ADVERTISEMENT

RCB ಚಾಂಪಿಯನ್, ಮಹಿಳಾ ವಿಶ್ವಕ‍‍ಪ್ ಕಿರೀಟ: 2025ರ ಕ್ರಿಕೆಟ್‌ನ ಪ್ರಮುಖ ಘಟನೆಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 12:44 IST
Last Updated 18 ಡಿಸೆಂಬರ್ 2025, 12:44 IST
ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ಆಟಗಾರರ ಸಂಭ್ರಮ 
ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ಆಟಗಾರರ ಸಂಭ್ರಮ    

2025 ವರ್ಷ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ವರ್ಷಪೂರ್ತಿ ಈ ವರ್ಷ ಹೇಗಿತ್ತು ಎಂಬುದರ ಬಗ್ಗೆ ಅನೇಕರು ಮೆಲಕು ಹಾಕುತ್ತಾರೆ. ಆದರಂತೆ ಕ್ರಿಕೆಟ್ ಲೋಕದಲ್ಲಿ ಈ ವರ್ಷ ಏನೆಲ್ಲಾ ಘಟನೆಗಳಿಗೆ ಸಾಕ್ಷಿಯಾಯಿತು ಎಂಬುದನ್ನು ನೋಡೋಣ.

ಈ ವರ್ಷ ಭಾರತದ ಕ್ರಿಕೆಟ್‌ನಲ್ಲಿ ಟೆಸ್ಟ್‌ನಲ್ಲಿ ಹಿನ್ನಡೆ ಉಂಟಾಗಿದ್ದು ಹೊರತಾಗಿಯೂ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಭಾರತ ಪುರುಷರ ಹಾಗೂ ಮಹಿಳಾ ತಂಡ ಅಮೋಘ ಸಾಧನೆ ಮಾಡಿದೆ. ಮಾತ್ರವಲ್ಲ, ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಚಾಂಪಿಯನ್ಸ್ ಟ್ರೋಫಿ ಗೆಲುವು:

ADVERTISEMENT

ಭಾರತ ಪುರುಷರ ತಂಡ 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವು ಸಾಧಿಸಿತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿ ಏಕದಿನ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಮಾಡಿತು. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೋಡಿ ಅಮೋಘ ಪ್ರದರ್ಶನ ನೀಡುವ ಮೂಲಕ ಗಮನಸೆಳೆದರು.

18 ವರ್ಷಗಳ ಬಳಿಕ ಟ್ರೋಫಿ ಗೆದ್ದ ಆರ್‌ಸಿಬಿ

ಅಭಿಮಾನಿಗಳ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. 2025ರಲ್ಲಿ ಯುವ ಆಟಗಾರ ರಜತ್ ಪಾಟಿದಾರ್ ತಂಡವನ್ನು ಮುನ್ನಡೆಸಿ ಮೊದಲ ಟ್ರೋಫಿಗೆ ಮುತ್ತಿಟ್ಟರು.

ಐಸಿಸಿ ಮಹಿಳಾ ವಿಶ್ವಕಪ್ ಗೆಲುವು

ಈ ವರ್ಷ ತವರಿನಲ್ಲಿ ಮುಕ್ತಾಯಗೊಂಡ ಐಸಿಸಿ ಮಹಿಳಾ ವಿಶ್ವಕಪ್‌ ಅನ್ನು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್‌ ತಂಡ ಗೆಲ್ಲುವ ಮೂಲಕ ತನ್ನ ಚೊಚ್ಚಲ ಐಸಿಸಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ನೀರಸ ಪ್ರದರ್ಶನ

ದಕ್ಷಿಣ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು. ತವರಿನಲ್ಲೇ ಭಾರತ ತಂಡವನ್ನು 2–0 ಅಂತರದಲ್ಲಿ ಕ್ಲೀನ್ ಸ್ವೀಪ್‌ ಮಾಡಿತು. ಇದುತರಬೇತುದಾರ ಗೌತಮ್ ಗಂಭೀರ್ ವಿರುದ್ಧ ಭಾರತದ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು.

ರೋಹಿತ್–ಕೊಹ್ಲಿ ದಿಢೀರ್ ನಿವೃತ್ತಿ:

ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರರಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರು ಈ ವರ್ಷದ ಆರಂಭದಲ್ಲಿ ನಿವೃತ್ತಿಯಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಏಷ್ಯಾಕಪ್‌ ಗೆದ್ದ ಭಾರತ:

ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ನಡೆದ ಮೂರು ಪಂದ್ಯಗಳು ಸೇರಿದಂತೆ, ಏಷ್ಯಾಕಪ್‌ನಲ್ಲಿ ಒಂದೇ ಒಂದು ಪಂದ್ಯ ಸೋಲು ಕಾಣದೆ ಏಷ್ಯಾ ಕಪ್ ಟಿ20 ಟ್ರೋಫಿ ಗೆದ್ದ ಸಾಧನೆ ಮಾಡಿತು. ಆ ಮೂಲಕ ಏಷ್ಯಾಕಪ್‌ ಅನ್ನು 9ನೇ ಬಾರಿ ಗೆದ್ದ ಸಾಧನೆ ಮಾಡಿತು.

ಐಸಿಸಿ ಟ್ರೋಫಿ ಗೆದ್ದ ದಕ್ಷಿಣ ಆಫ್ರಿಕಾ:

ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಲಾರ್ಡ್ಸ್‌ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿತು. ದಕ್ಷಿಣ ಆಫ್ರಿಕಾ 1998ರ ಚಾಂಪಿಯನ್ಸ್ ಟ್ರೋಫಿ ಬಳಿಕ, ಮೊದಲ ಐಸಿಸಿ ಕಪ್ ಗೆದ್ದ ಸಾಧನೆ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.