ADVERTISEMENT

ಟಿ–20 ಕ್ರಿಕೆಟ್: ಕಿವೀಸ್ 'ಗಾಯ'ಕ್ಕೆ ಬರೆ ಹಾಕುವ ವಿಶ್ವಾಸದಲ್ಲಿ ಟೀಂ ಇಂಡಿಯಾ

ವಿರಾಟ್ ಕೊಹ್ಲಿ – ಕೇನ್ ವಿಲಿಯಮ್ಸನ್ ಮುಖಾಮುಖಿ ಇಂದಿನಿಂದ

ಪಿಟಿಐ
Published 23 ಜನವರಿ 2020, 20:00 IST
Last Updated 23 ಜನವರಿ 2020, 20:00 IST
   
""
""

ಆಕ್ಲೆಂಡ್: ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತ ತಂಡವು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಹತ್ತಾರು ಪ್ರಯೋಗಗಳಿಗೂ ಕೈಹಾಕಿದೆ.

ಶುಕ್ರವಾರ ಇಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯು ಭಾರತದ ಪೂರ್ವಾಭ್ಯಾಸದ ಪ್ರಮುಖ ಘಟ್ಟವಾಗಿದೆ. ಹೋದ ಭಾನುವಾರ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಎದುರು ನಡೆದಿದ್ದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿತ್ತು. ಆ ಸರಣಿಯನ್ನು ಮುಡಿಗೇರಿಸಿಕೊಂಡಿದ್ದ ಭಾರತ ತಂಡವು ನ್ಯೂಜಿಲೆಂಡ್‌ಗೆ ಕಾಲಿಟ್ಟು ಮೂರು ದಿನಗಳಷ್ಟೇ ಕಳೆದಿವೆ. ಇದರಿಂದಾಗಿ ವಿರಾಟ್ ಕೊಹ್ಲಿ ಬಳಗವು ಅಪಾರ ಆತ್ಮವಿಶ್ವಾಸದಲ್ಲಿದೆ.

ಗುರುವಾರ ಒಂದೇ ದಿನ ಅಭ್ಯಾಸ ಮಾಡುವ ಅವಕಾಶ ಸಿಕ್ಕಿದೆ. ಗಾಯಗೊಂಡು ಹೊರಬಿದ್ದಿರುವ ಶಿಖರ್ ಧವನ್, ಹಾರ್ದಿಕ್ ಪಾಂಡ್ಯ, ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಅವರಿಲ್ಲದೇ ತಂಡವು ಕಣಕ್ಕಿಳಿಯುತ್ತಿದೆ. ಕನ್ನಡಿಗ ಕೆ.ಎಲ್. ರಾಹುಲ್ ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್‌ನಲ್ಲಿ ಈಗಾಗಲೇ ತಮ್ಮ ಸ್ಥಾನ ಕಂಡುಕೊಂಡಿದ್ದಾರೆ. ಅವರಿಗೆ ಈ ಸರಣಿಯಲ್ಲಿಯೂ ಎರಡೂ ಹೊಣೆಗಳನ್ನು ನೀಡುವ ಇಂಗಿತವನ್ನು ಕೊಹ್ಲಿ ಕೂಡ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಶಿಖರ್ ಇಲ್ಲದ ಕಾರಣ ರೋಹಿತ್ ಶರ್ಮಾ ಜೊತೆಗೆ ರಾಹುಲ್ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

ADVERTISEMENT

ಇದರಿಂದಾಗಿ ರಿಷಭ್ ಪಂತ್ ಬೆಂಚ್ ಕಾಯಬೇಕಾಗಬಹುದು. ಸಂಜು ಸ್ಯಾಮ್ಸನ್‌ ಮತ್ತು ಶಿವಂ ದುಬೆ ಅವರಲ್ಲೊಬ್ಬರಿಗೆ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕು. ಆದರೆ, ಶ್ರೇಯಸ್ ಅಯ್ಯರ್ ಮತ್ತು ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

ಬೌಲಿಂಗ್‌ನಲ್ಲಿ ಮಧ್ಯಮವೇಗದ ಪಡೆಯು ಉತ್ತಮ ಲಯದಲ್ಲಿದೆ. ಇಲ್ಲಿಯ ಪಿಚ್‌ಗಳು ವೇಗಿಗಳಿಗೆ ಹೆಚ್ಚು ನೆರವು ನೀಡುವ ಕಾರಣ ಮೂವರು ಮಧ್ಯಮವೇಗಿಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ನವದೀಪ್ ಸೈನಿ ಅಥವಾ ಶಾರ್ದೂಲ್ ಠಾಕೂರ್ ಅವರಲ್ಲೊಬ್ಬರಿಗಷ್ಟೇ ಅವಕಾಶವಾಗಬಹುದು. ಸ್ಪಿನ್ ವಿಭಾಗದಲ್ಲಿ ಆಗ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅಥವಾ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರಲ್ಲಿ ಒಬ್ಬರು ಮಾತ್ರ ಆಡುವ ಸಾಧ್ಯತೆ ಇದೆ.

ಕೇನ್ ವಿಲಿಯಮ್ಸನ್

ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ಬಳಗವು ಕೂಡ ಉತ್ತಮ ಫಾರ್ಮ್‌ನಲ್ಲಿದೆ. ಹೋದ ವರ್ಷ ಕಿವೀಸ್ ತಂಡವು 2–1ರಿಂದ ಭಾರತದ ಎದುರು ಟಿ20 ಸರಣಿ ಗೆದ್ದಿತ್ತು. ಶ್ರೀಲಂಕಾ ವಿರುದ್ಧವೂ ಜಯಿಸಿತ್ತು. ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ 2–2ರಿಂದ ಸಮಬಲ ಸಾಧಿಸಿತ್ತು. ಆದರೆ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯಲ್ಲಿ ಹೀನಾಯ ಸೋಲನುಭವಿಸಿತ್ತು.

ಪ್ರಮುಖ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗ್ಯುಸನ್ ಅವರು ಗಾಯಗೊಂಡಿರುವುದು ಕೂಡ ತಂಡದ ಚಿಂತೆಗೆ ಕಾರಣವಾಗಿದೆ. ಟಿಮ್ ಸೌಥಿ, ಸ್ಪಿನ್ನರ್ ಮಿಚೆಲ್ ಸ್ಯಾಂಟನರ್, ಈಶ್ ಸೋಧಿ ಅವರ ಮೇಲೆ ಒತ್ತಡ ಹೆಚ್ಚಿದೆ. ಬ್ಯಾಟಿಂಗ್‌ನಲ್ಲಿ ಸ್ವತಃ ಕೇನ್, ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್ ಮತ್ತು ಕಾಲಿನ್ ಮನ್ರೊ ಅವರು ಲಯಕ್ಕೆ ಮರಳುವುದು ಅಗತ್ಯವಾಗಿದೆ.

ಮಳೆ ಸಾಧ್ಯತೆ: ಶುಕ್ರವಾರ ಇಲ್ಲಿ ಮಳೆ ಬರುವ ಸಾಧ್ಯತೆ ಇದೆ. ಸ್ಥಳೀಯ ಕಾಲಮಾನವಾದ ರಾತ್ರಿ ಏಳು ಗಂಟೆಗೆ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆ ಇರುತ್ತದೆ ಎಂದು ಹೇಳಲಾಗಿದೆ.

ಇಲ್ಲಿಯ ಪಿಚ್‌ ಸ್ಪರ್ಧಾತ್ಮಕವಾಗಿದೆ. ಹೋದ ಸಲ ಇಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಸೂಪರ್‌ ಓವರ್‌ನಲ್ಲಿ ಮುಕ್ತಾಯಗೊಂಡಿತ್ತು.

*
ನ್ಯೂಜಿಲೆಂಡ್ ಆಟಗಾರರು ಒಳ್ಳೆಯವರು. ಅವರ ಮುಂದೆ ಕಣಕ್ಕಿಳಿಯುವಾಗ ನಮ್ಮ ಮನದಲ್ಲಿ ಸೇಡಿನ ಭಾವನೆ ಬರಲು ಸಾಧ್ಯವಿಲ್ಲ. ಆದರೆ, ಸ್ಪರ್ಧಾತ್ಮಕವಾಗಿ ಆಡಿ ಗೆಲ್ಲುವ ಛಲ ಇರುತ್ತದೆ.
-ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್ (ವಿಕೆಟ್‌ಕೀಪಿಂಗ್), ಮನೀಷ್ ಪಾಂಡೆ, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಸ್ಕಾಟ್ ಕಗೆಲಿಜಿನ್, ಕಾಲಿನ್ ಮನ್ರೊ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಟಾಮ್ ಬ್ರೂಸ್, ಡ್ರೈಲ್ ಮಿಚೆಲ್. ಮಿಚೆಲ್ ಸ್ಯಾಂಟನರ್, ಟಿಮ್ ಸೀಫರ್ಟ್ (ವಿಕೆಟ್‌ಕೀಪರ್), ಹಮೀಷ್ ಬೆನೆಟ್, ಈಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್.

ಪಂದ್ಯ ಆರಂಭ: ಮಧ್ಯಾಹ್ನ 12.20.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.