ಮ್ಯಾಂಚೆಸ್ಟರ್ (ಎಎಫ್‌ಪಿ): ಕೊರೊನಾ ವೈರಾಣು ಹಾವಳಿಯ ಕಾಲದಲ್ಲಿ ತಾನು ಆಡಿದ ಮೊದಲ ಟೆಸ್ಟ್ ಪಂದ್ಯ ಗೆದ್ದು ಅವಿಸ್ಮರಣೀಯವಾಗಿಸಿಕೊಳ್ಳುವ ಪಾಕಿಸ್ತಾನದ ಕನಸಿಗೆ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಅಡ್ಡಿಯಾದರು.
ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ನಾಲ್ಕನೇ ದಿನ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದ ಇವರಿಬ್ಬರು ಸೋಲಿನ ಸುಳಿಯಲ್ಲಿ ಸಿಲುಕಿದ್ದ ಇಂಗ್ಲೆಂಡ್ ತಂಡ ಮೂರು ವಿಕೆಟ್‌ಗಳ ಜಯ ಗಳಿಸಲು ನೆರವಾದರು.
277 ರನ್‌ಗಳ ಜಯದ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಒಂದು ಹಂತದಲ್ಲಿ 117 ರನ್‌ಗಳಿಗೆ ಐದು ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಜೊತೆಯಾದ ಬಟ್ಲರ್ (75; 101 ಎಸೆತ, 1 ಸಿಕ್ಸರ್, 7 ಬೌಂಡರಿ) ಮತ್ತು ವೋಕ್ಸ್ (ಔಟಾಗದೆ 84; 120 ಎ, 10 ಬೌಂ) ಆರನೇ ವಿಕೆಟ್‌ಗೆ 139 ರನ್‌ಗಳ ಜೊತೆಯಾಟವಾಡಿದರು.
ಗೆಲುವಿಗೆ 21 ರನ್ ಬೇಕಾಗಿದ್ದಾಗ ಯಾಸಿರ್ ಶಾ ಹೆಣೆದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಟ್ಲರ್ ಸಿಲುಕಿದರು. ಆದರೆ ವೋಕ್ಸ್ ಪಟ್ಟು ಬಿಡದೆ ಆಡಿದರು. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ಪಾಕಿಸ್ತಾನದ ಲೆಗ್‌ಸ್ಪಿನ್ನರ್ ಯಾಸೀರ್ ಶಾ ಎರಡನೇ ಇನಿಂಗ್ಸ್‌ಲ್ಲಿಯೂ ನಾಲ್ಕು ವಿಕೆಟ್ ಗಳಿಸಿದರು. ಶಾಹಿನ್ ಅಫ್ರಿದಿ, ಮೊಹಮ್ಮದ್ ಅಬ್ಬಾಸ್ ಮತ್ತು ನಸೀಮ್ ಶಾ ತಲಾ ಒಂದೊಂದು ವಿಕೆಟ್ ಗಳಿಸಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಬಟ್ಲರ್ ಮತ್ತು ವೋಕ್ಸ್ ಛಲದ ಮುಂದೆ ಪಾಕಿಸ್ತಾನದ ಶ್ರಮವೆಲ್ಲವೂ ವ್ಯರ್ಥವಾಯಿತು. ಬಟ್ಲರ್ ಔಟಾದ ಬಳಿಕ ಸ್ಟುವರ್ಟ್ ಬ್ರಾಡ್ ವೇಗದಲ್ಲಿ ರನ್ ಗಳಿಸಲು ಪ್ರಯತ್ನಿಸಿ ಬೇಗನೇ ವಿಕೆಟ್ ಕಳೆದುಕೊಂಡರು. ಆದರೂ ವೋಕ್ಸ್ ಎದೆಗುಂದಲಿಲ್ಲ. 83ನೇ ಓವರ್‌ನಲ್ಲಿ ಗೆಲುವಿನ ರನ್ ಅವರ ಬ್ಯಾಟಿನಿಂದಲೇ ಬಂತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 326, ಇಂಗ್ಲೆಂಡ್: 219. ಎರಡನೇ ಇನಿಂಗ್ಸ್: ಪಾಕಿಸ್ತಾನ: 46.4 ಓವರ್‌ಗಳಲ್ಲಿ 169, ಇಂಗ್ಲೆಂಡ್: 82.1 ಓವರ್‌ಗಳಲ್ಲಿ 7ಕ್ಕೆ 277 (ಡಾಮ್ನಿಕ್ ಸಿಬ್ಲಿ 36, ಜೋ ರೂಟ್ 42, ಜೋಸ್ ಬಟ್ಲರ್ 75, ಕ್ರಿಸ್ ವೋಕ್ಸ್ ಔಟಾಗದೆ 84; ಶಾಹೀನ್ ಆಫ್ರಿದಿ 61ಕ್ಕೆ1, ಮೊಹಮ್ಮದ್ ಅಬ್ಬಾಸ್ 36ಕ್ಕೆ1, ನಸೀಮ್ ಶಾ 45ಕ್ಕೆ1, ಯಾಸೀರ್ ಶಾ 99ಕ್ಕೆ4).
ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ ಮೂರು ವಿಕೆಟ್‌ಗಳ ಗೆಲುವು.
ಪಂದ್ಯಶ್ರೇಷ್ಠ: ಕ್ರಿಸ್ ವೋಕ್ಸ್
ಮುಂದಿನ ಪಂದ್ಯ: ಆಗಸ್ಟ್ 13ರಿಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.