ADVERTISEMENT

ರಸ್ತೆ ಸುರಕ್ಷತಾ ಸರಣಿಗೆ ಚಾಲನೆ

ರಸ್ತೆ ಸುರಕ್ಷತೆಗೆ ಮೂಡಿಬಂದ ಕಾಳಜಿ: ಫೆಬ್ರುವರಿಯಲ್ಲಿ ಟ್ವೆಂಟಿ–20 ಕ್ರಿಕೆಟ್‌

ನಾಗೇಶ್ ಶೆಣೈ ಪಿ.
Published 17 ಅಕ್ಟೋಬರ್ 2019, 20:14 IST
Last Updated 17 ಅಕ್ಟೋಬರ್ 2019, 20:14 IST
ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗರಾದ ಬ್ರಯನ್‌ ಲಾರಾ, ಜಾಂಟಿ ರೋಡ್ಸ್‌ ಮತ್ತು ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು ---ಎಎಫ್‌ಪಿ ಚಿತ್ರ
ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗರಾದ ಬ್ರಯನ್‌ ಲಾರಾ, ಜಾಂಟಿ ರೋಡ್ಸ್‌ ಮತ್ತು ಸಚಿನ್ ತೆಂಡೂಲ್ಕರ್ ಭಾಗವಹಿಸಿದ್ದರು ---ಎಎಫ್‌ಪಿ ಚಿತ್ರ   

ಮುಂಬೈ: ಭಾರತದ ದಿಗ್ಗಜ ಬ್ಯಾಟ್ಸ್‌ಮನ್ನರಾದ ಸುನಿಲ್‌ ಗಾವಸ್ಕರ್‌, ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌, ಆಸ್ಟ್ರೇಲಿಯಾದ ಶರವೇಗಿ ಬ್ರೆಟ್‌ ಲೀ, ದಕ್ಷಿಣ ಆಫ್ರಿಕದ ಚುರುಕಿನ ಫೀಲ್ಡರ್‌ ಜಾಂಟಿ ರೋಡ್ಸ್‌, ವೆಸ್ಟ್‌ ಇಂಡೀಸ್‌ನ ದಿಗ್ಗಜ ಆಟಗಾರ ಬ್ರಯನ್‌ ಲಾರಾ, ಶ್ರೀಲಂಕಾದ ಆಕರ್ಷಕ ಆಟಗಾರ ತಿಲಕರತ್ನ ದಿಲ್ಶನ್‌ ಎಲ್ಲರೂ ಒಟ್ಟಾಗಿ ಗುರುವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಅವರೆಲ್ಲ ಜೊತೆಯಾಗಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ‘ರೋಡ್ ಸೇಫ್ಟಿ ವರ್ಲ್ಡ್‌ ಸಿರೀಸ್‌’ಗೆ ಚಾಲನೆ ನೀಡುವ ಸಮಾರಂಭದಲ್ಲಿ. ಗುರುವಾರ ಇಲ್ಲಿ ಕಾರ್ಯಕ್ರಮ ನಡೆಯಿತು.

ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಮುಂದಿನ ವರ್ಷದ ಫೆಬ್ರುವರಿ 4 ರಿಂದ 16 ರವರೆಗೆ ಮುಂಬೈ ಮತ್ತು ಪುಣೆಯಲ್ಲಿ ಈ ಸರಣಿಯನ್ನು ಆಡಲಿವೆ.

ADVERTISEMENT

‘ಲಿಟ್ಲ್‌ ಮಾಸ್ಟರ್‌’ ಗಾವಸ್ಕರ್‌ ಈ ಟೂರ್ನಿಯ ಕಮಿಷನರ್‌ ಆಗಿದ್ದರೆ, ಸಮಾರಂಭದ ಕೇಂದ್ರಬಿಂದುವಾಗಿದ್ದ ತೆಂಡೂಲ್ಕರ್‌ ಅವರು ಸರಣಿಯ ‘ಬ್ರ್ಯಾಂಡ್‌ ಅಂಬಾಸಿಡರ್‌’ ಆಗಿದ್ದಾರೆ.

ಕಟ್ಟುನಿಟ್ಟಿನ ನಿಯಮ ಇರಲಿ: ರಸ್ತೆ ಸುರಕ್ಷತೆ ಮಹತ್ವಕ್ಕೆ ಸಂಬಂಧಿಸಿ ಮಾತನಾಡಿದ ಗಾವಸ್ಕರ್‌, ‘ಈ ವಿಷಯ ನಮ್ಮಲ್ಲಿ ಕಡೆಗಣನೆಗೆ ಒಳಗಾಗಿದೆ. ಚಾಲನಾ ಪರವಾನಗಿ ನೀಡುವ ಸಂದರ್ಭದಲ್ಲಿ ಸರಿಯಾಗಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ. ಲೈಸೆನ್ಸ್‌ಗಳನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು. ನಿಯಮಗಳ ಉಲ್ಲಂಘನೆಯಾದರೆ ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಅಪ ಘಾತಗಳನ್ನು ನಿಯಂತ್ರಿಸಲು ಇದೊಂದೇ ದಾರಿ’ ಎಂದು ಅಭಿಪ್ರಾಯಪಟ್ಟರು.

‘ಹಿಂದೆ, ವೆಸ್ಟ್‌ ಇಂಡೀಸ್‌ ಪ್ರವಾಸ ದಿಂದ ಮರಳಿದ ನಂತರ ನಾನು ಹೊಸದಾಗಿ ಕಾರು ಕೊಂಡಿದ್ದೆ. ನನ್ನ ಚಾಲನಾ ಪರೀಕ್ಷೆಯ ವೇಳೆ ಕಾರನ್ನು ರಿವರ್ಸ್‌ ತೆಗೆದುಕೊಂಡು ನಿಲುಗಡೆ ಮಾಡಲು ಪರದಾಡುತ್ತಿದ್ದೆ. ಆಗ ನನ್ನ ಜೊತೆಗಿದ್ದ ಇನ್‌ಸ್ಟ್ರಕ್ಟರ್‌ ಒಬ್ಬರು, ನೀವು ನೇರವಾಗಿ ಚಲಾಯಿಸಿ. ಲೈಸೆನ್ಸ್‌ ನಾನು ಕೊಡಿಸುತ್ತೇನೆ’ ಎಂದು ಹೇಳಿದ್ದನ್ನು ಅವರು ಉಲ್ಲೇಖಿಸಿದರು.

ಭಾರತದಲ್ಲಿ ಸಂಭವಿಸುವ ರಸ್ತೆ ಅಪ ಘಾತಗಳಲ್ಲಿ ಪ್ರತಿ ನಾಲ್ಕು 1.5 ಲಕ್ಷಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತಗಳಿಂದ ಸಾವಿಗೆ ತುತ್ತಾಗುತ್ತಿದ್ದಾರೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರಂತೆ ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ ಪ್ರತಿ ದಿನ 1,214 ಅಪಘಾತಗಳು ನಡೆಯುತ್ತಿವೆ ಎಂದು ಥಾಣೆಯ ಆರ್‌ಟಿಒ (ಕೊಂಕಣ ವಲಯ) ರವಿ ಗಾಯಕವಾಡ್‌ ಅವರು ಕಳವಳಕಾರಿ ಮಾಹಿತಿಯನ್ನು ಬಿಚ್ಚಿಟ್ಟರು.

ಪಿಎಂಜಿ ಸಂಸ್ಥೆಯ ಸಿಒಒ ಮೆಲ್ರಾಯ್‌ ಡಿಸೋಜ, ವಯಾಕಾಮ್ 18ರ ಗ್ರೂಪ್‌ ಸಿಇಒ ಸುಧಾಂಶು ವತ್ಸ್‌, ಟಿಕ್‌ಟಾಕ್‌ ಇಂಡಿಯಾದ ನಿತಿನ್‌ ಸಲೂಜಾ ಅವರೂ ಇದ್ದರು. ಈ ಲೀಗ್‌ನಿಂದ ಬರುವ ಆದಾಯದಲ್ಲಿ ಒಂದು ಭಾಗವನ್ನು ‘ಶಾಂತ ಭಾರತ ಸುರಕ್ಷಿತ ಭಾರತ’ ಚಾರಿಟಬಲ್‌ ಟ್ರಸ್ಟ್‌ಗೆ ನೀಡಲಾಗುವುದು. ಈ ಟ್ರಸ್ಟ್‌, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.