ಲಂಡನ್‌ನ ಕ್ಲಾರೆನ್ಸ್ ಹೌಸ್‌ನಲ್ಲಿ ಮಂಗಳವಾರ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರೊಂದಿಗೆ ಬ್ರಿಟನ್ ರಾಜಕುಮಾರ ಚಾರ್ಲ್ಸ್ III ಅವರು ಮಾತುಕತೆ ನಡೆಸಿದರು
–ಪಿಟಿಐ ಚಿತ್ರ
ಸೌತಾಂಪ್ಟನ್ : ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿರುವ ಭಾರತದ ವನಿತೆಯರು ಬುಧವಾರ ಆರಂಭವಾಗಲಿರುವ ಮೂರು ಏಕದಿನಪಂದ್ಯಗಳ ಸರಣಿಯಲ್ಲೂ ಪಾರಮ್ಯ ಮೆರೆಯುವ ವಿಶ್ವಾಸದಲ್ಲಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಬಳಗವು ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 3–2 ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ. ಇದೇ ವರ್ಷಾಂತ್ಯದಲ್ಲಿ ತವರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದರ ಪೂರ್ವತಯಾರಿಯ ಭಾಗವಾಗಿ ಈ ಸರಣಿಯು ಮಹತ್ವ ಪಡೆದಿದೆ.
ಮೇ ತಿಂಗಳಿನಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿಯನ್ನು ಭಾರತ ಗೆದ್ದುಕೊಂಡಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯನ್ನೂ ಜಯಿಸಿ, ತಂಡದ ಸ್ಥಿರತೆಯನ್ನು ಉತ್ತಮಗೊಳಿಸಲು ಕೌರ್ ಪಡೆ ಎದುರು ನೋಡುತ್ತಿದೆ.
‘ಎರಡು ವರ್ಷಗಳಿಂದ ನಾವು ಏಕದಿನ ಕ್ರಿಕೆಟ್ ಮಾದರಿಯ ಆಟದಲ್ಲಿ ಸುಧಾರಣೆ ಕಂಡಿದ್ದೇವೆ. ಯಾವಾಗಲೂ 300ಕ್ಕೂ ಹೆಚ್ಚು ರನ್ ಗಳಿಸುವತ್ತ ಗಮನ ಹರಿಸಿದ್ದೇವೆ. ಇದು ನಮ್ಮ ಬೌಲರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ’ ಎಂದು ನಾಯಕಿ ಹರ್ಮನ್‌ಪ್ರೀತ್ ಹೇಳಿದ್ದಾರೆ.
ಯುವ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್, ಮತ್ತೊಮ್ಮೆ ಅನುಭವಿ ಆಟಗಾರ್ತಿ ಶಫಾಲಿ ವರ್ಮಾ ಅವರ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ತ್ರಿಕೋನ ಸರಣಿಯಲ್ಲಿ ರಾವಲ್ ಉತ್ತಮ ಪ್ರದರ್ಶನ ನೀಡಿ, ಏಕದಿನ ಮಾದರಿಯಲ್ಲಿ ಅತಿ ವೇಗದ 500 ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪ ನಾಯಕಿ ಸ್ಮೃತಿ ಮಂದಾನ, ಫಿನಿಷರ್ ರಿಚಾ ಘೋಷ್, ಜೆಮಿಮಾ ರಾಡ್ರಿಗಸ್ ಮತ್ತು ಹರ್ಲೀನ್ ಡಿಯೋಲ್ ಅವರನ್ನು ಒಳಗೊಂಡ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಭಾರತ ಹೊಂದಿದೆ. ಕೆಳ ಹಂತದಲ್ಲಿ ದೀಪ್ತಿ ಶರ್ಮಾ ಮತ್ತು ಅಮನ್ಜೋತ್ ಕೌರ್ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
ವೇಗಿಗಳಾದ ತಿತಾಸ್ ಸಾಧು, ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಕರ್ ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್ ಬಳಗವು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದೆ. ಈ ಆಟಗಾರ್ತಿಯರು ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಕ್ರಾಂತಿ ಗೌಡ್, ಅಮನ್ಜೋತ್ ಬೆಂಬಲದೊಂದಿಗೆ ಭಾರತದ ವೇಗದ ದಾಳಿಯನ್ನು ಅರುಂಧತಿ ರೆಡ್ಡಿ ಮುನ್ನಡೆಸಲಿದ್ದಾರೆ. ಭಾರತದ ಸ್ಪಿನ್ ವಿಭಾಗ ಮಾತ್ರ ಬಲಿಷ್ಠವಾಗಿದೆ.
ಮತ್ತೊಂದೆಡೆ ಪ್ರಮುಖ ಆಟಗಾರ್ತಿಯರು ವಾಪಸಾಗಿದ್ದರಿಂದ ಇಂಗ್ಲೆಂಡ್ ತಂಡದ ಬಲ ಹೆಚ್ಚಿದೆ. ತೊಡೆ ಸ್ನಾಯುವಿನ ನೋವಿನಿಂದಾಗಿ ಮೂರು ಟಿ20 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ನ್ಯಾಟ್ ಸಿವರ್ ಬ್ರಂಟ್ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ವಿಶ್ರಾಂತಿಯಲ್ಲಿದ್ದ ಅನುಭವಿ ಬೌಲರ್ ಸೋಫಿ ಎಕ್ಲೆಸ್ಟೋನ್ ಅವರೂ ತಂಡಕ್ಕೆ ಮರಳಿದ್ದಾರೆ.
ಪಂದ್ಯ ಆರಂಭ: ಸಂಜೆ 5.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.