ಸಿಡ್ನಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಆಸ್ಟ್ರೇಲಿಯಾ ತಂಡದ ಪ್ರಯತ್ನಕ್ಕೆ ಟೂರ್ನಿಗೆ ಮೊದಲೇ ಹಿನ್ನಡೆಯಾಗಿದೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಗಾಯಾಳಾಗಿ ತಂಡದಿಂದ ಹೊರಬಿದ್ದ ನಂತರ ಇದೀಗ ಇನ್ನೊಬ್ಬ ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ವೈಯಕ್ತಿಕ ಕಾರಣ ನೀಡಿ ತಂಡದಿಂದ ಹಿಂದೆಸರಿದಿದ್ದಾರೆ.
ಕಮಿನ್ಸ್ ಪಾದದ ನೋವಿನಿಂದ ಬಳಲುತ್ತಿದ್ದರೆ, ಹ್ಯಾಜಲ್‌ವುಡ್ ಪಕ್ಕೆಲುಬು ಮತ್ತು ಮೀನಖಂಡದ ನೋವಿಗೆ ಒಳಗಾಗಿ ಲಂಕಾ ಪ್ರವಾಸದಿಂದಲೂ ಹಿಂದೆಸರಿದಿದ್ದರು. ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಿಚೆಲ್ ಮಾರ್ಷ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.
ಬುಧವಾರ ಪ್ರಕಟಿಸಲಾದ 15 ಮಂದಿಯ ತಂಡಕ್ಕೆ ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ನಾಯಕರಾಗಿದ್ದಾರೆ.
ಲಂಕಾ ವಿರುದ್ಧ ಇತ್ತೀಚಿನ ಎರಡು ಟೆಸ್ಟ್‌ಗಳ ಸರಣಿಯಲ್ಲೂ ಕಮಿನ್ಸ್ ಬದಲು ಹಂಗಾಮಿಯಾಗಿ ಸ್ಮಿತ್ ನಾಯಕರಾಗಿದ್ದರು.
ಅನುಭವಿ ಬೌಲರ್‌ಗಳ ಗೈರುಹಾಜರಾಗಿರುವ ಕಾರಣ ವೇಗದ ಬೌಲರ್‌ಗಳಾದ ಸ್ಪೆನ್ಸರ್ ಜಾನ್ಸನ್, ನಥಾನ್ ಎಲ್ಲಿಸ್ ಮತ್ತು ಬೆನ್ ದ್ವಾರ್ಷಿಯಸ್ ಅವರಿಗೆ ಅವಕಾಶಗಳು ತೆರೆದಿವೆ. ಆರನ್ ಹಾರ್ಡಿ ಆಲ್‌ರೌಂಡರ್ ಆಗಿದ್ದು, ಆ್ಯಡಂ ಜಂಪಾ ಅವರಿಗೆ ಬೆಂಬಲವಾಗಿ ಲೆಗ್ ಸ್ಪಿನ್ನರ್ ತನ್ವೀರ್ ಸಂಗಾ ಸ್ಥಾನ ಪಡೆದಿದ್ದಾರೆ.
ಎಂಟು ರಾಷ್ಟ್ರಗಳ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆ. 19ರಿಂದ ಮಾರ್ಚ್ 9ರವರೆಗೆ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿದೆ.
ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಬೆನ್ ದ್ವಾರ್ಷಿಯಸ್, ನೇಥನ್ ಎಲ್ಲಿಸ್, ಜೇಕ್ ಫ್ರೇಸರ್–ಮೆಕ್‌ಗುರ್ಕ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಾಬುಷೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಗಾ, ಮ್ಯಾಥ್ಯೂ ಶಾರ್ಟ್ ಮತ್ತು ಆ್ಯಡಂ ಜಂಪಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.