ADVERTISEMENT

Ind vs Eng T20 | ಅಭಿಷೇಕ್ ಶರ್ಮಾ ಆರ್ಭಟ; ಭಾರತಕ್ಕೆ 4–1ರಿಂದ ಸರಣಿ ಜಯ

ಪಿಟಿಐ
Published 2 ಫೆಬ್ರುವರಿ 2025, 16:46 IST
Last Updated 2 ಫೆಬ್ರುವರಿ 2025, 16:46 IST
<div class="paragraphs"><p>ಭಾರತ ತಂಡದ ಸಂಭ್ರಮಾಚರಣೆ</p></div>

ಭಾರತ ತಂಡದ ಸಂಭ್ರಮಾಚರಣೆ

   

ರರಾಯಿಟರ್ಸ್ ಚಿತ್ರ

ಮುಂಬೈ: ಪಂಜಾಬ್ ಹುಡುಗ ಅಭಿಷೇಕ್ ಶರ್ಮಾ ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ಸಮುದ್ರದಂತೆ ಭೋರ್ಗರೆದರು. 

ADVERTISEMENT

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶರವೇಗದ ಶತಕ ಬಾರಿಸಿದ  ಎರಡನೇ ಭಾರತೀಯ ಬ್ಯಾಟರ್ ಆದರು. ಕೇವಲ 37 ಎಸೆತಗಳಲ್ಲಿ ಅವರು ಶತಕ ಪೂರೈಸಿದರು. ಅದರಿಂದಾಗಿ ಭಾರತ ತಂಡವು  ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ 150 ರನ್‌ಗಳಿಂದ ಜಯಿಸಿತು. 4–1ರಿಂದ ಸರಣಿ ಜಯಿಸಿತು.

ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 247 ರನ್ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ 10.3 ಓವರ್‌ಗಳಲ್ಲಿ 97 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ವೇಗಿ ಮೊಹಮ್ಮದ್ ಶಮಿ (25ಕ್ಕೆ3), ಸ್ಪಿನ್ನರ್ ವರುಣ್ ಚಕ್ರವರ್ತಿ (25ಕ್ಕೆ2), ಶಿವಂ ದುಬೆ (11ಕ್ಕೆ2) ಮತ್ತು
ಅಭಿಷೇಕ್ ಶರ್ಮಾ (3ಕ್ಕೆ2) ಇಂಗ್ಲೆಂಡ್ ತಂಡದ ಹೆಡೆಮುರಿ ಕಟ್ಟಿದರು. 

ಆರಂಭಿಕ ಬ್ಯಾಟರ್ ಶರ್ಮಾ ಅವರು 18ನೇ ಓವರ್‌ನಲ್ಲಿ ಆದಿಲ್ ರಶೀದ್‌ ಎಸೆತದಲ್ಲಿ ಔಟಾಗುವ ಮುನ್ನ 54 ಎಸೆತಗಳಲ್ಲಿ 135 ರನ್ ಗಳಿಸಿದರು. ಅವರು ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮವೋ ಸಂಭ್ರಮ. 250ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್ ಸೂರೆ ಮಾಡಿದರು. 

ಸಾಲು ಸಾಲು ಸಿಕ್ಸರ್‌, ಬೌಂಡರಿಗಳ ಆರ್ಭಟಕ್ಕೆ ಇಂಗ್ಲೆಂಡ್ ಬೌಲರ್‌ಗಳು ನಡುಗಿದರು. ಒಟ್ಟು 13 ಸಿಕ್ಸರ್‌ಗಳು ಮತ್ತು 7 ಬೌಂಡರಿಗಳು ಅವರ ಬ್ಯಾಟಿನಿಂದ ಸಿಡಿದವು. 

ಅಭಿಷೇಕ್ ಅವರು ಜೆಮಿ ಓವರ್ಟನ್ ಹಾಕಿದ 5ನೇ ಓವರ್‌ನಲ್ಲಿ ಸಿಕ್ಸರ್ ಎತ್ತಿ ಅರ್ಧಶತಕ (17 ಎಸೆತ) ಪೂರೈಸಿದರು. ವೇಗದ ಅರ್ಧಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಆದರು.  ಅವರು ತಿಲಕ್ ವರ್ಮಾ (24 ರನ್) ಅವರೊಂದಿಗೆ 2ನೇ ವಿಕೆಟ್  ಜೊತೆಯಾಟದಲ್ಲಿ 115 ರನ್ ಸೇರಿಸಿದರು.  ಅವರ ಆಟದ ವೇಗಕ್ಕೆ ತಂಡದ ಮೊತ್ತವು 9 ಓವರ್‌ಗಳಲ್ಲಿ 136 ರನ್‌ಗಳಾಗಿದ್ದವು. 

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮತ್ತು ಸಹ ಆಟಗಾರರು ಅಭಿಷೇಕ್ ಆಟಕ್ಕೆ ಬಸವಳಿದರು. 

2017ರಲ್ಲಿ ರೋಹಿತ್ ಶರ್ಮಾ ಅವರು ಶ್ರೀಲಂಕಾ ಎದುರು 35 ಎಸೆತಗಳಲ್ಲಿ ಶತಕ ಗಳಿಸಿದ್ದರು. ಅಭಿಷೇಕ್ ಅವರು ರೋಹಿತ್‌ಗಿಂತ ಎರಡು ಎಸೆತ ಹೆಚ್ಚು ತೆಗೆದುಕೊಂಡರು.

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 9ಕ್ಕೆ247 (ಸಂಜು ಸ್ಯಾಮ್ಸನ್ 16, ಅಭಿಷೇಕ್ ಶರ್ಮಾ 135, ತಿಲಕ್ ವರ್ಮಾ 24, ಶಿವಂ ದುಬೆ 30, ಅಕ್ಷರ್ ಪಟೇಲ್ 15, ಮಾರ್ಕ್ ವುಡ್ 32ಕ್ಕೆ2, ಬ್ರೈಡನ್ ಕೇರ್ಸ್ 38ಕ್ಕೆ3) ಇಂಗ್ಲೆಂಡ್: 10.3 ಓವರ್‌ಗಳಲ್ಲಿ 97 (ಫಿಲಿಪ್ ಸಾಲ್ಟ್ 55, ಜೇಕಬ್ ಬೆತೆಲ್ 10, ಮೊಹಮ್ಮದ್ ಶಮಿ 25ಕ್ಕೆ3, ವರುಣ ಚಕ್ರವರ್ತಿ 25ಕ್ಕೆ2, ಶಿವಂ ದುಬೆ 11ಕ್ಕೆ2, ಅಭಿಷೇಕ್ ಶರ್ಮಾ 3ಕ್ಕೆ2, ರವಿ ಬಿಷ್ಣೋಯಿ 9ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 150 ರನ್‌ ಜಯ. ಸರಣಿಯಲ್ಲಿ 4–1ರಿಂದ ಗೆಲುವು.

ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.