ADVERTISEMENT

ಕೋವಿಡ್–19 | ನಿಗದಿಯಂತೆ ಮಹಿಳಾ ವಿಶ್ವಕಪ್ ನಡೆಸುವುದು ಉತ್ತಮ: ಜೂಲನ್ ಗೋಸ್ವಾಮಿ

ಏಜೆನ್ಸೀಸ್
Published 13 ಮೇ 2020, 13:50 IST
Last Updated 13 ಮೇ 2020, 13:50 IST
   

ನವದೆಹಲಿ: ಕೋವಿಡ್‌–19 ಸೋಂಕು ಭೀತಿಯಿಂದಾಗಿ ಜಗತ್ತಿನಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿವೆ. ಒಲಿಂಪಿಕ್‌, ಐಪಿಎಲ್‌ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳನ್ನು ಮೂಂದೂಡಲಾಗಿದೆ. ಆದರೆ, ಭಾರತಮಹಿಳಾ ಕ್ರಿಕೆಟ್‌ ತಂಡದ ಅನುಭವಿ ವೇಗದ ಬೌಲರ್‌ಜೂಲನ್‌ ಗೋಸ್ವಾಮಿ ಅವರು, ಮುಂದಿನ ವರ್ಷ ನಡೆಯಬೇಕಿರುವ ಮಹಿಳೆಯರ ವಿಶ್ವಕಪ್‌ ಟೂರ್ನಿಯನ್ನು ವಿಳಂಬ ಮಾಡುವ ಬದಲು ಸಮಯಕ್ಕೆ ಸರಿಯಾಗಿ ನಡೆಸುವುದು ಉತ್ತಮ ಎಂದು ಹೇಳಿದ್ದಾರೆ. ಲಾಕ್‌ಡೌನ್ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ.

‘ಆರಂಭದಲ್ಲಿ ಇದು (ಕೊರೊನಾವೈರಸ್‌) ದೊಡ್ಡಪರಿಣಾಮ ಉಂಟು ಮಾಡುತ್ತದೆ ಎಂದುಕೊಂಡಿರಲಿಲ್ಲ. ಏನಾಗುತ್ತಿದೆ ಎಂಬುದೂ ಗೊತ್ತಾಗಲಿಲ್ಲ. ಇದ್ದಕ್ಕಿದ್ದಂತೆ ನಮಗೆ ಲಾಕ್‌ಡೌನ್‌ನಲ್ಲಿರುವಂತೆ ತಿಳಿಸಲಾಯಿತು. ಇದೀಗ ಬದುಕುವುದು ಹೇಗೆ ಎಂಬುದನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ಕಲಿಯುತ್ತಿದ್ದೇವೆ’ಎಂದು ಹೇಳಿಕೊಂಡಿದ್ದಾರೆ.

‘ನಮ್ಮ ಆಲೋಚನಾ ಪ್ರಕ್ರಿಯೆಗಳು ಬದಲಾಗುತ್ತಿವೆ. ದಿನಚರಿಯನ್ನೂ ಬದಲಿಸಿಕೊಳ್ಳುತ್ತಿದ್ದೇವೆ. ನಾನೀಗ ಅಭ್ಯಾಸಆರಂಭಿಸಿದ್ದೇನೆ. ಮನೆಯಲ್ಲೇ ಬೆಳಗ್ಗೆ ತಾಲೀಮು ನಡೆಸುತ್ತಿದ್ದೇನೆ. ಸದ್ಯದ ಸನ್ನಿವೇಶದಲ್ಲಿ ಮನೆಯಲ್ಲಿರುವುದೇ ಉತ್ತಮ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ್ತಿ ಎನಿಸಿರುವ ಗೋಸ್ವಾಮಿ, ಮುಂದಿನ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳೆಯರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಡುವ ಆಲೋಚನೆಯಲ್ಲಿದ್ದಾರೆ. ಕೊರೊನಾವೈರಸ್‌ ಸೋಂಕು ಭಿತಿ ಹೆಚ್ಚುತ್ತಲೇ ಇರುವುದರಿಂದ ಟೂರ್ನಿ ನಡೆಯುವುದು ಇನ್ನೂ ಖಚಿತವಾಗಿಲ್ಲ. ಆದಾಗ್ಯೂ, ಇಂತಹ ಮಹತ್ವದ ಟೂರ್ನಿಗಳಲ್ಲಿ ತಂಡವು ಉತ್ತಮ ಸಂಯೋಜನೆಯನ್ನು ಕಂಡುಕೊಳ್ಳಬೇಕಾದುದು ಅಗತ್ಯ. ಸದ್ಯ ಭಾರತ ಮಾತ್ರವಲ್ಲ, ಎಲ್ಲ ತಂಡಗಳೂ ಇಂತಹ ಆಲೋಚನೆಯಿಂದ ದೂರ ಉಳಿದಿವೆಎಂದು ಅವರು ಹೇಳಿದ್ದಾರೆ.

‘ಮುಂದಿನ ವರ್ಷದವರೆಗಿನ (ವಿಶ್ವಕಪ್‌ವರೆಗಿನ) ನಮ್ಮ ಹಾದಿ ಸುಲಭವಾಗಿಯೇನು ಇಲ್ಲ. ಸಾಕಷ್ಟು ತಿಂಗಳುಗಳೇನು ಉಳಿದಿಲ್ಲ ಮತ್ತು ನಾವಿನ್ನೂ ಅಂಗಳಕ್ಕಿಳಿದು ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ. ಮಾತ್ರವಲ್ಲದೆ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿಯೂ ಭಾಗವಹಿಸಿಲ್ಲ. ವಿಶ್ವಕಪ್‌ಗೂ ಮುನ್ನ ಆಡುವ ಪಂದ್ಯಗಳು ಉತ್ತಮವಾಗಿ ತಂಡದ ಸಂಯೋಜನೆಯನ್ನು ಮಾಡಿಕೊಳ್ಳಲು ನೆರವಾಗಲಿವೆ’ಎಂದು ನುಡಿದಿದ್ದಾರೆ.

‘ಅಂತಹ ಯೋಜನೆಗಳನ್ನು ಕಾರ್ಯಗತಗೊಳಿಸಲು ನಮಗೆ ಈವರೆಗೂಸಾಧ್ಯವಾಗಿಲ್ಲ. ಇದು ಸಾಧಾರಣವಾದ ಸಮಯವಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಏನನ್ನೂ ಮಾಡಲಾಗದು. ಆದರೆ, ಕೊರೊನಾವೈರಸ್‌ ಸೋಂಕು ಇಲ್ಲವಾದಾಗ ಅಥವಾ ಅದರ ಪರಿಣಾಮಗಳು ಕಡಿಮೆಯಾದಾಗ ಹೆಚ್ಚು ಆಕ್ರಮಣಕಾರಿಯಾಗಿ ತರಬೇತಿಯನ್ನು ಆರಂಭಿಸಬೇಕು’ಎಂದು ಕರೆ ನೀಡಿದ್ದಾರೆ.

‘ನಾವೀಗ ಸರಿಯಾದ ತಂಡ ಸಂಯೋಜನೆ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ವಿಶ್ವಕಪ್‌ಗೂ ಮುನ್ನ ಸಾಧ್ಯವಾದಷ್ಟು ಪಂದ್ಯಗಳನ್ನು ಆಡಬೇಕಿದೆ. ಟೂರ್ನಿಯನ್ನು ಮುಂದೂಡುವುದಕ್ಕಿಂತ ನಿಗದಿಯಂತೆನಡೆಸುವುದು ಉತ್ತಮ’ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷವೇ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳಿರುವ ಜೂಲನ್‌, ಕೊರೊನಾವೈರಸ್‌ ಸೋಂಕು ಪರಿಣಾಮ ಕಡಿಮೆಯಾದ ಬಳಿಕ ವಿಶ್ವಕಪ್‌ ಮಾತ್ರವಲ್ಲದೆ ಮಹಿಳೆಯರ ಐಪಿಎಲ್‌ ಕೂಡ ನಡೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. ‘ಕೋವಿಡ್–19 ಕೊನೆಗೊಂಡ ನಂತರ ಬಿಸಿಸಿಐ ಈ (ಮಹಿಳಾ ಐಪಿಎಲ್‌) ಬಗ್ಗೆ ತೀರ್ಮಾನಿಸಲಿದೆ. ಖಂಡಿತವಾಗಿಯೂ ನಾವೆಲ್ಲರೂ ಮಹಿಳೆಯರ ಐಪಿಎಲ್‌ ಅನ್ನು ಎದುರು ನೋಡುತ್ತಿದ್ದೇವೆ. ಮಂಡಳಿಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ನನಗನಿಸುತ್ತದೆ. ಶೀಘ್ರದಲ್ಲೇ ಇದು (ಮಹಿಳಾ ಐಪಿಎಲ್‌) ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.