗೆತ್ತಿದ್ದ ಚೆಂಡು ಈ ಸ್ಟ್ಯಾಂಡ್‌ಗೇ ಬಂದು ಬಿದ್ದಿತ್ತು. ಅದು ಮಹಿಳಾ ಟೆಸ್ಟ್‌ನಲ್ಲಿ ಬ್ಯಾಟರ್‌ವೊಬ್ಬರು ಹೊಡೆದ ಮೊದಲ ಸಿಕ್ಸರ್ ಕೂಡ ಆಗಿತ್ತು. 

‘ಇಂತಹದೊಂದು ಗೌರವ ನನಗೆ ಸಿಗುವುದರ ಬಗ್ಗೆ ಕನಸು ಕೂಡ ಕಂಡಿರಲಿಲ್ಲ. ತವರಿನಂಗಳದಲ್ಲಿ ಇಂತಹ ಸಮ್ಮಾನ ದೊರೆತಿದ್ದು ಸಂತಸವಾಗಿದೆ. ಮಹಿಳಾ ಕ್ರಿಕೆಟ್‌ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿರುವುದೂ ಕೂಡ ಖುಷಿಯ ಸಂಗತಿ. ಈ ಯಶಸ್ಸಿನ ಹಿಂದೆ ಹಲವಾರು ಜನರ ಸಹಕಾರ, ಬೆಂಬಲ ಇದೆ’ ಎಂದು ಶಾಂತಾ ಹೇಳಿದರು. 

‘ಭಾರತ ಮತ್ತು ಕರ್ನಾಟಕದ ಮಹಿಳಾ ಕ್ರಿಕೆಟ್‌ಗೆ ಶಾಂತಾ ರಂಗಸ್ವಾಮಿ ಅವರ ಕೊಡುಗೆ ಅಪಾರ. ಅವರು ಬಹಳಷ್ಟು ಮಹಿಳಾ ಕ್ರಿಕೆಟಿಗರಿಗೆ ಪ್ರೇರಣೆಯಾಗಿದ್ದಾರೆ. ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಭಾರತದ ಮಹಿಳಾ ಕ್ರಿಕೆಟ್ ಬೆಳವಣಿಗೆಗೂ ಕಾರಣರಾಗಿದ್ದಾರೆ. ಅವರಿಗೆ ಈ ಗೌರವ ನೀಡಲು ನಮ್ಮ ಸಂಸ್ಥೆಗೆ ಹೆಮ್ಮೆಯಾಗಿದೆ’ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದರು. 

ಹೋದ ವರ್ಷವೂ ನಡೆದಿತ್ತು ನಾಮಕರಣ

ಒಂದು ವರ್ಷದ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದ ಕೆಲವು ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್ ದಿಗ್ಗಜರ ಹೆಸರುಗಳನ್ನು ಇಡಲಾಗಿತ್ತು. 

ಎರಪಳ್ಳಿ ಪ್ರಸನ್ನ (ಪಿ1 ಸ್ಟ್ಯಾಂಡ್), ಜಿ.ಆರ್. ವಿಶ್ವನಾಥ್ (ಪಿ2 ಸ್ಟ್ಯಾಂಡ್), ಬಿ.ಎಸ್. ಚಂದ್ರಶೇಖರ್ (ಪಿ ಟೆರೆಸ್), ಸೈಯದ್ ಕಿರ್ಮಾನಿ (ಪಿ ಕಾರ್ಪೋರೆಟ್), ಬ್ರಿಜೇಶ್ ಪಟೇಲ್ (ಎಂ1 ಸ್ಟ್ಯಾಂಡ್), ರೋಜರ್ ಬಿನ್ನಿ (ಎಂ2 ಸ್ಟ್ಯಾಂಡ್), ಅನಿಲ್ ಕುಂಬ್ಳೆ (ಡೈಮಂಡ್ ಬಾಕ್ಸ್), ರಾಹುಲ್ ದ್ರಾವಿಡ್ (ಎನ್‌ ಸ್ಟ್ಯಾಂಡ್), ಜಾವಗಲ್ ಶ್ರೀನಾಥ್ (ಪಿ1 ಎ ಸ್ಟ್ಯಾಂಡ್) ಮತ್ತು  ವೆಂಕಟೇಶ್ ಪ್ರಸಾದ್ (ಪಿ4 ಸ್ಟ್ಯಾಂಡ್) ಅವರ ಹೆಸರುಗಳ ಫಲಕಗಳನ್ನು ಅಳವಡಿಸಲಾಗಿತ್ತು. ಕರ್ನಾಟಕ ತಂಡವು 1974ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ಜಯಿಸಿತ್ತು. ಆಗ ತಂಡದ ನಾಯಕರಾಗಿದ್ದ ಪ್ರಸನ್ನ, ಸ್ಪಿನ್ನರ್ ಬಿ.ಎಸ್. ಚಂದ್ರಶೇಖರ್, ವಿಕೆಟ್‌ಕೀಪರ್ ಸೈಯದ್ ಕಿರ್ಮಾನಿ ಮತ್ತು ಬ್ಯಾಟರ್ ಜಿ.ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್ ಅವರ ಹೆಸರುಗಳನ್ನು ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಸ್ಟ್ಯಾಂಡ್‌ಗಳಿಗೆ ಇಡಬೇಕು ಎಂದು  ಇತಿಹಾಸಕಾರ ರಾಮಚಂದ್ರ ಗುಹಾ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. 

ನಾಗರಾಜ್, ತಿಮ್ಮಪ್ಪಯ್ಯಗೆ ಗೌರವ:

ಈ ಹಿಂದೆ ಕೆಎಸ್‌ಸಿಎ ಆಡಳಿತಗಾರರಾಗಿ ಮಹತ್ವದ ಕಾಣಿಕೆ ನೀಡಿದ್ದ ಸಿ. ನಾಗರಾಜ್ ಮತ್ತು ಕ್ಯಾಪ್ಟನ್ ಡಾ. ತಿಮ್ಮಪ್ಪಯ್ಯ ಅವರ ಹೆಸರುಗಳನ್ನು ಕ್ರಮವಾಗಿ ಎಂ3 ಮತ್ತು ಎಂ4 ಸ್ಟ್ಯಾಂಡ್‌ಗಳಿಗೆ ಇಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.