ADVERTISEMENT

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಅಭ್ಯಾಸ ಆರಂಭ

ಪಿಟಿಐ
Published 4 ಸೆಪ್ಟೆಂಬರ್ 2020, 14:39 IST
Last Updated 4 ಸೆಪ್ಟೆಂಬರ್ 2020, 14:39 IST
ಚೆನ್ನೈ ಸೂಪರ್‌ ಕಿಂಗ್ಸ್–ಪಿಟಿಐ ಚಿತ್ರ
ಚೆನ್ನೈ ಸೂಪರ್‌ ಕಿಂಗ್ಸ್–ಪಿಟಿಐ ಚಿತ್ರ   

ದುಬೈ: ಮೂರು ಸುತ್ತುಗಳ ಕೋವಿಡ್ –19 ಪರೀಕ್ಷೆಯ ನಂತರ ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆಟಗಾರರು ಅಭ್ಯಾಸದ ಕಣಕ್ಕೆ ಇಳಿದರು. ಕಳೆದ ವಾರ ಕೋವಿಡ್ ಸೋಂಕು ದೃಢವಾಗಿರುವ ದೀಪ‍ಕ್ ಚಾಹರ್ ಮತ್ತು ಋತುರಾಜ್ ಗಾಯಕವಾಡ್ ಅವರನ್ನು ಹೊರತುಪಡಿಸಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಎಲ್ಲ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.

ಆಗಸ್ಟ್ 21ರಂದು ಇಲ್ಲಿಗೆ ಬಂದಿಳಿದಿರುವ ತಂಡ ಇಬ್ಬರು ಆಟಗಾರರು ಮತ್ತು ಕೆಲವು ಸಿಬ್ಬಂದಿಗೆ ಕೋವಿಡ್ ಇರುವುದು ದೃಢವಾದ ಕಾರಣ ಅಭ್ಯಾಸ ಆರಂಭಿಸಲು ವಿಳಂಬ ಮಾಡಿತ್ತು. ಹೀಗಾಗಿ ಆರು ದಿನಗಳ ಕ್ವಾರಂಟೈನ್ ನಂತರವೂ ಆಟಗಾರರು ಹೋಟೆಲ್‌ನಲ್ಲೇ ಉಳಿದಿದ್ದರು. ಗುರುವಾರ ಹೆಚ್ಚುವರಿ ಮೂರನೇ ಸುತ್ತಿನ ಪರೀಕ್ಷೆಗೆ ಒಳಗಾಗಿದ್ದರು. ‌

‘ಇಬ್ಬರನ್ನು ಹೊರತುಪಡಿಸಿ ಉಳಿದೆಲ್ಲರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಸೋಂಕು ದೃಢವಾದವರು ಎರಡು ವಾರಗಳ ಪ್ರತ್ಯೇಕತಾವಾಸದಲ್ಲಿ ಇರುತ್ತಾರೆ. ಆ ಅವಧಿ ಮುಗಿದ ನಂತರವೇ ಅವರು ಕಣಕ್ಕೆ ಇಳಿಯಲಿದ್ದಾರೆ’ ಎಂದು ಸಿಎಸ್‌ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್‌.ವಿಶ್ವನಾಥನ್ ತಿಳಿಸಿದರು.

ADVERTISEMENT

ಆಟಗಾರರು ಕೋವಿಡ್‌ ಸೋಂಕಿಗೆ ಒಳಗಾದ ಬೆನ್ನಲ್ಲೇ ಸುರೇಶ್ ರೈನಾ ‘ವೈಯಕ್ತಿಕ’ ಕಾರಣ ನೀಡಿ ತಾಯ್ನಾಡಿಗೆ ಮರಳಿದ್ದು ಸಿಎಸ್‌ಕೆ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಇದೀಗ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದರಿಂದ ತಂಡ ನಿಟ್ಟುಸಿರು ಬಿಟ್ಟಿದೆ. ದೀಪಕ್, ಋತುರಾಜ್ ಮತ್ತು 11 ಸಿಬ್ಬಂದಿಯ 14 ದಿನಗಳ ಪ್ರತ್ಯೇಕತಾವಾಸ ಮುಂದಿನ ವಾರದ ಕೊನೆಯಲ್ಲಿ ಮುಗಿಯಲಿದೆ. ತರಬೇತಿಗೆ ಹಾಜರಾಗುವ ಮುನ್ನ ಅವರನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.