
ರಾಜಕೋಟ್: ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅತ್ಯುತ್ತಮ ಲಯದಲ್ಲಿ ಆಡುತ್ತಿರುವ ಕಾರಣ ಭಾರತ ತಂಡ ಎದುರಿಸುತ್ತಿರುವ ಗಾಯಾಳುಗಳ ಸಮಸ್ಯೆ ಎದ್ದುಕಾಣುತ್ತಿಲ್ಲ. ಉತ್ತಮ ಆರಂಭ ಪಡೆದಿರುವ ಆತಿಥೇಯ ತಂಡ ಬುಧವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
ವಡೋದರಾಡದಲ್ಲಿ ನಡೆದ ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಪಕ್ಕೆನೋವಿಗೆ ಒಳಗಾದ ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರಬಿದ್ದಿದ್ದಾರೆ. ಆಯ್ಕೆಗಾರರು ಅವರ ಸ್ಥಾನದಲ್ಲಿ ದೆಹಲಿಯ ಆಯುಷ್ ಬಡೋನಿ ಅವರಿಗೆ ಅವಕಾಶ ಕೊಟ್ಟಿದ್ದಾರೆ.
ಆದರೆ ಕೋಚ್ ಗೌತಮ್ ಗಂಭೀರ್ ಅವರು ಬಹುಕೌಶಲದ ಆಟಗಾರರಿಗೆ ಒಲವು ತೋರುವ ಕಾರಣ ನಿತೀಶ್ ಕುಮಾರ್ ರೆಡ್ಡಿ ಅವರು ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಮೊದಲ ಪಂದ್ಯಕ್ಕೆ ಮುನ್ನಾದಿನ ರಿಷಭ್ ಪಂತ್ ಅವರು ಥ್ರೋಡೌನ್ ಎದುರಿಸುವ ಸಂದರ್ಭದಲ್ಲಿ ಸೊಂಟದ ಮೇಲ್ಭಾಗಕ್ಕೆ ಚೆಂಡುಬಡಿದು ಗಾಯಾಳಾಗಿದ್ದರು. ಇದರಿಂದಾಗಿ ಧ್ರುವ್ ಜುರೇಲ್ ಅವರು ತಂಡಕ್ಕೆ ಸೇರ್ಪಡೆಯಾದರು.
ಆದರೆ ದಿಗ್ಗಜ ಆಟಗಾರರಾದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಮೇಲೆಯೇ ಹೆಚ್ಚಿನ ಗಮನ ನೆಟ್ಟಿರುವುದರಿಂದ ಗಾಯಾಳುಗಳ ಸಮಸ್ಯೆ ತೆರೆಮರೆಗೆ ಸರಿದಿದೆ.
ಮೊದಲ ಪಂದ್ಯದಲ್ಲಿ ನಾಯಕ ಶುಭಮನ್ ಗಿಲ್ (56) ಅರ್ಧ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ ಅವರು ನಿರೀಕ್ಷೆಯ ಭಾರದ ನಡುವೆ ಸಮಯೋಚಿತ ಆಟವಾಡಿ 93 ರನ್ (91ಎ) ಹೊಡೆದಿದ್ದರು. ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದ್ದರು. ರೋಹಿತ್ ಲಗುಬಗನೇ 26 ರನ್ ಗಳಿಸಿದ್ದರು.
ಪ್ರವಾಸಿ ನ್ಯೂಜಿಲೆಂಡ್ ತಂಡ ಕೆಲವು ಅನುಭವಿ ಬ್ಯಾಟರ್‌ಗಳನ್ನು ಹೊಂದಿದ್ದರೂ, ಬೌಲಿಂಗ್‌ನಲ್ಲಿ ಅದೇ ಮಾತು ಹೇಳುವಂತಿಲ್ಲ. ಸೋಲಿನ ಹೊರತಾಗಿಯೂ ಮೊದಲ ಪಂದ್ಯದಲ್ಲಿ ಭಾರತಕ್ಕೆ ಪೈಪೋಟಿ ನೀಡುವಲ್ಲಿ ಮೈಕೆಲ್ ಬ್ರೇಸ್‌ವೆಲ್ ಪಡೆ ಯಶಸ್ವಿಯಾಗಿತ್ತು. ವೇಗದ ಬೌಲರ್ ಕೈಲ್ ಜೇಮಿಸನ್ 4 ವಿಕೆಟ್ ಪಡೆದು ಹೋರಾಟಕ್ಕೆ ಕಾರಣರಾಗಿದ್ದರು.
ಆದರೆ ಕೊನೆಯ ಹಂತದಲ್ಲಿ ಕೈಬಿಟ್ಟ ಕ್ಯಾಚುಗಳು ತಂಡಕ್ಕೆ ದುಬಾರಿಯಾದವು. ಡೆವಾನ್ ಕಾನ್ವೆ (56) ಮತ್ತು ಹೆನ್ರಿ ನಿಕೋಲ್ಸ್ (62) ಅವರು ಮೊದಲ ವಿಕೆಟ್‌ಗೆ 117 ರನ್ ಸೇರಿಸಿ ಉತ್ತಮ ಆರಂಭ ನೀಡಿದರೂ, ಅದರ ಲಾಭವನ್ನು ಮಧ್ಯಮ ಕ್ರಮಾಂಕದ ಆಟಗಾರರು ದೊಡ್ಡದಾಗಿ ಬಳಸಿಕೊಳ್ಳಲಿಲ್ಲ. ಮೂರನೇ ಕ್ರಮಾಂಕದ ಬ್ಯಾಟರ್ ಡೆರಿಲ್ ಮಿಚೆಲ್ ಗಳಿಸಿದ 84 ರನ್‌ಗಳಿಂದಾಗಿ ತಂಡ 300ರ ಗಡಿ ತಲುಪಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 1.30.
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.