ADVERTISEMENT

IPL-2020 | ಧೋನಿ ಬಳಗಕ್ಕೆ ರಾಯಲ್ಸ್ ಸವಾಲು

ಜೋಸ್ ಬಟ್ಲರ್‌, ಬೆನ್ ಸ್ಟೋಕ್ಸ್ ಅನುಪಸ್ಥಿತಿ * ಸ್ಟೀವ್ ಸ್ಮಿತ್ ಆಡುವುದು ಸಂದೇಹ * ಉತ್ಸಾಹದಲ್ಲಿ ಸಿಎಸ್‌ಕೆ ತಂಡ

ಪಿಟಿಐ
Published 21 ಸೆಪ್ಟೆಂಬರ್ 2020, 22:43 IST
Last Updated 21 ಸೆಪ್ಟೆಂಬರ್ 2020, 22:43 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   
""

ಶಾರ್ಜಾ: ಕಳೆದ ಬಾರಿ ಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಮೊದಲ ಪಂದ್ಯದಲ್ಲಿ ಪ್ರತೀಕಾರ ತೀರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದೆ.

12ನೇ ಆವೃತ್ತಿಯ ಫೈನಲ್‌ನಲ್ಲಿ ಒಂದು ರನ್‌ ಅಂತರದಿಂದ ಮುಂಬೈ ಇಂಡಿಯನ್ಸ್‌ಗೆ ಮಣಿದಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಿಎಸ್‌ಕೆ ಶನಿವಾರ ನಡೆದ ಈ ಬಾರಿಯ ಉದ್ಘಾಟನಾ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿಕೊಂಡಿತ್ತು.

ರಾಜಸ್ಥಾನ್ ರಾಯಲ್ಸ್‌ಗೆ ಈ ಆವೃತ್ತಿಯಲ್ಲಿ ಇದು ಮೊದಲ ಪಂದ್ಯ. ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಸ್ಫೋಟಕ ಬ್ಯಾಟ್ಸ್‌ಮನ್‌ ಜೋಸ್ ಬಟ್ಲರ್‌ ಅವರ ಅನುಪಸ್ಥಿತಿ ಮತ್ತು ನಾಯಕ ಸ್ಟೀವ್ ಸ್ಮಿತ್ ಅವರ ಲಭ್ಯತೆ ಬಗೆಗಿನ ಸಂದೇಹ ತಂಡಕ್ಕೆ ತಲೆನೋವಾಗಿದೆ.

ADVERTISEMENT

ಕುಟುಂಬದ ಜೊತೆ ಪ್ರತ್ಯೇಕವಾಗಿ ಇಲ್ಲಿಗೆ ಬಂದಿರುವುದರಿಂದ ಬಟ್ಲರ್ ಆರು ದಿನಗಳ ಪ‍್ರತ್ಯೇಕವಾಸದಲ್ಲಿರಬೇಕಾಗಿದೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಸಂದರ್ಭದಲ್ಲಿ ತಲೆಗೆ ಪೆಟ್ಟು ಬಿದ್ದಿರುವ ಸ್ಟೀವ್ ಸ್ಮಿತ್ ಗುಣಮುಖರಾಗಿರುವುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ. ಆಸ್ಟ್ರೇಲಿಯಾ ತಂಡದ ವೈದ್ಯಕೀಯ ತಂಡದ ಅನುಮತಿ ಸಿಕ್ಕಿದರೆ ಮಾತ್ರ ಅವರು ಮೊದಲ ಪಂದ್ಯ ಆಡಲಿದ್ದಾರೆ.

ಅನಾರೋಗ್ಯಪೀಡಿತರಾಗಿರುವ ತಂದೆಯ ಜೊತೆ ಇರುವುದಕ್ಕಾಗಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನ್ಯೂಜಿಲೆಂಡ್‌ಗೆ ತೆರಳಿದ್ದು ಮೊದಲ ಕೆಲವು ಪಂದ್ಯಗಳಿಗೆ ಲಭ್ಯ ಇರುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.

ರಾಯಲ್ಸ್‌ ತಂಡ ವಿದೇಶಿ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಪ್ರಮುಖ ಮೂವರ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯಕ್ಕೆ ಇಳಿದರೆ ಬಲಿಷ್ಠ ಸಿಎಸ್‌ಕೆಯನ್ನು ಮಣಿಸುವುದು ಸುಲಭವಾಗಲಾರದು. ಇಂಗ್ಲೆಂಡ್‌ನ ಜೊಫ್ರಾ ಆರ್ಚರ್‌, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್‌ ಮತ್ತು ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ ಮೇಲೆ ಸದ್ಯ ತಂಡ ನಿರೀಕ್ಷೆ ಇರಿಸಿಕೊಂಡಿದೆ. ಭಾರತದ ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ಜಯದೇವ ಉನದ್ಕತ್, ವರುಣ್ ಆ್ಯರನ್ ಮುಂತಾದವರು ಹಿಂದಿನ ಆವೃತ್ತಿಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಿರಲಿಲ್ಲ. ಹೀಗಾಗಿ ಅವರ ಮೇಲೆಯೂ ಭಾರಿ ಹೊಣೆ ಇದೆ.

ಭರವಸೆಯಲ್ಲಿ ಸಿಎಸ್‌ಕೆ
ಚೆನ್ನೈ ಸೂಪರ್ ಕಿಂಗ್ಸ್ ಈಗ ಭರವಸೆಯಲ್ಲಿದೆ. ಮೊದಲ ಪಂದ್ಯದಲ್ಲಿ ಸ್ಯಾಮ್ ಕರನ್ ಆಲ್‌ರೌಂಡ್ ಆಟವಾಡಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಗಾಯಾಳು ಡ್ವೇನ್‌ ಬ್ರಾವೊ ಅವರ ಅನುಪಸ್ಥಿತಿ ತಂಡವನ್ನು ಕಾಡಲಿಲ್ಲ. ಅಂಬಟಿ ರಾಯುಡು ಮತ್ತು ಫಾಫ್ ಡು ಪ್ಲೆಸಿ ಅವರು ಗುರಿ ಬೆನ್ನತ್ತುವ ಸವಾಲನ್ನು ಸುಲಭವಾಗಿ ಮೀರಿನಿಂತಿದ್ದರು. ಐಪಿಎಲ್‌ನ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾದ ಪೀಯೂಷ್ ಚಾವ್ಲಾ ಉತ್ತಮ ಲಯದಲ್ಲಿದ್ದಾರೆ. ದೀಪಕ್ ಚಾಹರ್ ಮೊದಲ ಪಂದ್ಯದಲ್ಲಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲಿಲ್ಲ. ಎರಡನೇ ಪಂದ್ಯಕ್ಕೆ ಅವರನ್ನು ಪರಿಗಣಿಸದೇ ಇದ್ದರೆ ಶಾರ್ದೂಲ್ ಠಾಕೂರ್‌ಗೆ ಅವಕಾಶ ಸಿಗುವುದು ಖಚಿತ.

ತಂಡಗಳು

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ (ನಾಯಕ,ವಿಕೆಟ್ ಕೀಪರ್), ಮುರಳಿ ವಿಜಯ್‌, ಅಂಬಟಿ ರಾಯುಡು, ಫಾಫ್‌ ಡು ಪ್ಲೆಸಿ, ಶೇನ್ ವ್ಯಾಟ್ಸನ್‌, ಕೇದಾರ್ ಜಾಧವ್, ಡ್ವೇನ್ ಬ್ರಾವೊ, ರವೀಂದ್ರ ಜಡೇಜ, ಲುಂಗಿ ಗಿಡಿ, ದೀಪಕ್ ಚಾಹರ್‌, ಪೀಯೂಷ್ ಚಾವ್ಲಾ, ಇಮ್ರಾನ್ ತಾಹಿರ್‌, ಮಿಷೆಲ್ ಸ್ಯಾಂಟನರ್, ಜೋಶ್‌ ಹ್ಯಾಜಲ್‌ವುಡ್‌, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಎನ್‌.ಜಗದೀಶನ್‌, ಕೆ.ಎಂ.ಆಸಿಫ್‌, ಮೋನು ಕುಮಾರ್, ಆರ್‌.ಸಾಯಿ ಕಿಶೋರ್‌, ಋತುರಾಜ್ ಗಾಯಕವಾಡ್, ಕರ್ಣ ಶರ್ಮಾ.

ರಾಜಸ್ಥಾನ್‌ ರಾಯಲ್ಸ್‌: ಸ್ಟೀವ್ ಸ್ಮಿತ್‌ (ನಾಯಕ), ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್‌, ಜೊಫ್ರಾ ಆರ್ಚರ್‌, ಯಶಸ್ವಿ ಜೈಸ್ವಾಲ್‌, ಮನನ್‌ ವೋಹ್ರಾ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್‌, ಒಶೇನ್ ಥಾಮಸ್‌, ಆ್ಯಂಡ್ರ್ಯೂ ಟೈ, ಡೇವಿಡ್ ಮಿಲ್ಲರ್‌, ಟಾಮ್ ಕರನ್‌, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್‌, ರಿಯಾನ್ ಪರಾಗ್‌, ವರುಣ್ ಆ್ಯರನ್‌, ಶಶಾಂಕ್‌ ಸಿಂಗ್‌, ಅನುಜ್‌ ರಾವತ್‌, ಮಹಿಪಾಲ್ ಲೊಮ್ರಾರ್‌, ಮಯಂಕ್‌ ಮಾರ್ಖಂಡೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ ಫಲಿತಾಂಶ

ಪಂದ್ಯಗಳು- 21

ಚೆನ್ನೈ ಜಯ -14

ರಾಜಸ್ಥಾನ್ ಜಯ- 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.