ADVERTISEMENT

Commonwealth Games Cricket: ಮಂದಾನ ಅರ್ಧಶತಕ, ಪಾಕ್ ಸೋಲಿಸಿದ ಭಾರತ ಮಹಿಳಾ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2022, 13:45 IST
Last Updated 31 ಜುಲೈ 2022, 13:45 IST
ಸ್ಮೃತಿ ಮಂದಾನ ಬ್ಯಾಟಿಂಗ್‌ ವೈಖರಿ (ಚಿತ್ರಕೃಪೆ: @BCCIWomen)
ಸ್ಮೃತಿ ಮಂದಾನ ಬ್ಯಾಟಿಂಗ್‌ ವೈಖರಿ (ಚಿತ್ರಕೃಪೆ: @BCCIWomen)   

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು ಪರಾಭವಗೊಂಡಿದ್ದ ಭಾರತ ಮಹಿಳೆಯರ ತಂಡ, ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸುಲಭ ಜಯ ಸಾಧಿಸಿದೆ.

‍ಪಾಕಿಸ್ತಾನ ನೀಡಿದ 100 ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್‌ ಕಳೆದುಕೊಂಡು 12ನೇ ಓವರ್‌ನಲ್ಲೇ ತಲುಪಿದ ಟೀಂ ಇಂಡಿಯಾ, ಟೂರ್ನಿಯಲ್ಲಿ ಮೊದಲ ಜಯದ ಸವಿಯುಂಡಿತು.

ಮಂದಾನ ಅಮೋಘ ಬ್ಯಾಟಿಂಗ್‌
ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಆಟರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಉತ್ತಮ ಅಡಿಪಾಯ ಹಾಕಿಕೊಟ್ಟರು. ತಂಡದ ಮೊತ್ತ 5.5 ಓವರ್‌ಗಳಲ್ಲಿ 61 ರನ್‌ ಆಗಿದ್ದಾಗ, 16 ರನ್ ಗಳಿಸಿದ್ದ ವರ್ಮಾ ಔಟಾದರು.

ADVERTISEMENT

ನಂತರ ಬಂದ ಸಭಿನೇನಿ ಮೇಘನಾ 14 ರನ್ ಗಳಿಸಿ, ತಂಡ ಜಯದ ಹೊಸ್ತಿಲಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.

ಅಜೇಯ ಆಟವಾಡಿದ ಮಂದಾನ ಕೇವಲ 42 ಎಸೆತಗಳಲ್ಲಿ 63 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 3 ಸಿಕ್ಸರ್‌ ಹಾಗೂ 8 ಬೌಂಡರಿಗಳಿದ್ದವು. ಕೊನೆಯಲ್ಲಿ ಜೆಮಿಯಾ ರಾಡ್ರಿಗಸ್‌ (2) ಜೊತೆಗೂಡಿ ಜಯದ ಲೆಕ್ಕಾ ಚುಕ್ತಾ ಮಾಡಿದರು.

ಭಾರತ ತಂಡವು ಆಗಸ್ಟ್‌ 3ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಬಾರ್ಬಡಾಸ್‌ವಿರುದ್ಧ ಕಣಕ್ಕಿಳಿಯಲಿದೆ. ಅದೇದಿನ ಪಾಕಿಸ್ತಾನವು ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಲಿದೆ.

ಕುಸಿದ ಪಾಕಿಸ್ತಾನ
ಮಳೆಯಿಂದಾಗಿ ಎರಡು ಓವರ್‌ ಕಡಿತಗೊಂಡ ಪಂದ್ಯದಲ್ಲಿಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ತಾನ, ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ನಾಯಕರಿಬಿಸ್ಮಾ ಮಹರೂಫ್, ಆರಂಭಿಕ ಬ್ಯಾಟುಗಾರ್ತಿಮುನೀಬಾ ಅಲಿ ಜೊತೆಗೂಡಿ ಎರಡನೇ ವಿಕೆಟ್‌ಗೆ 50 ರನ್‌ ಸೇರಿಸಿದರು.

ಈ ವೇಳೆ ದಾಳಿಗಿಳಿದ ಸ್ನೇಹ್‌ ರಾಣಾ, ಮಹರೂಫ್‌ ವಿಕೆಟ್‌ ಪಡೆದು ಪೆಟ್ಟುಕೊಟ್ಟರು. ಇದಾದ ಬಳಿಕ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ್ದ ಪಾಕ್‌ ಪಡೆಗೆ ಮುಳುವಾಯಿತು.

ಮುನೀಬಾ 32 ರನ್‌ ಕಲೆ ಹಾಕಿದರೆ, ಅಲಿಯಾ ರಿಯಾಜ್‌ 18 ಮತ್ತು ಮಹರೂಫ್‌ 17 ರನ್‌ ಗಳಿಸಿದರು. ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯಿತು. ಭಾರತ ಪರ ಸ್ನೇಹ್ ರಾಣಾ ಮತ್ತು ರಾಧಾ ಯಾದವ್‌ ತಲಾ ಎರಡು ವಿಕೆಟ್‌ ಉರುಳಿಸಿದರು. ರೇಣುಕಾ ಸಿಂಗ್‌, ಮೇಘನಾ ಸಿಂಗ್‌ ಮತ್ತು ಶಫಾಲಿ ವರ್ಮಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.