ಬೆಂಗಳೂರು: ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ತೆಲುಗು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.
ಟಾಲಿವುಡ್ ನಟ ನಿತಿನ್ ಅಭಿನಯದ ‘ರಾಬಿನ್‌ಹುಡ್’ ಚಿತ್ರದಲ್ಲಿ ವಾರ್ನರ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಾರ್ನರ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ‘ಮೈದಾನದಲ್ಲಿ ಮಿಂಚಿದವರು ಬೆಳ್ಳಿ ತೆರೆಯ ಮೇಲೆ ಮಿಂಚುವ ಕಾಲ ಬಂದಿದೆ’ ಎಂದು ಬರೆದುಕೊಂಡಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಾರ್ನರ್, ‘ಚಿತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆ’ ಎಂದು ಹೇಳಿದ್ದಾರೆ.
ವೆಂಕಿ ಕುಡುಮುಲ ನಿರ್ದೇಶನದ ‘ರಾಬಿನ್‌ಹುಡ್’ ಚಿತ್ರವನ್ನು ‘ಮೈತ್ರಿ ಮೂವಿ ಮೇಕರ್ಸ್’ ನಿರ್ಮಿಸುತ್ತಿದೆ. ನಾಯಕನ ಪಾತ್ರದಲ್ಲಿ ನಿತಿನ್ ಮತ್ತು ನಾಯಕಿಯಾಗಿ ‘ಪುಷ್ಪ–2’ ಖ್ಯಾತಿಯ ಶ್ರೀಲೀಲಾ ನಟಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಮಾರ್ಚ್ 28ಕ್ಕೆ ತೆರೆ ಮೇಲೆ ಬರಲಿದೆ.
‘ಭೀಷ್ಮಾ’ ಯಶಸ್ವಿನ ನಂತರ ವೆಂಕಿ ಕುಡುಮುಲ ಅವರು ನಿತಿನ್ ಅವರಿಗೆ ಎರಡನೇ ಬಾರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕೋವಿಡ್–19 ಲಾಕ್‌ಡೌನ್ ಸಮಯದಲ್ಲಿ ಟಿಕ್‌ಟಾಕ್ ವಿಡಿಯೊ ಮೂಲಕ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದ ವಾರ್ನರ್ ಅವರಿಗೆ ದೇಶದಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ‘ಪುಷ್ಪ’ ಸೇರಿದಂತೆ ಹಲವು ಚಿತ್ರಗಳ ‘ಹುಕ್ ಸ್ಟೆಪ್’ಗಳಿಗೆ ಹೆಜ್ಜೆ ಹಾಕುವ ಮೂಲಕ ತೆಲುಗು ಚಿತ್ರರಂಗದ ಮೇಲಿನ ಪ್ರೀತಿಯನ್ನು ಅವರು ಆಗಾಗ್ಗೆ ವ್ಯಕ್ತಪಡಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.