ನವದೆಹಲಿ: ತಂಡದ ಸಂತುಲನ ಮತ್ತು ಅಗ್ರ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರ ಭರವಸೆಯ ಉಪಸ್ಥಿತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಈ ವರ್ಷ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಡಲಿದೆ ಎಂಬುದು ದಿಗ್ಗಜ ಆಟಗಾರ ಎಬಿ ಡಿ ವಿಲಿಯರ್ಸ್ ಅವರ ದೃಢವಿಶ್ವಾಸ.
ದಕ್ಷಿಣ ಆಫ್ರಿಕಾದ ಈ ಆಕ್ರಮಣಕಾರಿ ಆಟಗಾರ ಬೆಂಗಳೂರಿನ ತಂಡಕ್ಕೆ 11 ವರ್ಷ ಆಡಿದ್ದರು. ಶ್ರೇಷ್ಠ ಬ್ಯಾಟರ್‌ಗಳ ಪಡೆಯನ್ನು ಹೊಂದಿದ್ದ ಆರ್‌ಸಿಬಿ ಮೂರುಬಾರಿ ಫೈನಲ್ ತಲುಪಿತ್ತು. ಆದರೆ ಅಂತಿಮ ಹಂತದಲ್ಲಿ ನಿರಾಸೆ ಅನುಭವಿಸಿತ್ತು.
18ನೇ ಆವೃತ್ತಿಗೆ ತಂಡಕ್ಕೆ ರಜತ್ ಪಾಟಿದಾರ್ ನೂತನ ನಾಯಕರಾಗಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಅವರು ಕೊಹ್ಲಿ ಅವರ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ.
‘ಮೆಗಾ ಹರಾಜಿನ ವೇಳೆ ಆರ್‌ಸಿಬಿ ಒಳ್ಳೆಯ ತಂತ್ರಗಳನ್ನು ಹೆಣೆದಿದ್ದಾರೆಂಬ ಭಾವನೆ ಮೂಡಿದೆ’ ಎಂದು ಡಿ ವಿಲಿಯರ್ಸ್ ಮಂಗಳವಾರ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಇದು ಎಲ್ಲ ರೀತಿಯಿಂದ ಸಮತೋಲನ ಹೊಂದಿರುವ ತಂಡ. ಬ್ಯಾಟಿಂಗ್ ಸರದಿಯನ್ನೇ ನೋಡಿ. ಅಲ್ಲಿ ಭರ್ಜರಿ ಹೊಡೆತಗಳ ಆಟಗಾರರಿದ್ದಾರೆ. ನಿಯಂತ್ರಿತ ಆಕ್ರಮಣದ ಆಟವಾಡುವವರೂ ಇದ್ದಾರೆ. ಈ ಪಡೆ ತಂಡವನ್ನು ಯಶಸ್ಸಿನತ್ತ ಒಯ್ಯುವ ಸಾಮರ್ಥ್ಯ ಹೊಂದಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೊಬ್ ಬೆಥೆಲ್ ಮತ್ತು ಟಿಮ್ ಡೇವಿಡ್ ಮಧ್ಯಮ ಕ್ರಮಾಂಕದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಅವರು ಚತುರ ಬೌಲರ್ ಭುವನೇಶ್ವರ ಕುಮಾರ್ ಜೊತೆ ವೇಗದ ವಿಭಾಗದಲ್ಲಿದ್ದಾರೆ’ ಎಂದರು.
‘ಸ್ಟ್ರೈಕ್‌ರೇಟ್‌ಗೆ ಸಂಬಂಧಿಸಿ ಕೊಹ್ಲಿ ಅನಗತ್ಯ ಟೀಕೆಗಳಿಗೆ ಆಹಾರ ಆಗುತ್ತಿದ್ದಾರೆ. ಅವರಲ್ಲಿ ಇನ್ನೂ ಸಾಕಷ್ಟು ಉತ್ತಮ ಆಟ ಉಳಿದಿದೆ’ ಎಂದು ಸ್ಪೋಟಕ ಹೊಡೆತಗಳ ಬ್ಯಾಟರ್ ಹೇಳಿದರು.
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಟಿ20ಗೆ ನಿವೃತ್ತಿ ಹೇಳಿರಬಹುದು. ಆದರೆ 36 ವರ್ಷ ವಯಸ್ಸಿನ ಆಟಗಾರ ಇನ್ನೂ ಉತ್ತಮ ಆಟ ನೀಡುವ ಸಾಮರ್ಥ್ಯ ಉಳ್ಳವರು‘ ಎಂದು ಹೇಳಿದರು.
‘ವಿರಾಟ್ ಅವರು ಸಾಕಷ್ಟು ಒತ್ತಡ ಅನುಭವಿಸಬಹುದು. ಆದರೆ ಪರಿಸ್ಥಿತಿಗೆ ತಕ್ಕಂತೆ ಆಟವಾಡುವ ವೇಳೆ ಅವರು ಒಬ್ಬ ಶ್ರೇಷ್ಠ ಆಟಗಾರನಾಗುತ್ತಾರೆ’ ಎಂದು ಡಿ ವಿಲಿಯರ್ಸ್ ವಿಶ್ಲೇಷಿಸಿದರು. ಸಾಲ್ಟ್ ಅವರ ಆಕ್ರಮಣಕಾರಿ ಆಟವು, ವಿರಾಟ್ ಮೇಲಿನ ಒತ್ತಡ ಕಡಿಮೆ ಮಾಡಿ, ‘ಬ್ಯಾಟಿಂಗ್ ನಾಯಕ’ನಾಗಿ ಅವರು ಇನಿಂಗ್ಸ್ ನಿಯಂತ್ರಿಸಲು ಅವಕಾಶ ನೀಡಬಹುದು’ ಎಂದೂ ಹೇಳಿದರು
‘ಇಷ್ಟು ವರ್ಷಗಳ ಕಾಲ ಪಂದ್ಯದ ಗತಿ ನಿಯಂತ್ರಿಸಲು ಯಾವ ರೀತಿ ಆಡುತ್ತಿದ್ದರೊ ಅದನ್ನೇ ವಿರಾಟ್ ಮುಂದುವರಿಸಿಕೊಂಡು ಹೋದರೆ ಸಾಕು’ ಎಂದರು.
ಜೈಪುರ (ಪಿಟಿಐ): ತೋರುಬೆರಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿ ಸಿಕೊಂಡಿರುವ ನಾಯಕ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಮವಾರ ಸೇರಿಕೊಂಡರು.
30 ವರ್ಷ ವಯಸ್ಸಿನ ವಿಕೆಟ್ ಕೀಪರ್–ಬ್ಯಾಟರ್ ಸಂಜು ಬೆಂಗಳೂರಿನ ಶ್ರೇಷ್ಠತಾ ಕೇಂದ್ರದಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದ ರು. ಸೋಮವಾರ ರಾಯಲ್ಸ್ ಪ್ರಾಕ್ಟೀಸ್ ವೇಳೆ ಮೊದಲ ಬಾರಿ ಭಾಗಿಯಾದರು. ಈ ವಿಷಯವನ್ನು ಫ್ರಾಂಚೈಸಿಯು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ವೇಳೆ ಜೋಫ್ರಾ ಆರ್ಚರ್ ಎಸೆದ ಬೌನ್ಸರ್‌ನಿಂದ ಸಂಜು ಬೆರಳಿಗೆ ಗಾಯವಾಗಿತ್ತು.
ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಹೈದರಾಬಾದಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಇದೇ 23ರಂದು ಆಡಲಿದೆ. ಫಿಟ್ನೆಸ್ ಮರಳಿ ಪಡೆದರೂ ಅವರು ಕೀಪಿಂಗ್ ಮಾಡುವರೇ ಎಂಬುದು ಖಚಿತವಾಗಿಲ್ಲ. ಅವರು ಇದಕ್ಕೆ ಫಿಟ್ ಆಗದಿದ್ದಲ್ಲಿ ಆ ಪಾತ್ರವನ್ನು ಧ್ರುವ್ ಜುರೆಲ್ ನಿಭಾಯಿಸಬೇಕಾಗುತ್ತದೆ. ರಿಯಾನ್ ಪರಾಗ್ ಕೂಡ ಭುಜದ ನೋವಿನಿಂದ ಪೂರ್ಣವಾಗಿ ಚೇತರಿಸಿಕೊಂಡಿರುವುದು ತಂಡದ ಉತ್ಸಾಹ ಹೆಚ್ಚಿಸಿದೆ.
ಚಂಡೀಗಢ (ಪಿಟಿಐ): ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಗೆದ್ದ ಭಾರತ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿ ಗಮನಸೆಳೆದಿದ್ದ ಶ್ರೇಯಸ್ ಅಯ್ಯರ್, ಇದೀಗ ಐಪಿಎಲ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿ ಛಾಪು ಮೂಡಿಸಲು ಬಯಸಿದ್ದಾರೆ. ಅಯ್ಯರ್ ಅವರು ಭಾರತ ಟಿ20 ತಂಡದ ಭಾಗವಾಗಿಲ್ಲ. ಆದರೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಅವರು ಯಶಸ್ಸು ಸಾಧಿಸಿದಲ್ಲಿ ಈ ಮಾದರಿಯಲ್ಲೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶದ ಬಾಗಿಲು ತೆರೆಯಬಹುದು. ಕಳೆದ ಋತುವಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದ ವೇಳೆ ಶ್ರೇಯಸ್ ಐದನೇ ಕ್ರಮಾಂಕದಲ್ಲಿ ಆಡಿದ್ದರು.
‘ಐಪಿಎಲ್ ಭಾರತೀಯ ಕ್ರಿಕೆಟ್‌ನ ಅವಿಭಾಜ್ಯ ಅಂಗವಾಗಿರುವುದು ಗೊತ್ತಿರುವ ಸಂಗತಿ. ಟಿ20 ಕ್ರಿಕೆಟ್‌ನಲ್ಲಿ ಯಾವುದಾದರೂ ಸ್ಥಾನದಲ್ಲಿ ನಾನು ಛಾಪು ಮೂಡಿಸಲು ಬಯಸುವುದಾದರೆ ಅದು ಮೂರನೇ ಕ್ರಮಾಂಕ. ಅದರ ಕಡೆಗಷ್ಟೇ ಲಕ್ಷ್ಯ ಹರಿಸಿದ್ದೇನೆ’ ಎಂದು ಮಾಧ್ಯಮ ಸಂವಾದದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಅಯ್ಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.